ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಹಲವಾರು ಕನ್ನಡದ ಸಾಹಿತ್ಯ ವಲಯದ ವಿಷಯಗಳು ಚಚಿಱ ಆಗುತ್ತಿರುವುದರಿಂದ ಬ್ಲಾಗ್ ತಾಣಗಳು ಸುಖಾ ಸುಮ್ಮನೆ ನಿಂತ ನೀರಿನಂತೆ ಆಗಿದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಬ್ಲಾಗ್ನಲ್ಲಿ ಬರೆಯುವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಮತ್ತೋಮ್ಮೆ ನನ್ನ ಜೋಳಿಗೆಯನ್ನು ಪುನರರಾಂಭಿಸಲು ಪ್ರಯತ್ನಿಸುತ್ತೀದ್ದೇನೆ.
ಜೋಳಿಗೆ
ಕಥೆ, ಲೇಖನ, ವಿಮರ್ಶೆ, ಚಲನಚಿತ್ರ, ನಾಟಕ.
Popular Posts
-
ಆಕಾಶದ ನೀಲಿಯಲ್ಲಿ ಚಂದ್ರತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೊಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ? ರಾಷ್ಟ್ರ ಕವಿ ಜಿ.ಎಸ್.ಶಿವರುದ್...
-
ಮಕ್ಕಳು ನೋಡಿ ಕಲಿಯಬೇಕು, ಹಾಡಿ ಕಲಿಯಬೇಕು, ಆಡಿ ಕಲಿಯಬೇಕು: ನಲಿನಲಿಯುತ್ತ ಓದಬೇಕು. "ಅರ್ಥವಿಲ್ಲ, ಸ್ವಾರ್ಥವಿಲ್ಲ, ಬರಿಯ ಸಹಜಪ್ರಾಸಾ " ಇಂತಹ ಪದ್ಯ ರಚನೆಗ...
-
" ಒಲವೇ ಪೂಜೆ , ಇದುವೆ ಅವರ ರಸಜೀವನದ ಓಜೆ" ಸೂಫೀ ಪ್ರೇಮ ಕಾವ್ಯ ಈ ಮೊದಲು ನಾನು ಡಿ.ವಿ.ಜಿ ಯವರ ಅನುವಾದಿಸಿರುವ ಉಮರನ ಒಸುಗೆಯಲ್ಲಿ ಉಮರ‍್ ಖಯ್...
-
ನಾನೇಕೆ ಬರೆಯುತ್ತೇನೆ? ಸುಮ್ಮನೆ ಯಾವುದೋ ಹಪಾಹಪಿಗೆ ಬಿದ್ದು ಇರುವುದನ್ನೆಲ್ಲ ಬಿಟ್ಟು ಇರದದರೆಡೆಗೆ ತುಡಿವುದೇ ಜೀವನ ಎಂದು ತಿಳಿದು ಈ ಬ್ಲಾಗನ್ನು ತೆರೆದಿದ್ದೇನೆ. ಈ ಬ್...
-
ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ ನಾನು ಇತ್ತೀಚಿಗೆ ಓದಿದ ನನ್ನ ಸ್ನೇಹಿತ ಹಾಲಿವುಡ್ ಚಲನಚಿತ್ರಗಳ ಬಗ್ಗೆ ಬರೆದ ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ ಈ ...
-
" ಆಧುನಿಕ ಕಾಲ" ಎಂದೆಂದಿಗೂ ಆಧುನಿಕ ಕಾಲವೇ........... ಈ ಲೇಖನ ನನ್ನ ಸ್ನೇಹಿತ ವಿನಯಕುಮಾರ ಎಂ.ಜಿ., ಪ್ರೀತಿಯಿಂದ ಜೋಳಿಗೆ ಬ್ಲಾಗ್ ಗೆ ಬರೆದು ಕೊಟ್ಟಿದ...
