Popular Posts

Saturday, May 21, 2011

"ಒಲವೇ ಪೂಜೆ, ಇದುವೆ ಅವರ ರಸಜೀವನದ ಓಜೆ"

"ಒಲವೇ ಪೂಜೆ, ಇದುವೆ ಅವರ ರಸಜೀವನದ ಓಜೆ"
ಸೂಫೀ ಪ್ರೇಮ ಕಾವ್ಯ
           ಈ ಮೊದಲು ನಾನು ಡಿ.ವಿ.ಜಿ ಯವರ ಅನುವಾದಿಸಿರುವ ಉಮರನ ಒಸುಗೆಯಲ್ಲಿ ಉಮರ‍್ ಖಯ್ಯಾಂ ಕೆಲವೊಂದು ರುಬಾಯಿಗಳನ್ನು ಡಿ.ವಿ.ಜಿಯವರ ಕೃತಿ ಶ್ರೇಣಿಯಲ್ಲಿ ಓದಿದ್ದ ನೆನಪನ್ನು ಬಿಟ್ಟರೆ ನನ್ನ ಪೀಳಿಗೆಯವರಿಗೆ ಇದನ್ನೆಲ್ಲ ಓದಿ ಅರಗಿಸಿಕೊಳ್ಳುವುದು ದೊಡ್ಡ ಮಾತು ಎಂದು ಅಲ್ಲಿಗೆ ಕೈಬಿಟ್ಟಿದೆ. ಆದರೆ ಇತ್ತೀಚಿಗೆ ಜೋಗಿಯವರ ಸೂಫಿ ಕಥೆಗಳನ್ನು ಓದಲು ಪ್ರಾರಂಭಿಸುತ್ತಿದ್ದಂತೆ ಸೂಫಿ ಕಥೆಗಳಲ್ಲಿನ ಅಂತ:ಶಕ್ತಿ ಹೊಸ ಅನುಭವವನ್ನು ನೀಡಿತು. ಆದ್ದರಿಂದ ಸೂಫಿ ಕಥೆಗಳ ಪುಸ್ತಕವನ್ನು ಓದಿದ ಮೇಲೆ  ಮೊದಲು ಸೂಫೀ ಸಾಹಿತ್ಯದ ಬಗ್ಗೆ ತಿಳಿದು ಕೊಳ್ಳಬೇಕೆಂಬ ಆಸೆ ಶುರುವಾಯಿತು. ಆಗ ನಾನು ನನ್ನ ದೊಡ್ಡಪ್ಪನ ಹತ್ತಿರ ಈ ಬಗ್ಗೆ ಕೇಳಿದಾಗ ಮ.ಸು.ಕೃಷ್ಣಮೂರ್ತಿಯವರ ಸೂಫೀ ಪ್ರೇಮ ಕಾವ್ಯ ಪುಸ್ತಕ  ಮನೆಯಲ್ಲಿ ಇದೆ ಅದನ್ನು ಒಮ್ಮೆ ಓದು ನಿನಗೆ ಸೂಫೀ  ಸಾಹಿತ್ಯ ಎಲ್ಲಿ ಹುಟ್ಟಿತು ಎಂಬ ಬಗ್ಗೆ ನಿನಗೆ ಮಾಹಿತಿ ಸಿಗುತ್ತದೆ ಎಂದು ಹೇಳಿದರು. ನಾನು ಓದಲು ಶುರವಾದಂತೆ ನನಗೆ  ಮನಸ್ಸಿಗೆ ತುಂಬಾ ಹತ್ತಿರವಾಗುವಂತಹ ವಿಚಾರದೊಂದಿಗೆ ಪುಸ್ತಕ ಇಷ್ಟವಾಗುತ್ತ ಹೋಯಿತು. ಆದ್ದರಿಂದ ಈ ಸೂಫೀ ಪ್ರೇಮ ಕಾವ್ಯದ ಪುಸ್ತಕದಲ್ಲಿ ಬರುವ ಕೆಲವೊಂದು ವಿಷಯಗಳನ್ನು  ತಿಳಿಸುವ ಪ್ರಯತ್ನ ಇಲ್ಲಿದೆ.
          ಸೂಫೀ ಸಂತರ ಬಗ್ಗೆ ಓದಲು ಶುರುಮಾಡಿದಾಗ   ಒಂದೊಂದು ವಿಶೇಷ ಅರ್ಥದಲ್ಲಿ  ಒಲವೇ ಪೂಜೆ, ಇದುವೆ ಅವರ ರಸಜೀವನದ ಓಜೆ. ಒಲವೇ ತಮ್ಮ ಬದುಕಾಗಿ ಉಳ್ಳ ಈ ಸೂಫೀ ಸಂತರು ಅರೇಬಿಯಾದ ಮರುಭೂಮಿಯಲ್ಲಿ ಪ್ರೇಮದ ಹುಚ್ಚು ಹೊಳೆಯನ್ನು ಹರಿಸಿದವರು. ಒಮ್ಮೆ ಸೂಫೀ ಸಂತ ರಮಣಿ ರಬಿಯಾಳನ್ನು ಯಾರೋ ಕೇಳಿದರಂತೆ " ನೀನು ದೇವರನ್ನು  ಪ್ರೀತಿಸುವೆಯಾ?" ಎಂದು ಹೌದು , ಪ್ರೀತಿಸುತ್ತೇನೆ ಎಂದು ಅವಳು ಹೇಳಿದಳಂತೆ " ಹಾಗಾದರೆ ಸೈತಾನನ್ನು ದ್ವೇಷಿಸುವೆಯಾ? ಅದಕ್ಕೆ ಅವಳು ಹೇಳಿದಳಂತೆ " ನನ್ನ ಹೃದಯದಲ್ಲಿ ಪ್ರೇಮ ಎಷ್ಟೊಂದು ತುಂಬಿ ತುಳುಕಾಡುತ್ತಿದೆಯೆಂದರೆ ಅದರಲ್ಲಿ ಇತರರನ್ನು ದ್ವೇಷಿಸಲು ಜಾಗವೇ ಇಲ್ಲ ಎಂದು.
