Popular Posts

Thursday, March 31, 2011

ನವವಸಂತದ ಗಾಳಿಬೀಸಲು
    ಮೊನ್ನೆಯಷ್ಟೆ ಮಳೆ ಬಿದ್ದಿದೆ. ಈ ಮಳೆಗೆ ಬಾಯಾರಿ ಕಾದಿದ್ದ ಭೂಮಿ ತನ್ನೊಡಲಿಗಿನ ಧಗೆಯನ್ನು ಹೊರಹಾಕಿದೆ. ಆದರೆ ಈ ಯುಗಾದಿಯ ಮೊದಲ ಮಳೆಗೆ ಮಣ್ಣು  ಪಸರಿಸುವ ಸುವಾಸನೆಗೆ ಪ್ರಕೃತಿಯ ಎಲ್ಲಾ ಜೀವಜಂತುಗಳಿಗೆ ನವಚೈತ್ಯನ ತುಂಬಿ ಬಂದಿದೆ.  ಮತ್ತೊಮ್ಮೆ ಕಾಲಚಕ್ರ ಉರುಳಿ  ಮತ್ತೊಂದು ಚೈತ್ರದ ಆಗಮನವಾಗಿದೆ. ಫಾಲ್ಗುಣದಲ್ಲಿ ಕುಳಿರಗಾಳಿಗೆ ಮರಗಳ ಎಲೆಗಳಲ್ಲೇ ಉದುರಿ ಮರಗಳಲ್ಲೇ ಚಿಗುರಿ  ನವವಸಂತವನ್ನು ಆಹ್ವಾನಿಸಿವೆ. ಮರಗಳು ತಮ್ಮ ಚೆಲುವನ್ನು ಮೇಳೈಸಿಕೊಳ್ಳುತ್ತಿವೆ. ಹಸಿರು ಚಿಗುರೊಡೆದು ಮರದಲ್ಲಿರುವ ಹಕ್ಕಿಗೊಡುಗಳಲ್ಲಿ ತನ್ನ ಮರಿಗಳು ನವಚೇತನದಿಂದ ಹೊಸಕಂಪನ್ನು ಆಹ್ವಾದಿಸುತ್ತಾ ಹೊಸಚಿಗುರು ಚಿಗುರುವುದನ್ನು ಕಣ್ಣಲ್ಲಿ ತುಂಬಿ ಆನಂದಿಸುತ್ತಿವೆ.

 ಯುಗಾದಿ ಎಂದರೆ ಪ್ರಕೃತಿಯ ಹೊಸತನ,ನವವಸಂತದ ಗಾಳಿಬೀಸಲು ಚಿಗುರು ಮಾವಿನ ಮತ್ತು ಹೊಂಗೆಯ ಘಮ್ಮನೆಯ ಸುವಾಸನೆ ತಂಗಾಳಿ ಎಂಥ ಗಿಡಮರವಾದರೂ ಸರಿ ಚೆಲುವಿನಿಂದ ಕಂಗೊಳಿಸುತ್ತ ನಿಲ್ಲುತ್ತದೆ. ಪ್ರಕೃತಿಯಲ್ಲಿ ಕೋಗಿಲೆಯ ವಸಂತಗಾನಕ್ಕೆ ಇಡೀ ಭೂರಮೆ ರಾಗದ ಭಾವೋತ್ಕರ್ಷವನ್ನು ಹರಡುತ್ತಾಳೆ ಈ ಪ್ರಕೃತಿಯ ರಾಗದ ಚಿಲುಮೆಗೆ ಎಲ್ಲರೂ ತಲೆಬಾಗಲೆ ಬೇಕು.ಯುಗಾದಿಯ ಮೊದಲ ಮಳೆಗೆ ಈ  ಪ್ರಕೃತಿಯನ್ನೇ ಬದಲಾವಣೆ ಮಾಡುವ ಪ್ರಕ್ರಿಯೆ ಮಾತ್ರ ಈ  ಭೂಮಿಗೆ ಉಂಟು ಆದರೆ ಮನುಷ್ಯ ಎಷ್ಟೇ ಪ್ರಯತ್ನಿಸಿದರೂ ಪ್ರಕೃತಿಯ ಮುಂದೆ ತಾನು ಕುಬ್ಜನಾಗುತ್ತಾನೆ. ಪ್ರಕೃತಿಯು ತನ್ನ ಪಾಲಿನ ಕೊಡುಗೆಯನ್ನು ತಾನು ನೀಡುತ್ತಲೆ ಬಂದಿದೆ. ಪ್ರಕೃತಿಯು ಪ್ರತಿಯೊಂದು ಹಂತದಲ್ಲಿ ಮನುಷ್ಯನ ಭಾವನೆಗಳಿಗೆ ರೋಮಾಂಚನವನ್ನು ನೀಡುತ್ತಾ ಬಂದಿದೆ. ಪ್ರಕೃತಿಯನ್ನು ಆರಾಧಿಸುವ ಕವಿಗಳಿಗೆ, ಬರಹಗಾರರಿಗೆ ಈ ಪ್ರಕೃತಿಯೇ ಸ್ಪೂರ್ತಿಯಾಗಿದೆ ನಿಂತಿದೆ. ಹಾಗೆಯೇ  ವರ್ಷ,ವರ್ಷವೂ ಬಂದಂತೆ ಯುಗಾದಿ ಮತ್ತೊಮ್ಮೆ ಬಂದಿದೆ.