-
ಕಿಲಿಮಂಜಾರೋ,ತಾಜಾ ತಾನ್ಜಾನಿಯ ದೇಶದ ಪ್ರವಾಸ ಕಥನದ ಪುಸ್ತಕ ಪರಿಚಯ. ಈ ಜಗತ್ತಿಗೆ ಹಾಗೇ ಎಲ್ಲಿಂದಲೋ ಬರುತ್ತವೆ, ಮತ್ತೆಲ್ಲಿಗೋ ಹೋಗುತ್ತವೆ, ಈ ಬಂದು ಹೋಗುಗಳ ನಡುವೆ ...
-
ಬಾರಿಸು ಕನ್ನಡ ಡಿಂಡಿಮವ ಕರ್ನಾಟಕದ ರಾಜಧಾನಿಯಲ್ಲಿ ಶಿವ. ೪೦ ವರ್ಷಗಳ ನಂತರ ಕರ್ನಾಟಕದ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ೭೭ನೇ ಕನ್ನಡ ಸಾಹಿತ್ಯ ಸಮೇಳ್ಮನ ಪ್ರಸ್...
-
ಉಕ್ಕುವ ಕಡಲಿನ ಅಲೆಗಳಂತೆ ಮನಸ್ಸು (ಒರೆ ಕಡಲ್) ಚಿತ್ರ : ಒರೆ ಕಡಲ್ (೨೦೦೭) ಭಾಷೆ: ಮಲಯಾಳಂ. ಪಾತ್ರವರ್ಗ: ಮುಮ್ಮುಟಿ, ಮೀರಾ ಜಾಸ್ಮಿನ್, ರಮ್ಯ ಕೃಷ್ಣ, ಜಯಕುಮಾರ‍್ ನ...
-
ಈ ಬ್ಲಾಗ್ ಗೆ ಪ್ರೀತಿಯಿಂದ ಜಿ.ಬಿ.ಅರುಣಪ್ರಸಾದ್ ಬರೆದು ಕೊಟ್ಟ ಕಥೆ. ಕನಸಾ ಮಾರುವಾ ಚೆಲುವ..... .. ಮೂರು ತುಂಬುವ ಹೊತ್ತಿಗೆ ಮನೆಯವರಿಗೆ ಬೇಡವಾಗಿದ್ದ ನಾನು ...
Monday, September 29, 2014
Wednesday, December 14, 2011
Tuesday, December 13, 2011
ಉಕ್ಕುವ ಕಡಲಿನ ಅಲೆಗಳಂತೆ ಮನಸ್ಸು (ಒರೆ ಕಡಲ್)
ಉಕ್ಕುವ ಕಡಲಿನ ಅಲೆಗಳಂತೆ ಮನಸ್ಸು (ಒರೆ ಕಡಲ್)ಚಿತ್ರ : ಒರೆ ಕಡಲ್ (೨೦೦೭)
ಭಾಷೆ: ಮಲಯಾಳಂ.
ಪಾತ್ರವರ್ಗ: ಮುಮ್ಮುಟಿ, ಮೀರಾ ಜಾಸ್ಮಿನ್, ರಮ್ಯ ಕೃಷ್ಣ, ಜಯಕುಮಾರ‍್
ನಿರ್ದೇಶಕರು: ಶ್ಯಾಂಸುಂದರ‍್.
ಸಂಗೀತ ನಿರ್ದೇಶಕರು: ಓಸುಪೆಚ್ಚನ್.
ಛಾಯಾಗ್ರಹಣ: ಆಗಲಪ್ಪನ್
ಭಾಷೆ: ಮಲಯಾಳಂ.
ಪಾತ್ರವರ್ಗ: ಮುಮ್ಮುಟಿ, ಮೀರಾ ಜಾಸ್ಮಿನ್, ರಮ್ಯ ಕೃಷ್ಣ, ಜಯಕುಮಾರ‍್
ನಿರ್ದೇಶಕರು: ಶ್ಯಾಂಸುಂದರ‍್.
ಸಂಗೀತ ನಿರ್ದೇಶಕರು: ಓಸುಪೆಚ್ಚನ್.