          ಇಸ್ಲಾಮಿನ ಒಡಲಿನಿಂದ ಮೂಡಿದ ಈ ಧರ್ಮ ಧರ್ಮಾಂಧರ ದುರಾಗ್ರಹಕ್ಕೆ ಸಿಲುಕಿ ನಲುಗಿತು. ಇದರಿಂದ ಹಲವಾರು ಸೂಫಿ ಕವಿಗಳು ತಲೆದಂಡ ತೆತ್ತರು. ನೋವೇ ಅವರ ಹೃದಯದ ಹಾಡಾಗಿ, ಹೂವಾಗಿ ಅರಳಿ ಇಡೀ ಇರಾನಿ ಸಾಹಿತ್ಯದಲ್ಲಿ ಅದು ಘಮಘಮಸಿತು. ಸೂಫೀ ಸಂತರ ವೇದನೆ ನಿವೇದನೆಗಳಿಂದ ಇಡೀ ಫಾರಸೀ ಸಾಹಿತ್ಯ  ಪ್ರಖ್ಯಾತವಾಗಿದೆ. ಇಸ್ಲಾಮಿನೊಂದಿಗೆ ಸೂಫೀ ಸಾಹಿತ್ಯ ಭಾರತಕ್ಕೆ ಬಂದು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ  ಅರಬ್, ಇರಾನ್ ಮತ್ತು ಭಾರತ ಸೂಫೀ ಸಾಹಿತ್ಯದ ಪ್ರಮುಖಸ್ಧಾನಗಳೆಂದು ಕರೆಯಲಾಯಿತು. ಸೂಫೀ ಸಾಹಿತ್ಯ ಹಿಂದಿ, ಬೆಂಗಾಳಿ, ಉರ್ದುವಿನಲ್ಲಿ ಹೊಸತೊಂದು ಆಯಾಮವನ್ನು ಸೃಷ್ಟಿಮಾಡಿತು. ಈ ಸೂಫೀ ಪ್ರೇಮದ ಮಹಾಪೂರವನ್ನು ಇಮ್ಮಡಿಗೊಳಿಸಿತು. ಈ ಸೂಫೀ ಪ್ರೇಮ ಕಾವ್ಯದ ಬಗ್ಗೆ  ಓದಬೇಕಾದರೆ  ಮೊದಲನೆಯದು ಸೂಫೀ ಧರ್ಮ, ದರ್ಶನ ಮತ್ತು ಅದರ ಹುಟ್ಟು ಬೆಳವಣಿಗೆಯ ಇತಿಹಾಸವನ್ನು ತಿಳಿದುಕೊಳ್ಳಬೇಕು. ಇರಾನಿನ ಖ್ಯಾತ ಸೂಫೀ ಸಂತರಾದ ಸನಾಯ, ಅತ್ತಾರ‍್, ಶಬ್‌ಸತರಿ, ಉಮರ‍್ ಖಯ್ಯಾಂ,ಶೇಕ್ ಸಾದಿ ರೂಮಿಜಾಮಿ ಮತ್ತು ಹಾಫಿಜ್  ಹಾಗೂ ಭಾರತೀಯ ಸೂಫೀ ಸಾಹಿತ್ಯದಲ್ಲಿ ಹಿಂದಿಯ ಸೂಫೀ ಕವಿ ಮಲಿಕ್ ಮಹಮದ್ ಜಾಯಸಿಯ, ಅಮೀರ‍್ ಖಸ್ರೋ ಹೀಗೆ ಹಲವಾರು ಸೂಫೀ ಸಂತರ ವಿಶ್ವದಲ್ಲಿ ಸೂಫೀ ಸಾಹಿತ್ಯವನ್ನು ಪ್ರವರ್ಧಮಾನಕ್ಕೆ ತಂದಂತಹ ಮಹಾಪುರುಷರು.
          ಸೂಫೀ ಶಬ್ದದ ಉತ್ಪತ್ತಿ  ಹಜರತ್ ಮಹಮದರು ತೀರಿಕೊಂಡ ಇನ್ನೂರು ವರ್ಷದ ನಂತರ ಆಸ್ತಿತ್ವಕ್ಕೆ ಬಂದಂತೆ  ಕಾಣುತ್ತದೆ. ಸೂಫೀ ಎಂದರೆ ಕೆಲವರ ಪ್ರಕಾರ ಮದೀನಾದಲ್ಲಿ ಮಸೀದಿಯೆದುರಿಗೆ ಒಂದು ಜಗುಲಿ "ಸುಫ್ವಾ" ಇತ್ತು ಅದರ ಮೇಲೆ ಕುಳಿತುಕೊಳ್ಳುತ್ತಿದ್ದ ಫಕೀರರೇ ಸೂಫೀಗಳು ಎಂದು ಇನ್ನೊಂದು ಮತದ ಪ್ರಕಾರ ಸೂಫಾ ಎಂದರೆ " ಪಂಕ್ತಿ" "ಸಾಲು" ಎಂದರ್ಥ "ಸಾಫ್" ಎಂದರೆ ಚೊಕ್ಕಟ ಅಥವ ಶುದ್ದ ಎಂಬ ಶಬ್ದದಿಂದ ಬಂದಿದೆ. ಹಾಗೂ ಸೂಫೀ ಸಂತರು ಶುಭ್ರ ಜೀವನ ನಡೆಸುತ್ತಿದ್ದರಿಂದ ಅವರು ಸೂಫೀ ಎನಿಸಿಕೊಂಡರು. ಆದರೆ ಮತ್ತೊಂದು ಮತದ ಪ್ರಕಾರ ಸೂಫೀ ಶಬ್ದ "ಸೋಫಿಯಾ" "ಸೋಫೋ ಎಂದರೆ ಜ್ಞಾನ ಎಂದು ಇವರ ಜ್ಞಾನದಿಂದಾಗಿಯೇ ಇವರನ್ನು ಸೂಫೀ ಎಂದು ಕರೆಯುತ್ತಿದ್ದರು.   ಆದರೆ ಜನಾಭಿಪ್ರಾಯದ ಪ್ರಕಾರ ಸೂಫೀ ಶಬ್ದ "ಸೂಫ್" ಎಂದರೆ  ಉಣ್ಣೆ  ಎಂಬ ಶಬ್ದದಿಂದ ಬಂದಿದೆ. ಸೂಫೀ ಸಂತರು ಉಣ್ಣೆಯ ಟೋಪಿಯನ್ನು, ಕಂಬಳಿಯನ್ನು ಹೆಚ್ಚಾಗಿ ತೊಡುತ್ತಿದ್ದರಿಂದ "ಸೂಫೀ ಎಂದು ಹೆಸರು ಬಂದಿತೆಂದು ಪ್ರತಿತೀ ಇದೆ.
          ಸೂಫೀ ಮತದ ಬಗ್ಗೆ ಹಲವಾರು ವಾಖ್ಯಾನಗಳು ಇವೆ. "ಕೇವಲು ಪರಮಾತ್ಮನಿಗೆ ತಿಳಿಯಬಲ್ಲ ಕಾರ್ಯಗಳನ್ನು ಪ್ರತಿಪಾದಿಸುವ, ಮತ್ತು ಯಾವಾಗಲೂ ಪರಮಾತ್ಮನ ಜೊತೆಯಲ್ಲಿ ಪರಮಾತ್ಮನಿಗೆ ಮಾತ್ರ ಬಲ್ಲ ರೀತಿಯಲ್ಲಿ ಜೀವಿಸುವವನೇ ಸೂಫೀ.