ವರ್ಷ,ವರ್ಷವೂ ಪ್ರಕೃತಿಯ ಹೊಸತಾಗುವ ಗುಣವನ್ನು ಹೊಂದಿದೆ. ಈ ನಿಸರ್ಗದ ಮುಂದೆ ಮನುಷ್ಯನ ತನ್ನ ಆಯಸ್ಸು ದಿನದಿಂದ ದಿನಕ್ಕೆ  ಸವೆದು ಹೋಗುತ್ತಿದೆ. ಬಾಲ್ಯದಿಂದ, ಯೌವ್ವನ, ಯೌವ್ವನದಿಂದ, ಮಧ್ಯವಯಸ್ಸು ಅಲ್ಲಿಂದ ವೃದ್ದಾಪ್ಯಕ್ಕೆ ಪ್ರಯಾಣ ಮಾಡುತ್ತಿದ್ದೇವೆ. ಆದರೆ ಪ್ರಕೃತಿ ಪ್ರತಿ ವರ್ಷ ತನ್ನ ಹಳೆಯದನ್ನು ಕಳಚಿಕೊಂಡು ಹೊಸತನವನ್ನು ತೊಟ್ಟಕೊಂಡು ನವನವೀನವಾಗಿ ಇಡೀ ಭೂಮಿಯನ್ನು ಸಿಂಗರಿಸುತ್ತದೆ. ಇದೇ ಮನುಷ್ಯನ ಕೊರಗನ್ನು ಬೇಂದ್ರೆಯವರ ಯುಗಾದಿ ಕವನ ಭಿನ್ನವಾದ ನಿಲುವುಗಳನ್ನು ಹೇಳುತ್ತಾ ಮನುಷ್ಯನ ದು:ಖವನ್ನು ಪ್ರಕಟಿಸುತ್ತದೆ.
ಯುಗ ಯುಗಾದಿ ಕಳೆದರರೂ
ಯುಗಾದಿ ಮರಳಿ ಬರುತಿದೆ
ಹೊಸವರುಷಕೆ ಹೊಸ ಹರುಷವ
ಹೊಸತು,ಹೊಸತು ತರುತಿದೆ
ಹೊಂಗೆ ಹೊವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.
ಮತ್ತೊಂದು ಜಿ.ಎಸ್.ಶಿವರುದ್ರಪ್ಪನವರ ಯುಗಾದಿ ಪ್ರಶ್ನೆಗಳು ಕವಿತೆ ಇಲ್ಲಿ ಪ್ರಸ್ತುತವೆನಿಸುತ್ತದೆ.
ಆರವತ್ತು ಸಂವತ್ಸರದ ಈ ಚಕ್ರ
ತಿರುಗುತ್ತಲೇ ಇರುವಾಗ
ಇದರಲ್ಲಿ ಯಾವುದು ಮೊದಲು
ಯಾವುದು ತುದಿ? ಹೆಸರಿಗೆ ಮಾತ್ರ
ಯುಗಾದಿ ಯುಗಾದಿ ಅನ್ನುತ್ತೀವೆಲ್ಲ
ಇವತ್ತು ಯಾವ ಯುಗದ ಆದಿ
ಅಥವಾ ಯಾವ ಯುಗದ ಅಂತ್ಯ?

ಬೇವು,ಬೆಲ್ಲ ತಿಂದು ಮನುಜನ ಜೀವನದಲ್ಲಿ ಕಷ್ಟ-ಸುಖಗಳು ಸಮನಾಗಿರಲಿ ಎಂದು ಹಾರೈಸುತ್ತಾ. ಈ ಯುಗಾದಿಯ ಕನ್ನಡನಾಡಿನ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸುವ.

Wednesday, March 23, 2011

"ಹಲೋ ಹಲೋ ಚಂದಮಾಮ"

ಮಕ್ಕಳು ನೋಡಿ ಕಲಿಯಬೇಕು, ಹಾಡಿ ಕಲಿಯಬೇಕು, ಆಡಿ ಕಲಿಯಬೇಕು: ನಲಿನಲಿಯುತ್ತ ಓದಬೇಕು.  "ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಸಹಜಪ್ರಾಸಾ " ಇಂತಹ ಪದ್ಯ ರಚನೆಗಳಲ್ಲಿ ಮಕ್ಕಳ ಮನಸ್ಸುನ್ನು ಮುಟ್ಟಬಹುದಾದ ಯಾವುದಾದರೂ ಒಂದು ವಿಷಯ ಇರುತ್ತದೆ.ಮಕ್ಕಳ ಕವಿತೆ ಮಕ್ಕಳ ಮನಸ್ಸಿನಲ್ಲಿ ಉಳಿಯಬೇಕಾದರೆ ನಾಲ್ಕು ಅಥವಾ ಐದು ಪಂಕ್ತಿಗಳಲ್ಲಿ ಬಣ್ಣನೆಯಿರಬೇಕು. ಪ್ರತಿ ಪದ್ಯದಂತ್ಯದಲ್ಲಿ ಪ್ರಾಸವಿರಬೇಕು ಅಂತಹ ಕವಿತೆಗಳ ಪದಬಂಧಗಳೂ, ಪ್ರಾಸಾನುಪ್ರಾಸಗಳು ಎಳೆ ಮಕ್ಕಳ ಕಿವಿ ತುಂಬತ್ತವೆ. ಮಕ್ಕಳ ಸಾಹಿತ್ಯದ ಪಿತಾಮಹ ಪಂಜೇ ಮಂಗೇಶರಾಯರು ಹೇಳಿದಂತೆ ಚುಟುಕಗಳ ಪದಗಳೂ ಪ್ರಾಸಗಳೂ ಕಿವಿ ತುಂಬುವುದಷ್ಟೇ ಅಲ್ಲ, ಕಣ್ಣಿಗೂ ಕಟ್ಟುತ್ತದೆ. ಆ ಕಾರಣವಾಗಿ ಅವು ಮಕ್ಕಳಿಗೆ ಪ್ರಿಯವಾಗುತ್ತದೆ, ಅನಾಯಾಸವಾಗಿ ಅವರಿಗೆ ಕಂಠಪಾಠವಾಗುತ್ತವೆ.  ಆಗಲೇ  ಮಕ್ಕಳ ಮನಸ್ಸಿನಲ್ಲಿ ಯಾವುದೇ ಕಥೆಯಾಗಲಿ, ಕವಿತೆಯಾಗಲಿ ಉಳಿಯುವುದು. ಪಂಜೆಮಂಗೇಶರಾಯರ ನಾಗರಹಾವು ಎಂಬ ಕವಿತೆಯ ಸಾಲು
ನಾಗರ ಹಾವೇ ಹಾವಳು ಹೂವೇ,
ಬಾಗಿಲ ಬಿಲದಲಿ ನಿನ್ನೆಯ ಠಾವೇ
ಇಂತಹ ಪದ್ಯಗಳು ಇವತ್ತು ನಮ್ಮ ಬಾಯಿನಲ್ಲಿ ನಲಿಯುತ್ತದೆ. ಕುವೆಂಪು ರವರ ಬೊಮ್ಮನಹಳ್ಳಿ ಕಿಂದರಜೋಗಿಯ
ತುಂಗಾ ತೀರದ ಬಲಗಡೆಯಲ್ಲಿ
ಹಿಂದಲ್ಲಿದ್ದುದು ಬೊಮ್ಮನಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ
ಅಲ್ಲಿಯ ಜನಗಳಿಗತಿಗೋಳಾಟ
ಇಲಿಗಳು!
ಬಡಿದವು ನಾಯಿಗಳ!
****
ರೊಟ್ಟಿ ಅಂಗಡಿ ಕಿಟ್ಟಪ್ಪ!
ನನಗೊಂದುರೊಟ್ಟಿ ತಟ್ಟಪ್ಪ!
ಪುಟಾಣಿ ರೊಟ್ಟಿ!
ಕೆಂಪಗೆ ಸುಟ್ಟು!
ಒಂಭತ್ತು ಕಾಸಿಗೆ ಕಟ್ಟಪ್ಪ!
*****
 ರಾಜರತ್ನಂ ರವರ ಕಸ್ತೂರಿ ಹೀಗೆ ಊದಿದ್ದೇ ತಡ, ,ಮಕ್ಕಳ ಮುಂದೆ ಜೋಗಿಯ ಕಿಂದರಿ ಬಾರಿಸಿದಂತಾಯಿತು. ತುತ್ತೂರಿ ಮತ್ತು ತುತ್ತೂರಿಯಂತಹ ಇತರೆ ಪದ್ಯಗಳು ಮಕ್ಕಳ ಬಾಯಿಯಲ್ಲಿ ದಿನ ಬೆಳಗಾಗುವುದರಲ್ಲಿ ನಾಡಿನ ಉದ್ದಗಲಕ್ಕೂ ಹರಡಿದವು ಮಕ್ಕಳ  ಸಾಹಿತ್ಯದಲ್ಲಿ  ರಾಜರತ್ನಂ  ಶ್ರೇಷ್ಟ ಸಾಹಿತ್ಯಕಾರರಲ್ಲಿ ಒಬ್ಬರೆನಿಸಿದರು.