          ಸೂಫೀ ಮತ ಪೂರ್ಣವಾಗಿ ಆತ್ಮಾನುಶಾಸನ. ಯಾವುದೇ ವಸ್ತುವಿನ ಮೇಲೆ ಅಧಿಕಾರವನ್ನು ಹೊಂದದಿರುವುದು ಮತ್ತು ಯಾವುದೇ ವಸ್ತುವಿನ ಅಧಿಕಾರಕ್ಕೆ ಒಳಪಡಿದಿರುವುದೇ ಸೂಫೀ ಮತ.
          " ನಿನ್ನ ತಲೆಯಲ್ಲಿರುವುದನ್ನೂ ತೆಗೆದು ಹೊರಗೆ ಹಾಕುವುದು, ನಿನ್ನ ಕೈಯಲ್ಲಿರುವುದನ್ನೂ ತೆಗೆದು ಇತರರಿಗೆ ಕೊಟ್ಟು ಬಿಡುವುದು,ಮತ್ತು ನಿನ್ನ ಮೇಲೆ ಘಟಿಸುವ ಎಲ್ಲ ಘಟನೆಗಳಿಂದಲೂ ದೂರ ಸರಿಯುವುದೇ ಸೂಫೀ ಮತ.
          ಹೀಗೆ ಹಲವಾರು ವಿಚಿನ್ನ ಅರ್ಥಗಳನ್ನು ನೀಡುವ ಒಂದು ಶಬ್ದ ಸೂಫೀ ಮತ. ಈ ಸೂಫೀಗಳಲ್ಲಿ ಯಾವುದೇ ವಿಶೇಷ ವರ್ಗಗಳಿಲ್ಲ, ಯಾವುದೇ ನಿಯಮ ಬದ್ದ, ಕಟ್ಟಪಾಡುಗಳಿಲ್ಲ ಇವರ ಮಾರ್ಗಗಳು ಅನಂತ. ಒಂದೇ ಮಾತಿನಲ್ಲಿ ಹೇಳುವುದಾದರೆ "ಚೆಲುವೆ ದೇವರು ಒಲವೇ ಪೂಜೆ" ಇದೇ  ತಮ್ಮ ಬದುಕಾಗಿರುವ ಜನ ಸೂಫೀಗಳು.
          ಈ ರೀತಿ ಸೂಫೀಗಳು  ಪರಮಾತ್ಮನೊಡನೆ ಪ್ರೀತಿಯಿಂದ ಸಂಬಂಧವನ್ನು ಸ್ಧಾಪಿಸಿ ಉಪಾಸನೆ ಮಾಡುವ ಅನುಭವಿ ಮುಸಲ್ಮಾನರ ಉದಾರ ವರ್ಗವನ್ನು ಸೂಫೀ ಎಂದು ಕರೆಯಬಹುದು. ಮುಸ್ಮಿಂ ಅನುಭವವನ್ನು "ತಸವ್ವುಫ್" ಇಲ್ಲವೆ ಸೂಫೀ ಧರ್ಮ ಎಂದು ಕರೆಬಹುದು. ಸೋಫಿಯ, ಸೂಫಿ ಹಾಗೂ ಸಂಸ್ಕ್ರತದ "ಸ್ವಭಾಸ"  ಶಬ್ದಗಳ ನಡುವೆ ತುಂಬ ಹೋಲಿಕೆ ಇದೆ.
          ಸೂಫೀ ಮತವನ್ನು ಅರಿಯಬೇಕಾದರೆ  ಮೊದಲು  ಇಸ್ಲಾಮ್ ದೇಶಗಳಾದ ಅರಬ್ ಮತ್ತು ಇರಾನಿನ ಹಿನ್ನೆಲೆಯನ್ನು ಅರಿಯಬೇಕಾಗುತ್ತದೆ. ಅರಬ್ ಮತ್ತು ಇರಾನಿನ ಸಂಸ್ಕಾರ ಮತ್ತು ನಂಬಿಕೆಗಳು ತುಂಬ ಭಿನ್ನ ಭೌಗೋಳಿಕ ಪರಿಸ್ಧಿತಿಯಿಂದಾಗಿ ಅರಬರಲ್ಲಿ ಪ್ರಜಾತಾಂತ್ರಿಕವಾದ ಭಾವನೆಗಳು ಪ್ರಾಬಲ್ಯ ಹೆಚ್ಚು. ಇರಾನಿನಲ್ಲಿ ಇದಕ್ಕೆ ತದ್ವಿರುದ್ದ  ಭಾರತೀಯರಂತೆ ಇರಾನಿಗಳು ರಾಜ ಪರಮಾತ್ಮನ ಪ್ರತಿನಿಧಿ ಎಂದು ನಂಬಿದ್ದರು. ಅರಬ್ ಮತ್ತು ಇರಾನಿನ ನಡುವೆ ಹಿಂದಿನಿಂದಲೂ ಸಂಬಂಧವೇನೊ ಇತ್ತು. ಆದರೆ ಎರಡು ದೇಶಗಳ ಇತಿಹಾಸ ಭಿನ್ನವಾಗಿತ್ತು. ಆದರೆ ಅರೇಬಿಯಾದಲ್ಲಿ ಎರಡು ಭಿನ್ನ ಪ್ರಕೃತಿಯ ಸಂಸ್ಕಾರದ ಜನ ಇದ್ದಾರೆ ಈ ಭಿನ್ನತೆಯ ಮೂಲ ಅವರ ಭೌಗೋಳಿಕ ಸ್ಧಿತಿ. ಇಡೀ ಅರೇಬಿಯಾದ ನಿವಾಸಿಗಳೆಲ್ಲ ಒಂದೇ ಜನಾಂಗದವರಾಗಿದ್ದರೂ ಉತ್ತರ ಅರೇಬಿಯಾದವರ ಜೀವನ ಅವರ ದೃಷ್ಟಿಕೋನ ದಕ್ಷಿಣ ಅರೇಬಿಯಾದವರಗಿಂತ ತುಂಬ ಭಿನ್ನವಾಗಿತ್ತು .ಇಸ್ಲಾಮಿನ ಉದಯದ ತರುವಾಯ ಅರಬ್ಬರ ಸಾಮ್ರಾಜ್ಯ ವಿಸ್ತರಿಸುತ್ತ  ಹೋಯಿತು. ಜೊತೆಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳು ಹೆಚ್ಚಿನ ವಿಸ್ತಾರಪಡೆಯಿತು. ಅರಬ್ ಭಾಷೆ ಇತರ ಭಾಷೆಗಳ ಮತ್ತು ಸಂಸ್ಕೃತಿಗಳ ಸಂರ್ಪಕಕ್ಕೆ  ಬಂದು ಈ ಭಾಷೆಯನ್ನು ಸಮೃದ್ದಗೊಳಿಸುವಲ್ಲಿ ಫಾರಸಿ ಸಾಹಿತ್ಯ ಹಾಗೂ ಇರಾನಿಗಳ ಪಾತ್ರ ಬಹಳ, ಇರಾನಿಗಳ ಇತಿಹಾಸ ಅತ್ಯಂತ ಪ್ರಾಚೀನವಾದುದು. ಇಸ್ಲಾಮ ಧರ್ಮ ಇರಾನಿಗೆ ಬರುವ ಮುನ್ನ ಇರಾನಿನ ಸಾಮ್ರಾಜ್ಯ ಅರಬ್ ನ ದಕ್ಷಿಣ ಭಾಗವಾದ ಅಲ್ ಯಮನ್ ಇರಾನಿನ ಸಾಮ್ರಾಟರ ಅಧೀನದಲ್ಲಿತ್ತು. ಆದರೆ ಇರಾನಿಯರ ಜೀವನದ ಮೇಲೆ ಇಸ್ಲಾಮ್ ಧರ್ಮದ ಪ್ರಭಾವ ಎಷ್ಟು ತೀವ್ರವಾಗಿತ್ತೆಂದರೆ ಇರಾನಿಗಳು ತಮ್ಮ ಇತಿಹಾಸವನ್ನೇ ಮರೆಯಬೇಕಾಯಿತು.  ಅವರು ತಮ್ಮ ಭಾಷೆ ಮತ್ತು ಲಿಪಿಯನ್ನು ಬಿಟ್ಟು ಅರಬ್ಬೀ ಭಾಷೆ ಮತ್ತು ಲಿಪಿಯನ್ನು ಬಳಸತೊಡಗಿದರು. ಆ ಸಮಯದಲ್ಲಿ ಇರಾನಿಗಳಲ್ಲಿ ಅರಬ್ಬೀ ಭಾಷೆಯ ದೊಡ್ಡ ದೊಡ್ಡ ಲೇಖಕರು ಹುಟ್ಟಿಕೊಂಡರು ಅರಬ್ಬೀ ಸಾಹಿತ್ಯದಲ್ಲಿ ಇರಾನಿಗರಿಗೆ ಸಿಕ್ಕ ಅಷ್ಟು ಪ್ರಾಶ್ಯಸ್ತ ಮೂಲ ಅರಬ್ಬರಿಗೂ ದೊರೆಯಲಿಲ್ಲ.  ಇದರ ಫಲವಾಗಿ ಇರಾನೀ ಸಾಹಿತ್ಯ, ಕಲೆ, ದರ್ಶನ ಮೊದಲಾದವು ಇಸ್ಲಾಮಿ ಜಗತ್ತಿನ ಸ್ವಂತ ಆಸ್ತಿಗಳಾದವು. ಇಸ್ಲಾಮ್ ಇರಾನನ್ನೇನೊ ಜಯಿಸಿತು. ಸಾಂಸ್ಕೃತಿಕವಾಗಿ ಅದು ಇರಾನಿನ ಮುಂದೆ ಸೋತಿತು.
          ಸೂಫೀ ಮತದ ಮೂಲ ಸೆಲೆಯನ್ನು ಕಂಡುಹಿಡಿಯಬೇಕಾದರೆ ಅದರ ಸಾಮಾನ್ಯ ಲಕ್ಷಣಗಳನ್ನು ಅರಿಯಬೇಕು. ಪ್ರೇಮ ಒಂದು ಮಾನಸ ಪ್ರಕ್ರಿಯೆ.ಆದರ ಗುರಿ ಆನಂದ. ಸೂಫೀಗಳ ಪ್ರಕಾರ ಚೆಲುವೆ ದೇವರು, ಒಲವೇ ಪೂಜೆ. ಪ್ರೇಮವೇ ಸೂಫೀ ಮತದ ತಳಹದಿ ಪ್ರೇಮ ಮತ್ತು ಸೂಫೀ ಮತ ಎರಡೂ ಅಭಿನ್ನ ಎನ್ನುವವರಿದ್ದಾರೆ.
          ಸೂಫೀಗಳ ಪ್ರಧಾನ ಭಾವ ರತಿ. ರತಿ ಮುಖ್ಯ ಉದ್ದೀಪನ ಸುರೆ. ಸುರೆ ಹಾಗೂ ರತಿಯ ಆಧಾರದ ಮೇಲೆ ಸೂಫೀ ಸಾಹಿತ್ಯದ ಭವನವೆಲ್ಲ ನಿಂತಿರುವುದು. ಇದರಲ್ಲೂ ರತಿಯ ಅವಲಂಬನವೇ ಸುರೆಯ ದಾತನೂ ಹೌದು. ಪ್ರೇಮ ಪಾತ್ರ ಮಾಶೂಕನೇ ಸಾಕಿಯ ಕೆಲಸ ಮಾಡಿ ಪ್ರೇಮ ಮದಿರೆಯನ್ನು  ಕುಡಿಸಿ, ಪ್ರೇಮಿಯನ್ನು ತೃಪ್ತಿಗೊಳಿಸುತ್ತಾನೆ. ಪ್ರೇಮಿಯ ಸೌಂದರ್ಯ ಅಲ್ಲಾನ ಐಶ್ವರ್ಯ. ಅದ್ದರಿಂದ ಸುಂದರಿಯನ್ನು ಅಲ್ಲಾನ ಪ್ರತೀಕವೆಂದು ಭಾವಿಸಲಾಯಿತು. ಅಲ್ಲಾ ಪುರುಷ ಹಜರತ್ ಮಹಮ್ಮದ್ ರಿಗೆ ಕಿಶೋರ ರೂಪದಲ್ಲಿ ದರ್ಶನವಿತ್ತನಂತೆ. ಕಿಶೋರಿ ಪುರುಷನ                                                                                                                                                                                                                                          ಅಂಗವಿಶೇಷದಿಂದ ರತಿಗಾಗಿ ನಿರ್ಮಿಸಲ್ಪಟ್ಟಳು ಅವಳ ಬೆನ್ನು ಹತ್ತಿ ಮನುಷ್ಯ ಮರ್ತ್ಯಲೋಕಕ್ಕೆ ಬಂದ ಅವನ ಸ್ವರ್ಗದಿಂದದೊಡಲ್ಪಟ್ಟ, ಕಿಶೋರಿ ಪ್ರೇಮ ಪ್ರಲೋಭನೆ ಕಾರಣವೆಂದು ಭಾವಿಸಲಾಯಿತು. ರಮಣಿಯನ್ನು ಉಮರ‍್ ಖಯ್ಯಾಂನಂಥ ಶ್ರೇಷ್ಟ ಕವಿ ಕೂಡ ಪ್ರೇಮದ ಆನಲಂಬವನ್ನಾಗಿ ಮಾಡಿಕೊಂಡ. "ಅಮರದ್"ನನ್ನೇ ತನ್ನ ಕವಿತೆಯ ಪ್ರತೀಕವನ್ನಾಗಿ ಮಾಡಿಕೊಂಡ ನಿಜವಾಗಿ ನೋಡಿದರೆ ಸೂಫೀಗಳು ಅವನ ಶಿಷ್ಯತ್ವವನ್ನೇ (ಮುರೀದಿ) ಮಾಡುತ್ತಾರೆ. ಮತ್ತು ಅವನ ಪ್ರೇಮ ಪ್ರಸಾರದಲ್ಲೇ ಮಗ್ನರಾಗುತ್ತಾರೆ. ಸೂಫೀಗಳು ಸಂಸ್ಕಾರದಿಂದಾಗಿ ಮಗಬಚ್ಚಗಳ ಬಳಿಗೆ ಹೋಗಲು ಉತ್ಸಾಹಕರಾಗಿದ್ದರು. ಪಾರಸಿಗಳು ಅನಾದಿಕಾಲದಿಂದಲೂ ಸೋಮರಸ ಪಾನ ಮಾಡುತ್ತಿದ್ದರೂ. ಅರಬ್ಬರೂ ಶರಾಬಿನ ಭಕ್ತರು. ಹೀಗಾಗಿ ಇಸ್ಲಾಮಿನ ಪ್ರಭಾವಿದ್ದರೂ ಅವರು ಮದಿರಾ ಪಾನಕ್ಕಾಗಿ ಬಾಯಿ ಬಿಡುತ್ತಿದ್ದರು. ಸೂಫೀಗಳು ಈ ಮಧುಪಾನವನ್ನೇ ಪ್ರತೀಕವನ್ನಾಗಿ ಗ್ರಹಿಸಿದರು ಮತ್ತು ಮಗಬಚ್ಚಗಳನ್ನು ಮುರ್ಶಿದ್, ಪೀರ‍್, ಸಾಕಿ, ಮಾಶೂಕ್, ಮೊದಲಾದ ಹೆಸರುಗಳಿಂದು ಕರೆದರು. ಸೂಫೀಗಳು ಹೆಣ್ಣುನ್ನು ಪ್ರೇಮ ಪ್ರತೀಕವೆಂದು  ಬಗೆದರು, ಅರಬಿಯಂಥ  ವಿದ್ವಾಂಸರ ಪ್ರಕಾಋ ಅಲ್ಲಾ ಅಮೂರ್ತ ರೂಪದಲ್ಲಿ ದರ್ಶನ ಕೊಡಲಾರ. ಆದ್ದರಿಂದ ಹೆಣ್ಣಿನ ರೂಪದಲ್ಲೇ ಆತನ ಸಾಕ್ಷಾತ್ಕಾರ ಶ್ರೇಷ್ಠ. ಈ ರೀತಿ ಸೌಂದರ್ಯವೇ ರತಿಯ ಆವಲಂಬನ, ಸುಂದರ ವಸ್ತುಗಳನ್ನು, ಸುಂದರಿಯನ್ನು ಕಂಡಾಗ ನಾವು ಆಕರ್ಷಿತರಾಗುತ್ತೇವೆ. ಈ ಆಕರ್ಷಣೆ ಆ ಲೌಕಿಕವಾದಾಗ ನಾವು ಭವಸಾಗರವನ್ನು ದಾಟ ಬಲ್ಲೆವು. ಆದ್ದರಿಂದಲೇ ರೂಮಿ, ಜಾಮಿಯಂಥ ಸಿದ್ದ ಫಕೀರರೂ ಕೂಡ ಯಾರನ್ನಾದರೂ ಪ್ರೀತಿಸುವಂತೆ ಒತ್ತಾಯಮಾಡಿದ್ದಾರೆ. ಅವರ ದೃಷ್ಟಿಯಲ್ಲಿ ಯಾವುದೇ ಸುಂದರಿಯನ್ನು ಪ್ರೀತಿಸದೆ ನಮ್ಮ ಮನಸ್ಸು ಪರಮಾತ್ಮನಲ್ಲಿ ತೊಡುಗುವುದಿಲ್ಲ. ಆದರೆ ಈ ಸುಂದರಿ ನಮ್ಮ ಪ್ರೇಮದ ವಾಹಕಳೇ ಹೊರತು ಆಲಂಬನವಲ್ಲ ಎಂಬುದನ್ನು ಮರೆಯಬಾರದು.
          ಸೂಫೀ ಸಾಹಿತ್ಯದ ಪ್ರೇಮದರ್ಶನದಲ್ಲಿ ಸುರತಿಯ ಜೊತೆಗೆ ಸುರೆಯ ವಿಧಾನವಿದೆ. ಸುರಾ ಸೇವೆನೆಯಲ್ಲಿ ಏನೇ ದೋಷವಿರಲಿ ಆದರ ಒಂದು ಗುಣವೆಂದರೆ ಕ್ಷಣಕಾಲವಾದರೂ ಸರಿ, ಆದರ ಉಲ್ಲಾಸ, ಚಾರ್ತುರ್ಯಕ್ಕಾಗಿ ಸುರೆಯನ್ನು ಸೂಫೀಗಳು ಪ್ರತೀಕವಾಗಿ ಭಾವಿಸುತ್ತಾರೆ. ಸೂಫೀಗಳು ಸಾಕಿ (ಹೆಂಡ ಮಾರುವವರು)  ಕುಡಿಸುವ ಹೆಂಡ ಹೆಂಡವಲ್ಲ. ಅಮೃತ ಆದರಿಂದ ಶಾಶ್ವತಾನಂದ ಪ್ರಾಪ್ತಿ ಎಂದು ನಂಬಿದ್ದರು.ಯಾವುದೇ ಫಾರಸಿ ಕವಿಗೆ ಸುರೆ, ಸುರಾವಿಕ್ರೀತೆಯಿಲ್ಲದೆ ಕಾವ್ಯದ ರಚನೆ ಮಾಡುವುದೇ ಕಷ್ಟವಾಯಿತು.
          ಅರಬಿಯದಲ್ಲಿ ದೊರೆಯುವ ಸೂಫೀ ಸಾಹಿತ್ಯದ ಬಹುಪಾಲು ಅರಬರದಲ್ಲ ಇರಾನಿಗಳದ್ದು. ಸೂಫೀ ಸಾಹಿತ್ಯದಲ್ಲಿ ಮೂರು ಅಂಗಗಳು ಇವೆ ಅವುಗಳೆಂದರೆ ಪ್ರಬಂಧಗಳು, ಜೀವನ ಚರಿತ್ರೆಗಳು, ಕಾವ್ಯಗಳು ಮತ್ತು ಸೂಫೀಗಳ ಪ್ರತಿಷ್ಠೆ ಅವರ ಕಾವ್ಯವನ್ನೇ ಅವಲಂಬಿಸಿದ್ದರೂ. ಭಾರತದಲ್ಲಿ ಈ ಸೂಫೀ ಕಾವ್ಯದಲ್ಲಿ ಅಮೀರ‍್ ಖಸ್ರೋನಂಥ ಪ್ರಸಿದ್ದ ಕವಿಗಳು ಫಾರಸಿಯಲ್ಲಿ ಕಾವ್ಯ ರಚನೆ ಮಾಡಿದರು. ಆತನ ಕಾವ್ಯದ ಪ್ರಭಾವ ಎಷ್ಟೊಂದು ಇತ್ತೆಂದರೆ ಅನೇಕ ಇರಾನಿಗಳು ಅವನ ಶಿಷ್ಯರಾದರು. ಅಮೀರ‍್ ಖಸ್ರೋವಿನ ತರುವಾಯ ಮೊಗಲರ ಕಾಲದಲ್ಲಿ ಕಾವ್ಯಕ್ಕೆ, ಕವಿಗಳಿಗೆ ವಿಶೇಷ ಪ್ರೋತ್ಸಾಹ ದೊರೆಯಿತು. ಆ ಫಾರಸಿ ಕವಿಗಳ ಪರಂಪರೆಯನ್ನು ಮುಂದುವರೆಸಿದವರಲ್ಲಿ ಉರ್ದುವಿನ ಅಮರ ಕವಿ ಮಹಮದ್ ಇಕ್ಬಾಲ್ ಆದ್ವೀತಿಯರು.