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಬೆನ್ನಲ್ಲೇ ಬಂತು ಕಡಲೆಪುರ
ಪುರಿ!ಪುರಿ! ಕಡಲೆಪುರಿ
ಗರಂ ಗರಂ ಕಡಲೆಪುರಿ!
ಎಲ್ಲ ಬನ್ನಿ
ತೆಗೆದು ತಿನ್ನಿ
ಗರಂ ಗರಂ ಕಡಲೆಪುರಿ
ಕಾಸಿಗೊಂದು ಸೇರು ಪುರಿ!
ಹೀಗೆ ಹಲವಾರು ಪದ್ಯಗಳ ಮಕ್ಕಳ ಬಾಯಲ್ಲಿ ಇಂದು ಸಹ ಕೇಳಿ ಬರುತ್ತಿವೆ. ಹಾಗಾಗಿ ಇಂತಹ ಪದ್ಯಗಳಾಗಿ ಇವತ್ತಿಗೂ ನನೆಪಿನಲ್ಲಿ ಉಳಿದೆ. ನಂತರದ  ದಿನಗಳಲ್ಲಿ ಲಕ್ಷ್ಮೀನಾರಾಯಣಭಟ್ಟರು, ಸಿದ್ದಯ್ಯಪುರಾಣಿಕರು, ಎಚ್.ಎಸ್.ವೆಂಕಟೇಶಮೂರ್ತಿ, ಶ್ರೀನಿವಾಸ ಉಡುಪ. ಕೆ.ವಿ.ತಿರುಮಲೇಶ್  ಇಂಥ ಕೆಲವು ಹಿರಿಯರು  ಮಕ್ಕಳ ಕವನ ಬರೆದರು. ಮಕ್ಕಳ ಕವನವನ್ನು ಬರೆದವರು ಹೆಚ್ಚು ಮಂದಿ ಇಲ್ಲ. ಆದರೆ ಪ್ರಸ್ತುತ ರಾಧೇಶ್ ತೋಳ್ಪಾಡಿಯವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಕ್ಕಳ ಕವಿತೆಗಳ ಬಗ್ಗೆ ಆಸಕ್ತಿ ಕೊಟ್ಟು "ಹಲೋ ಹಲೋ ಚಂದಮಾಮ"ಎಂಬ ಮಕ್ಕಳ ಕವನ ಸಂಗ್ರಹಗಳನ್ನು ಛಂಧ ಪುಸ್ತಕ ಪ್ರಕಾಶನ ಪ್ರಕಟಿಸಿದೆ.
    ರಾಧೇಶ್ ತೋಳ್ಪಾಡಿಯವರು ಪ್ರಸ್ತುತ ಬಂಟ್ವಾಳ ತಾಲ್ಲೂಕಿನ ಮಣಿನಾಲ್ಕೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರು ಬರೆದ "ಬಿಸಿಲಿನ ದೊರೆಗೆ ನೆರಳಿನ ಮನೆ" ಇವರು ಬರೆದ ಪ್ರಥಮ ಮಕ್ಕಳ ಕವನ ಸಂಗ್ರಹ. ಪ್ರಜಾವಾಣಿಯ ದೀಪಾವಳಿ ವಿಶೇಷಾಂಕದ ಶಿಶುಕಾವ್ಯ ಸ್ಪರ್ಧೆಯಲ್ಲಿ ಇವರ "ರಂಗತಿಟ್ಟಿನ ಗುಬ್ಬಿ ಮತ್ತು ಆರ್ಕಟಿಕ್ ಟರ್ನ" (ಪ್ರಥಮ) ಮತ್ತು " ಶಾಲೆಯ ಹುಡುಗರ ಶತಾವತಾರ ಮೇಳ" (ತೃತ್ತೀಯ) ಕವಿತೆಗಳ ಬಹುಮಾನ ಪಡೆದಿದೆ.
ಇವರ ಕವನ ಸಂಕಲನ "ಹಲೋ ಹಲೋ ಚಂದಮಾಮ" ದಲ್ಲಿ ೨೫ ಕವನಗಳಿವೆ ಕೆಲವು ಚುಟುಕ ಶಿಶುಗೀತೆಗಳೂ ಇವೆ. ಕವನಗಳಲ್ಲಿ ತಾಳ, ಲಯ, ಪ್ರಾಸಬದ್ದವಾಗಿದೆ ಬಳಸಿದ ಭಾಷೆಯು ಸರಳವಾಗಿದ್ದು ಮತ್ತೊಮ್ಮೇ ರಾಜರತ್ನಂನ ಕೆಲವು ಕವಿತೆಗಳನ್ನು ನೆನಪಿಸುತ್ತವೆ. ಇವರ ಕವನಗಳಲ್ಲಿ ನಾವು ನೋಡುವ ಕಾಗೆ, ಕೋಳಿ, ಪುಟಾಣಿ ಪಾಪೂ, ಮಳೆ, ಬಾನೂ ಬೆಟ್ಟಗಳ ಕವನಗಳ ವಸ್ತುಗಳಾಗಿ ಬಂದಿರುವುದರಿಂದ ಮಕ್ಕಳ ಮನಸ್ಸುನ್ನು ಗೆಲ್ಲುವಲ್ಲಿ ಯಶಸ್ಸಿಯಾಗಿದೆಯೆಂದು ಹೇಳಬೇಕು ಅವರ ಮಿಂಚಿನ ಹುಳವೇ, ಬಾ!