          ಸೂಫೀ ಕವಿಗಳ ಚರ್ಚೆ ಬಂದಾಗ ಉಮಾರ‍್ ಖಯಾಮ್ ಗಣಿತ ಹಾಗೂ ಜ್ಯೋತಿಷ್ಯಕ್ಕಾಗಿ ಹೆಸರಾಗಿದ್ದಾನೆ. ಸೂಫೀ ಕಾವ್ಯಕ್ಕಾಗಿ ಅಲ್ಲ. ಆದರೆ ಅವನ ಸ್ವಚ್ಛಂದತೆ ಪಾಶ್ಚಾತ್ಯರಿಗೆ ಎಷ್ಟೊಂದು ಪ್ರಿಯವಾಯಿತೆಂದರೆ ಅವನ ಮುಂದೆ ಉಳಿದೆಲ್ಲಾ ಫಾರಸಿ ಕವಿಗಳು ನಿಸ್ತೇಜರಾದರು. ರೂಮಿ ಮತ್ತು ಹಾಫಿಜರನ್ನು ಜನ ಮರತಂತೆ ಭಾಸವಾಗ ತೊಡಗಿತು. ಆದರೆ ಖಯಾಮ್ ವಿಜೃಂಭಿಸುತ್ತಿದ್ದಾನೆ. ಆತನ ಕವಿತೆ ಸಮಯಾನುಕೂಲವಾಗಿದೆ. ಆತ ಅನೇಕರ ದೃಷ್ಟಿಯಲ್ಲಿ ಸುರತಿ ಹಾಗೂ ಸುರೆಯ ನಿಜವಾದ ಭಕ್ತನಾಗಿದ್ದ ಮತ್ತು ಯಾವುದೋ ಪಾರ್ಥಿವ ಸಾಕಿಯೊಂದಿಗೆ ತನ್ನ ಗೋಳನ್ನು ತೋಡಿಕೊಳ್ಳುತ್ತಿದ್ದ. ದ್ರಾಕ್ಷಿಯ ಕನ್ಯೆಯಲ್ಲೇ ಅವನಿಗೆ ಎಲ್ಲವೂ ಕಾಣುತ್ತಿತ್ತು. ಏನಾದರಾಗಲಿ ಖಯಾಮ್ ಆನಂದಕ್ಕಾಗಿ ಕವಿತೆ ಬರೆಯುತ್ತಿದ್ದ.
          ಸೂಫೀ ಸಾಹಿತ್ಯದಲ್ಲಿ ರುಬಾಯಿಗಳಲ್ಲಿ ಪ್ರತೀಕಗಳಿಗೆ ಗಜಲ್ ನಂತೆಯೇ ಸ್ಧಾನ ದೊರೆಯಿತು. ಸೂಫೀಗಳು ಹೃದಯ ತೋರುವುದು ಗಜಲ್ ನಲ್ಲೇ , ಭಾವಸಾಗರ ಗಜಲ್ ನಲ್ಲಿ ಉಕ್ಕಿ ಹರಿದಂತೆ ಬೇರೆ ಛಂಧಸ್ಸಿನಲ್ಲಿ ಆಗಲಿಲ್ಲ, ಗಜಲ್ ನಲ್ಲಿ ಪ್ರೇಮದ ಪ್ರಚಂಡ ಬಿರುಗಾಳಿ ಬೀಸಿತು. ಅದರಲ್ಲಿ ಧರ್ಮ, ಕರ್ಮ, ಆಚಾರ, ವಿಚಾರಗಳೆಲ್ಲ ಹಾರಿಹೋದವು. ಗಜಲ್ ಗಳಲ್ಲಿ ಶರಾಬು, ಸಾಕಿ, ಬುಲ್ ಬುಲ್, ಚಮನ್ ಮೊದಲಾದ ಪ್ರತೀಕಗಳ ಗುಣಗಾನವೇ ಗುಣಗಾನ.
          ಪ್ರಸಿದ್ದ ರುಬಾಯಿಕರ ಉಮರ‍್ ಖಯಾಮ್ ಲಹರಿಯ ಜೀವ. ಆತ ಅಮರದ್ ಷರಸ್ತ್ (ಪ್ರಣಯ ಉಪಾಸಕ) ಅಲ್ಲ. ರಮಣಿಯ ಉಪಾಸಕ. ಆತ ರಮಣಿಯನ್ನೇ ಆಲಂಬನವನ್ನಾಗಿ ಮಾಡಿಕೊಂಡ, ಅಮರದ್ ನನ್ನು ಅಲ್ಲ ಅವನ ರುಬಾಯಿಗಳು ಕರ್ಮಕಾಂಡವನ್ನು ಚಿಂದಿಯೆಬ್ಬಿಸಿದ್ದಾನೆ. ಸೂಫೀ ಸಾಹಿತ್ಯದಲ್ಲ ಭಾವ ಪ್ರದರ್ಶನಕ್ಕೆ ಗಜಲ್ ಗಳಾದರೆ, ವ್ಯಂಗ್ಯ ವಿಡಂಬನೆಗೆ ರುಬಾಯಿಗಳನ್ನು ಆರಿಸಿಕೊಂಡರು. ಮಸ್ನವಿಯಲ್ಲಿ ರೂಮಿ, ಗಜಲ್ ನಲ್ಲಿ ಹಾಫಿಜ್ ಹಾಗೂ ರುಬಾಯಿಯಲ್ಲಿ ಖಯಾಮ್ ಆಯಾ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಿ ಸಾಹಿತ್ಯವನ್ನು ರಚಿಸಿದರು. ಆದ್ದರಿಂದ ರೂಮಿ ಆಚಾರ್ಯನೆನಿಸಿಕೊಂಡರೆ, ಹಾಫಿಜ್ ಭಕ್ತನೆನಿಸಿಕೊಂಡ, ಖಯಾಮ್ ಮನಸ್ವಿಯೆನಿಸಿದ.
          ಉಮಾರ‍್ ಖಯಾಮ್ ಪರ್ಷಿಯಾ ದೇಶದಲ್ಲಿ ಆತ ಜ್ಯೋತಿಷಿಯಾಗಿ ಗಣಿತ್ಞನಾಗಿದ್ದ. ೧೧ನೇ ಶತಮಾನದ ಮಧ್ಯೆದಲ್ಲಿ ಜನಿಸಿದ ಖಯಾಮ್ ೧೨ ಶತಮಾನದಲ್ಲಿ ಮರಣ ಹೊಂದಿದ ಎಂದು ಕೆಲವರು ಹೇಳುತ್ತಾರೆ. ಖಯಾಮ್ ನ ಪೂರ್ವಿಕರು ಗುಡಾರ ಕಟ್ಟುವ ಕೆಲಸ ಮಾಡುತ್ತಿದ್ದರಂತೆ. "ಖೇಮಾ"(ಗುಡಾರ) ಶಬ್ದದಿಂದ ಖಯಾಂ ಶಬ್ದ ಬಂದಿರಬಹುದೆಂದು ಕೆಲವರ ಊಹೆ. ಖಯಾಮ್ ನ ಕವಿತೆಗಳ ಪೂರ್ಣ ಸಂಗ್ರಹ ಇನ್ನೂ ದೊರೆತಿಲ್ಲ. ಅತ್ಯಂತ ಪ್ರಾಚೀನ ಹಸ್ತಲಿಪಿ ಅವನ ನಿಧನದ ೭೫ ವರ್ಷಗಳ ತರುವಾಯ ನಿರ್ಮಿತವಾಯಿತು. ಇದೊಂದು ಸಂಕಲನದಲ್ಲಿ ೩೫೦ ರುಬಾಯಿಗಳಿವೆ. ಸುಮಾರು ಒಂದು, ಒಂದೂವರೆ ಸಾವಿ ರುಬಾಯಿಗಳಿಂದ ಇದನ್ನು ಸಂಗ್ರಹಿಸಿರಬಹುದು. ಈ ಕವಿ ಶಬ್ದಗಳ ಗುಡಾರ ಶಬ್ದಗಳ ಗುಡಾರ ಕಟ್ಟಿ ನಿಲ್ಲಿಸಬಲ್ಲ. ರೂಬಾಯಿಯ ನಾಲ್ಕುಗಳುಗಳ ಮೇಲೆ ಭಾವ ಅಥವಾ ವಿಚಾರಗಳನ್ನು ಗುಡಾರ ಹಾಕಿ ಬಿಡುತ್ತಾನೆ ಎಂದು ಹಿಂದಿಯ ಪ್ರಸಿದ್ದ ಕವಿ ಹರಿವಂಶರಾಯ್ ಬಚ್ಚನ್ ಹೇಳಿದ್ದಾರೆ.
          ೧೮ನೇ ಶತಮಾನದ  ಮಧ್ಯದಲ್ಲಿ ಆಕ್ಸ್ ಫರ್ಡಿನ ಬೋಡಲಿಯನ್ ಲೈಬ್ರರಿಯಲ್ಲಿ ಒಂದು ಫಾರಸೀ ಹಸ್ತಲಿಪಿಯತ್ತ ಪ್ರೊ.ಕೋವೆಲ್ಲರ ಗಮನ ಹರಿಯಿತು. ಆದರಲ್ಲಿ ಖಯಾಮ್ ೧೫೮ ರುಬಾಯಿಗಳಿದ್ದವು ಇದನ್ನು ಇಂಗ್ಲೀಷ್ ಗೆ ಅನುವಾದಿಸಿದರು. ರುಬಾಯಿಗಳ ಮೂಲ ಸೌಂದರ್ಯವನ್ನು ಗ್ರಹಿಸದ್ದೇ ಅಲ್ಲ ಇನ್ನೂ ಹೆಚ್ಚಿಸಿದರು ಇದರಿಂದಾಗಿ ಅವರು ಅನುವಾದ ಚಕ್ರವರ್ತಿ ಎನಿಸಿಕೊಂಡರು. ಇಷ್ಟದರೂ ಅನುವಾದದ ರುಬಾಯಿಗಳಿಗೆ ಅಷ್ಟಾಗಿ ಸ್ವಾಗತ ದೊರೆಯಲಿಲ್ಲ ಒಬ್ಬ ಸಂಪಾದಕರಂತು ಇದು ಪ್ರಕಾಶನಕ್ಕೆ ಅನರ್ಹ ಎಂದು ತಿರಸ್ಕರಿಸಿದ್ದರು. ೧೮೫೯ರಲ್ಲಿ ೭೬ ರುಬಾಯಿಗಳಿದ್ದ ಪ್ರಥಮ ಸಂಸ್ಕರಣ ೨೫೦ ಪ್ರತಿಗಳನ್ನು ಅಚ್ಚು ಮಾಡಿದರು ಬೆಲೆ ಇಳಿಸಿದರು ಸಹ ಯಾರು ಕೊಳ್ಳುವರಿಲ್ಲದೆ ಕೊನೆಗೆ ಪ್ರಕಾಶರು ಹಳೆಯ ಹರಕಲು ಪುಸ್ತಕದ ಗುಂಪಿಗೆ ದೂಡಿದರು. ಇಂಗ್ಲೀಷ್ ನ ಇಬ್ಬರು ಪ್ರಸಿದ್ದ ಕವಿಗಳು ಅದು ಹೇಗೋ ಅದನ್ನು ಕೊಂಡರು, ಸರಿ, ಅವರಿಗೆ ಕೆಸರಿನಲ್ಲಿ ಕಮಲ ಕಂಡಿತು ಅವರು ಅದನ್ನು ಮನಸಾರೆ ಕೊಂಡಾಡಿದರು ದಿನಬೆಳಗಾಗುವುದರೊಳಗೆ ಅದು ಪ್ರಸಿದ್ದವಾಯಿತು. ಇಂದು ಒಂದು ಹಳೆಯ ಪ್ರತಿಗೆ ಲಕ್ಷಾಂತರ ಹಣ ಸುರಿಯವವರಿದ್ದಾರೆ.