ಬಾ ಬಾ ಬಾ ಬಾ ಮಿಂಚಿ ಮಿಂಚಿ ಬಾ
ಬಾ ಬಾ ಬಾ ಬಾ ಬೆಳಕೆ ಹಂಚಿ ಬಾ
ಇಣುಕಿ ಹಣಕಿ ಬಾ
ಇರುಳ ಕೆಣಕಿ ಬಾ
ಬೆಂಕಿ ಕಿಡಿಯೇ ರೆಕ್ಕೆ ಪಡೆದು ಬಂದ ಹಾಗೆ ಬಾ
 ಮಿಣುಕ ಮಾತೇ, ಬಾ!
ಈ ಕವನವನ್ನು ಓದಿದಾಗ ಎಂತಹ ಬಾಲ್ಯದ ದಿನಗಳ ಮಧುರ ನೆನಪುಗಳ ಕಟ್ಟಿಕೊಡುತ್ತವೆ. ಹಾಗೇಯೇ "ಕೋಳಿ ಕುಮಾರಿಯ ಫ್ಯಾಷನ್ ಶೋ"
ಕೊಕ್ಕಿಗೆ ಕೆಂಪನೆ ಲಿಪ್ ಸ್ಟಿಕ್ ಹಚ್ಚಿ
ರೆಕ್ಕೆಗೆ ಬಣ್ಣದ ಗರಿಗಳ ಚುಚ್ಚಿ
ಲಗುಬಗೆಯಿಂದ ಪುಟು ಪುಟು ಓಡಿ
ಕನ್ನಡಿ ನೀರಲಿ ತನ್ನನೇ ನೋಡಿ
ಪು‌ರ್ರ‍ನೆ ಕುಮಾರಿ ಕೊ ಕ್ಕೊ ಕ್ಕೋ
ಮರವನ್ನೇರಿದಳ್ಯಾತಕ್ಕೋ!
ಇಂದಿನ ದಿನಗಳಲ್ಲಿ ಟಿ.ವಿ.ಗಳಲ್ಲಿ ಕ್ಯಾಟ್ ವಾಕ್ ಅನ್ನು ನಮ್ಮ ಮಕ್ಕಳ ನೋಡಿ ಬೆಳೆಯುತ್ತಿರುವ ಮಕ್ಕಳಿಗೆ ಇಂತಹ ಕವನಗಳು ವಿನೋದ ಸನ್ನಿವೇಶಗಳು ಮಕ್ಕಳ ಕಲ್ಪನೆಯನ್ನು ಗರಿಗೆದರಿಸುತ್ತವೆ. ಇವರ ಕವನಗಳಲ್ಲಿ ನವೀನ ಪ್ರಾಸ ಸಂಯೋಜನೆ, ಸಹಜತೆ, ಸರಳತೆ ಪ್ರಯೋಗಗಳಿಂದ ಮಕ್ಕಳ ಮನಸ್ಸಿಗೆ ತುಂಬಾ ಹತ್ತಿರವಾಗುತ್ತದೆ.ಝೆಡ್ ನ ಗೋಳು ಎನ್ನುವ ಕವನದಲ್ಲಿ ಇಂಗ್ಲೀಷ್ ಕೊನೆಯ ಅಕ್ಷರದ  ಗೋಳನ್ನು ನವೀನ ರೀತಿಯಲ್ಲಿ ವರ್ಣಿಸಿದ್ದಾರೆ. ವಿಭಕ್ತಿ ಪದ್ಯಗಳಲ್ಲಿ  "ಉಸ್ಸಪ್ಪಾಂತ ಹೇಳ್ತೀವಿ" "ಇರಲಿ" "ಹಲೋ ಹಲೋ" ಈ ಪದ್ಯಗಳನ್ನು ಓದುತ್ತಿದ್ದಾರೆ ಮಕ್ಕಳ ಭಾವಭಿನಯನ್ನು ನೋಡಿ ನಲಿಯುವುದಕ್ಕೆ ಅದ್ಭುತ ಕವನಗಳಾಗಿವೆ.
    ಒಟ್ಟಾರೆ  "ಹಲೋ ಹಲೋ ಚಂದಮಾಮ" ಇಂದಿನ ಪೀಳಿಗೆ ಒಂದು ಉತ್ತಮ ಮಕ್ಕಳ ಕವನ ಸಂಕಲನವಾಗಿ ಮೂಡಿಬಂದಿದೆ. ಈ ಕವನ ಸಂಕಲನ ಬರೆದಿರುವ ರಾಧೇಶ್ ತೋಳ್ಪಾಡಿಯವರು  ಸಹ ಮಕ್ಕಳು ಹಾಡಿ ಕುಣಿಯಬಹುದಾದ ಕೆಲ ಸಾಲುಗಳನ್ನು ಸೃಷ್ಟಿಸಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿ ಕೊಂಡಂತಿದೆ ಹಾಗೂ ಅವರ ಬಾಲ್ಯದ ದಿನಗಳಿಗೆ ಸಲ್ಲಿಸುವ ಕಾಣಿಕೆಯೂ ಸಹ ಇದಾಗಿದೆ. ಮುಂದೆ ಮಕ್ಕಳಿಗಾಗಿ ಕತೆ, ಕಾದಂಬರಿ, ನಾಟಕ, ಮುಂತಾದ ಹೊಸ ಕೃತಿಗಳನ್ನು ಬರೆಯುವರು ಎಂಬ ಆಶಯದಲ್ಲಿರುತ್ತವೆ. ಈ ಕವನ ಸಂಕಲನವನ್ನು ಈ ಕೆಳಕಂಡ ಪ್ರಕಾಶನದಲ್ಲಿ ದೊರೆಯುತ್ತದೆ ಸಂಪರ್ಕಿಸಿ.

ಛಂದ ಪುಸ್ತಕ ಪ್ರಕಾಶನ
ಐ-004, ಮಂತ್ರಿ ಪ್ಯಾರಡೈಸ್,
ಬನ್ನೇರುಘಟ್ಟ ರಸ್ತೆ,
ಬೆಂಗಳೂರು-76
ದೂರವಾಣಿ ಸಂಖ್ಯೆ:98444 22782
ಇ-ಮೇಲ್ :vas123u@rocketmail.com




Tuesday, March 15, 2011

ಪುರ್ನಮಿಲನ

ಪುರ್ನಮಿಲನ

ನಮ್ಮ ಮನೆಯ ಪಕ್ಕದಲ್ಲಿರುವ ಬೇಲಿಯಲ್ಲಿ ಸಣ್ಣ ಸಣ್ಣ ಗುಬ್ಬಚ್ಚಿಗಳು ಗೂಡು ಕಟ್ಟಿಕೊಂಡು ಸಂತಾನ ನಡೆಸುತ್ತಾ ಆಟವಾಡಿಕೊಂಡು ಇರುತ್ತವೆ. ನನ್ನ ಮನೆಯಿರುವುದು ಹಳ್ಳಿಯಲ್ಲಿ ಆದ್ದರಿಂದ ನನ್ನ ಪಕ್ಕದ ಹೊಲದಲ್ಲಿ ಕಬ್ಬು ಮತ್ತು ತರಕಾರಿಗಳು ವ್ಯವಸಾಯ ಮಾಡುತ್ತಾರೆ. ಆದ್ದರಿಂದ ಈ ಪರಿಸರದಲ್ಲಿ ಇರುವ ಹುಳ, ಹಪ್ಪಟೆಗಳನ್ನು ತಿಂದು ಬದುಕುತ್ತವೆ  ಈ ಗುಬ್ಬಚ್ಚಿಗಳ . ಈ ಗುಬ್ಬಚ್ಚಿಗಳು  ಬೆಳಗಿನ ಸಮಯದಲ್ಲಿನ ಅವುಗಳ ಚಿಲಿಪಿಲಿ ಕಲರವದಿಂದ ಮನಸ್ಸು ಸಂತೋಷವಾಗುತ್ತದೆ. ಇದರಿಂದ ಅವುಗಳ ಮತ್ತು ನಮ್ಮ ನಡುವೆ ಒಂದು ಆತ್ಮೀಯತೆ ಬೆಳೆದು ಬಂದಿದೆ. ನಮ್ಮ ಮನೆಯ ಮುಂದಿನ ಕಿಟಕಿ ಎತ್ತರವಾಗಿದ್ದು ಈ ಕಿಟಕಿಯ ಮುಂದೆ ಬಟ್ಟೆ ಹರವಲು ಒಂದು ಹಗ್ಗವನ್ನು ಕಟ್ಟಿದ್ದು ಈ  ಹಗ್ಗದ ಮೇಲೆ ಗುಬ್ಬಚ್ಚಿಗಳು