          ರುಬಾಯಿ ಕಾವ್ಯ ಸೌಂದರ್ಯವಂತೂ ಅದ್ಭುತ. ಇನ್ನು ದರ್ಶನದ ದೃಷ್ಟಿಯಿಂದ ಕೆಲವರಿಗೆ ಅದರಲ್ಲಿ ಸುಖವಾದೀ ದರ್ಶನ ಕಂಡುಬಂದರೆ ಕೆಲವರಿಗೆ ದು:ಖವಾದೀ ದರ್ಶನ. ಈ ನೆಲದ ಚೆಲುವು ಪರಮಾತ್ಮನ ಚೆಲುವೇ ಎಂಬ ಸೂಫೀ ದರ್ಶನ ಇದರಲ್ಲಿ ಗುಪ್ತಗಾಮಿನಿಯಾಗಿ ಹರಿದಿದೆ. . ಸಾಕಿ, ಮಧು, ಮಧುಬಾಲೆ, ಮಧುಶಾಲೆಯಂತೂ ಸೂಫೀಗಳ ಪ್ರಿಯ ರೂಪಕಗಳು ಉಮರ‍್ನ ಕಾವ್ಯ ತನ್ನ ಜಗತ್ತಿನ ಸ್ಧೂಲ, ಅಸಾಧಾರಣ, ಆಕರ್ಷಕ, ವರ್ಣರಂಜಿತ ಹಾಗೂ ಅರ್ಥಗರ್ಭಿತ ದೃಶ್ಯ ಹಾಗೂ ರೂಪಕಗಳ ಮಾಯಾ ಲೋಕವನ್ನೇ ನಮ್ಮ ಕಣ್ಣು ಮುಂದೆ ತೆರೆಯುತ್ತದೆ. ಆತನ ಭಾವಗಳು ನಮ್ಮ ಎದೆಯ ತುಡಿತವನ್ನು ಪ್ರತಿಬಿಂಬಸುತ್ತವೆ. ಎಂಬ ಅನುಭವ ಪ್ರತಿಯೊಬ್ಬನಿಗೂ ಉಂಟಾಗುತ್ತದೆ. ಈ ರೀತಿ ಉಮರ‍್ ಖಯಾಮ್ ಅಮರ, ಅಜರ.
*****
          ಒಂದು ಪ್ರಾತ:ಕಾಲ ನನ್ನ ಮದಿರಾಗೃಹದಿಂದ ಒಂದು ದನಿ ನನ್ನ ಕಿವಿಗೆ ಬಿತ್ತು " ಓ ಮತ್ತ, ಮದಿರಾಲೋಲ, ಎದ್ದು ಕುಳಿತುಕೋ, ಬಾ: ಬದುಕಿನ ಬಟ್ಟಲು ತುಂಬುವ ಮುನ್ನ ನಾವು ದೈವೀ ಪ್ರೇಮದ ಬಟ್ಟಲನ್ನು ಪಾನ ಮಾಡೋಣ, ಮೃತ್ಯವಿಗೆ ಮುನ್ನ ಅವನನ್ನು ಪ್ರೀತಿಸೋಣ.
*****
          ಪ್ರಣಯಮದಿರೆ, ನಮಗೆ ತುಂಬ ಲಾಭವುಂಟು ಮಾಡುತ್ತದೆ. ಆದರಿಂದ ನಮ್ಮ ಶರೀರ, ಪ್ರಾಣಗಳಿಗೆ ಶಕ್ತಿ ದೊರೆಯುತ್ತದೆ. ಆದರ ಪಾನದಿಂದ ರಹಸ್ಯಗಳು ಮೈದೋರುವುವು. ನನಗೆ ಆ ಮದಿರೆಯ ಒಂದು ಗುಟುಕು ಸಾಕು. ಅದು ದೊರೆತ ಬಳಿಕ ನನಗೆ ಜಗತ್ತು ಅಥವಾ ಜೀವನದ ಚಿಂತೆಯಿಲ್ಲ, ಸಾವಿನ ಚಿಂತೆಯೂ ಇರಲಾರದು.
*****
          ಪ್ರಣಯ, ದಿನವೆಲ್ಲ ಪ್ರಣಯದಲ್ಲೇ ಮತ್ತನಾಗಿರಬೇಕು, ಅವನು ಹುಚ್ಚನಾಗಿ ವ್ಯಾಕುಲನಾಗಿ ಅಲೆಯುತ್ತಿರಬೇಕು. ಎಚ್ಚರವಿದ್ದರೆ ಪ್ರತಿಯೊಂದು ವಸ್ತುವಿನ ಚಿಂತೆ ಸುತ್ತಿಕೊಂಡಿರುತ್ತದೆ. ಆದರೆ ಉನ್ಮತ್ತನಾದಾಗ ಎಲ್ಲ ವಸ್ತುಗಳ ಗಮನವೂ ತಲೆಯಿಂದ ದೂರವಾಗಿ ಬಿಡುತ್ತದೆ. ಯಾವುದಾದರೂ ಗಮನವಿದ್ದರೆ ಉನ್ಮತ್ತಗೊಳಿಸಿದ ವಸ್ತುವಿನ ಗಮನವಿರುತ್ತದೆ.
*****
          ನಾನು ಎಷ್ಟೊಂದು ಮದಿರೆಯನ್ನು ಪಾನ ಮಾಡುವನೆಂದರೆ ಆದರ ವಾಸನೆ ನನ್ನ ನೆಲದಡಿಯಿಂದ ಹೊರಟು ಗೋರಿಯನ್ನು ಮುಟ್ಟಲಿ, ಮತ್ತು ಆದರಿಂದಲೂ ಹೊರಹೊಮ್ಮಲಿ. ಆದರಿಂದ ಯಾರಾದರೂ ಉನ್ಮತ್ತ ಪ್ರೇಮಿ ಅದರ ಬಳಿಗೆ ಬಂದರೆ ಅದರ ವಾಸನೆಯಿಂದ ಮತ್ತೂ ಮತ್ತು ಹಿಡಿದು ಮೈ ಮರೆಯಲಿ.
*****
          ಈ ಪ್ರಣಯದ ಮದಿರಾಗೃಹದ ಸೂಚಿಯಲ್ಲಿ ಎಲ್ಲಕ್ಕಿಂತ ಮೊದಲು ನನ್ನ ಹೆಸರು. ಮಸ್ತಿ ಮತ್ತು ಮದಿರಾಪಾನ ನನ್ನ ಪಾಲಿಗೆ ಬಂದಿದೆ. ಮದಿರಾ ವಿಕ್ರೇತರ ಈ ಮನೆಯಲ್ಲಿ ಇರುವುದೆಲ್ಲ ನಾನೇ. ನಾನೇ ಶರೀರ, ನಾನೇ ಪ್ರಾಣ, ಇಡೀ ಜಗತ್ತಿನ ಆಕೃತಿಗಳಲ್ಲಿ ನಾನೇ ಇದ್ದೇನೆ.
                                                                   *****
          ಜಗತ್ತಿನಲ್ಲಿ ಯಾವನಿಗೆ ತಿನ್ನಲು ಅರ್ಧ ರೊಟ್ಟಿ, ಕೂರಲು ತುಣುಕು ನೆಲ, ದೊರೆತಿದೆಯೋ ಮತ್ತು ಯಾವನು ಯಾರ ಆಳ ಅಲ್ಲವೋ, ಅರಸನೂ ಅಲ್ಲವೋ ಅವನೇ ಸುಖಿ. ಅವನು ಅದರಲ್ಲೇ ಮಗ್ನನಾಗಿರಲಿ. ಅವನ ಜಗತ್ತು ಎಲ್ಲಕ್ಕಿಂತಲೂ ಮಿಗಿಲು.