ತಮ್ಮ ಜೋಕಾಲಿಯನ್ನು ಜೀಕುತ್ತಾ ಆಟವಾಡುತ್ತಾ ಎದರುಗಡೆ ಇರುವ ಕಿಟಕಿಯ ಗ್ಲಾಸಿನ ಹತ್ತಿರ ಹಾರಿ ಕೊಕ್ಕಿನಿಂದ ಗ್ಲಾಸನ್ನು ಕುಕ್ಕಿ ತಮ್ಮ ಸೌಂದರ್ಯವನ್ನು ಕೊಕ್ಕಿನಲ್ಲಿ ಕೊಂಕಿಸಿ ನೋಡಿಕೊಂಡು ತಮ್ಮನ್ನು ತಾವೇ ಎಷ್ಟು ತೆಳ್ಳಗೆ, ಬೆಳ್ಳಗೆ ಇದ್ದೇವೆ ಎಂದು ಕೊಳ್ಳುತ್ತಾ ನಮ್ಮನ್ನು ಅಣಕಿಸಿದಂತೆ ತೋರುತ್ತವೆ. ಇವುಗಳ ಆಟವನ್ನು ದಿನವು ಸವಿಯುವ ನನ್ನ ಮಗಳು  ಬೆಳಿಗ್ಗೆ ಎದ್ದು  ಹಾಲುನ್ನು ಕುಡಿಯಬೇಕಾದರೆ ನಮ್ಮ ಮನೆಯ ಹಾಲಿನಲ್ಲಿರುವ ಕಿಟಕಿಯಲ್ಲಿ ನಿಂತು ಆ ಗುಬ್ಬಚ್ಚಿಗಳನ್ನು ನೋಡುತ್ತಾ ಹಾಲನ್ನು ಕುಡಿಯುವುದು ಅವಳ ಅಭ್ಯಾಸ. ಅವಳು ಹಾಲು ಕುಡಿಯುವಾಗ ಅವಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವುದೆ ಒಂದು ಸಮಸ್ಯೆಯಾಗಿದೆ. ಆ ಗುಬ್ಬಚ್ಚಿಗಳು ಎಲ್ಲಿಂದ ಬಂದವು?, ಅದರ ಅಮ್ಮ ಎಲ್ಲಿ?, ಅವುಗಳ ಮನೆಯಲ್ಲಿ?, ಆ ಗುಬ್ಬಚ್ಚಿಗಳು ಹಾಲು ಕುಡಿಯತಪ್ಪಾ? ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡುವುದೆ ಒಂದು ಆನಂದದ ಅನುಭವ ನೀಡುತ್ತದೆ.

    ಮೊನ್ನೆ ಸಂಜೆ ಸೂರ್ಯ ಪಶ್ಚಿಮದಲ್ಲಿ ವಿರಮಿಸಿ ಆಗಿತ್ತು  ಏಳು ಗಂಟೆಯ ಹೊತ್ತಿನಲ್ಲಿ ನಾನು ಮನೆಯ ಬಾಗಿಲನ್ನು ತೆರೆದಾಗ  ಅಲ್ಲೇ ಬಾಗಿಲ ಮುಂದೆ ಹಾರಾಡುತ್ತಾ ಇದ್ದ ಆ ಗುಬ್ಬಚ್ಚಿಗಳು ಭಯಗೊಂಡು ನಮ್ಮ ಮನೆಯನ್ನು ಪ್ರವೇಶಿಸಿದವು. ಅನೀರಿಕ್ಷಿತವಾಗಿ ಮನೆಯೊಳಕ್ಕೆ ಪ್ರವೇಶಿಸಿದ್ದ ಗುಬ್ಬಚ್ಚಿಗಳು ಆತಂಕಗೊಂಡು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರಾಡಲು ಪ್ರಾರಂಭಿಸಿದವು ಇದನ್ನು ನೋಡಿದ ನನ್ನ ಮಗಳು ಅಪ್ಪ ಅವು ಯಾಕೆ ನಮ್ಮ ಮನೆಗೆ ಬಂದಿವೆ. ಅವುಗಳ ಮನೆಗೆ ಯಾಕೆ ಹೋಗಿಲ್ಲ ಎಂದು ಕೇಳಿದಳು. ಅವು ತಪ್ಪಿಸಿಕೊಂಡು ಬಂದಿವೆ ಎಂದೆ. ಆ ಗುಬ್ಬಚ್ಚಿಗಳನ್ನು ಹೇಗಾದರೂ ಹೊರಗೆ ಕಳುಹಿಸುವ ಪ್ರಯತ್ನಕ್ಕೆ ಕೈಹಾಕಿ ಮನೆಯಲ್ಲಿ ಇರುವ ಕಿಟಕಿ ಬಾಗಿಲುಗಳನ್ನು ತೆರೆದೆ ಆದರೆ ಆ ಗುಬ್ಬಚ್ಚಿಗಳು ಅಲ್ಲಿಂದ ಇಲ್ಲಿಗೆ ಹಾರಾಡಿ ಸುಮ್ಮನಾದವೆ ಹೊರತು ಹೊರಗಡೆ ಹೋಗಲಿಲ್ಲ. ಆಗ ನನ್ನ ಮಗಳು ಆ ಗುಬ್ಬಚ್ಚಿಗಳು ನಮ್ಮ ಹಾಗೆ ಅಲ್ಲವಪ್ಪ ಅದಕ್ಕೂ ರಾತ್ರಿ ಹೆದರಿಕೆಯಾಗುತ್ತೆ ಆದ್ದರಿಂದ ಅವುಗಳು ಇಲ್ಲೇ ಇರಲಿ ಎಂದಾಗ.ನಮ್ಮ ಮನೆಯ ಪಕ್ಕದಲ್ಲಿ ಇದ್ದ ಬೇಲಿಯಲ್ಲಿ ಆ ಗುಬ್ಬಚ್ಚಿಗಳ ಪುಟ್ಟ ಕಂದಮ್ಮಗಳ ತಮ್ಮ ಅಮ್ಮನ ಬರುವಿಕೆಗೆ ಕಾಯುತ್ತಾ ಚಿರಾಟದ ಆಕ್ರಂದನವನ್ನು ಕೇಳಿ ನನ್ನ ಮನಸ್ಸು ಆತಂಕಗೊಂಡಿತ್ತು. ಹಾಗೆಯೇ ಕೆಲವು ಕ್ಷಣ ಸುಮ್ಮನಿದ್ದು ಗುಬ್ಬಚ್ಚಿಗಳು ನನ್ನ ರೂಮಿ ಒಂದು ಡಬ್ಬದ ಮೇಲೆ ಕುಳಿತುಕೊಂಡಾಗ ಇವುಗಳ ಬೀಡು ಇಂದು ಈ ಕಾಂಕ್ರೀಟ್ ನ ನಾಲ್ಕು ಗೊಡೆಗಳ ಮಧ್ಯೆ ಎಂದು ಅವುಗಳು ನಿರ್ಧರಿಸಿ ಆಗಿದೆ ಆದ್ದರಿಂದ ಈ ಗುಬ್ಬಚ್ಚಿಗಳ ವಾಸ್ತವ್ಯ ಇವತ್ತು ಇಲ್ಲೆ ಎಂದು ತೀರ್ಮಾನಿಸಿದೆ. ಬೆಳಿಗ್ಗೆ ಬೆಳಕು ಹರಿಯುತ್ತಿದ್ದಂತೆ ಆ ಗುಬ್ಬಚ್ಚಿಗಳು ಚಿವ್ ಚಿವ್ ಎಂದು ಕೂಗುವುದಕ್ಕೆ ಶುರುಮಾಡಿದ್ದವು ಅವುಗಳ ಕೂಗನ್ನು ಕೇಳಿದ ತಕ್ಷಣ ಎದ್ದ ನನ್ನ ಮಗಳು ಅಪ್ಪ  ಇವತ್ತು ನಮ್ಮ ಜೊತೆಯಲ್ಲಿ ಇರುತ್ತಾ ಎಂದು ಕೇಳಿದಳು ಇಲ್ಲ ಮಗಳೆ ಅದಕ್ಕೆ ಪುಟಾಣಿ ಮರಿಗಳು ಇದೆ ಅವು ನಿನ್ನೆಯಿಂದ ಕಾಯುತ್ತಾ ಇರುತ್ತವೆ ಆ ಮರಿಗಳಿಗೆ ಊಟ ಮಾಡಿಸಬೇಕು ಅದಕ್ಕೆ ಅವುಗಳನ್ನು ಮನೆಯಿಂದ ಹೊರಗಡೆ ಕಳುಹಿಸೋಣ ಎಂದು ಕಿಟಕಿಗಳನ್ನು ತೆರೆದೆ ಕಿಟಕಿಯಿಂದ ಬೆಳಕಿನ ಪ್ರಕಾಶ ಬರುತ್ತಿದ್ದಂತೆ ಹೊರಗಡೆ ಪ್ರಪಂಚಕ್ಕೆ ತನ್ನ ತೆರೆದ ರೆಕ್ಕಗಳಿಂದ ಹಾರುತ್ತಾ ಈ ಬಂಧನದಿಂದ ಮುಕ್ತವಾಗಿ ತಮ್ಮ ಪುಟ್ಟ ಮರಿಗಳೊಂದಿಗೆ ಪುರ್ನಮಿಲನಗೊಂಡಿದ್ದನ್ನು ನೋಡಿ ಆ ಕಂದಮ್ಮಗಳು ಚಿವ್‌ ಚಿವ್ ಎಂದು ತಮ್ಮ ಸಂತೋಷದಿಂದ ಚೀರುತ್ತಿದ್ದವು.