ಛಾಯಾಗ್ರಹಣ: ಆಗಲಪ್ಪನ್
ಈ ಚಲನಚಿತ್ರವು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಬಹುಚರ್ಚಿತವಾಗುತ್ತಿರುವ ವಿವಾಹೇತರ ಸಂಬಂಧದಿಂದ ಆಗುವ ಮಾನಸಿಕ ತೊಳಲಾಟವನ್ನು ಈ ಚಿತ್ರ ನಿರ್ದೇಶಕರು ಸೂಕ್ಷ್ಮವಾಗಿ ಅನಾವರಣಗೊಳಿಸಿದ್ದಾರೆ.
ಈ ಚಲನಚಿತ್ರ ಬೆಂಗಾಳಿಯ ಸುನಿಲ್ ಗಂಗೋಪಾಧ್ಯಾಯರ ಕಾದಂಬರಿ ಹೀರಕ್ ದೀಪ್ತೀ ಕಾದಂಬರಿ ಆಧಾರಿತ ಚಿತ್ರವಾಗಿದ್ದು ಈ ಚಲನಚಿತ್ರದಲ್ಲಿ ಬರುವ ಪಾತ್ರಗಳಲ್ಲಿ ಮುಮ್ಮುಟಿ (ಪ್ರೊ.ನಾಥನ್) ಮತ್ತು ಮೀರಾಜಾಸ್ಮಿನ್ (ದೀಪ್ತಿ)ಯಾಗಿ ರಮ್ಯ ಕೃಷ್ಣ(ಬೇಲಾ) ನಟಿಸಿದ್ದಾರೆ.
ಬಡತನ ಮತ್ತು ಅಭಿವೃದ್ದಿಯ ಬಗ್ಗೆ ಪ್ರಬಂಧ ಹಾಗೂ ಲೇಖನಗಳನ್ನು ಬರೆದು ಅಂತರರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡಿರುವ ಅರ್ಥಶಾಸ್ತ್ರಜ್ಞ ಮತ್ತು ಅದೇ ಅಪಾರ್ಟಮೆಂಟ್ ನಲ್ಲಿ ವಾಸಮಾಡುತ್ತಿರುವ ಬಡಮಧ್ಯಮ ವರ್ಗದ ಮಹಿಳೆ ದೀಪ್ತಿಯ ನಡುವೆ ನಡಿಯುವ ಸಂಬಂಧಗಳ ಸೂಕ್ಷ್ಮತೆಯನ್ನು ತೆರೆದಿಡುತ್ತದೆ. ತನ್ನ ಪತಿಗೆ ಉದ್ಯೋಗವಿಲ್ಲದ ಕಾರಣ ಮನೆಯಲ್ಲಿ ಅರ್ಥಿಕ ಬಿಕ್ಕಟು ಉಂಟಾಗುವುದರಿಂದ ತನ್ನ ಗಂಡ ಕೆಲಸಕ್ಕಾಗಿ ಬೆಂಗಳೂರು ನಗರಕ್ಕೆ ಬಂದಿರುವ ಸಮಯದಲ್ಲಿ ತನ್ನ ಮಗನಿಗೆ ಜ್ಚರ ಬಂದು ಆ ಹುಡಗನಿಗೆ ಚಿಕಿತ್ಸೆ ಕೊಡಿಸಲು ಹೆಣಗಾಡುವ ದೀಪ್ತಿಯ ಕಷ್ಟವನ್ನು ನೋಡಿ ಮರುಗಿ ನೆರವಾಗುವ ಪ್ರೊ.ನಾಥನ್ ದೀಪ್ತಿಯ ಗಂಡನಿಗೆ ಕೆಲಸ ಕೊಡಿಸುವ ಭರವಸೆ ನೀಡುತ್ತಾನೆ. ಇದರೀಂದ ದೀಪ್ತಿಗೆ ಪ್ರೊ.ನಾಥನ್ ಎಂದರೆ ಪ್ರೀತಿ. ನಾಥನ್ ಗೆ ಹೆಂಗಸ ಸಂಗಡ (ಆತ್ಮೀಯತೆ) ವನ್ನು ಬಯಸುವ ನಾಥನ್ ದೀಪ್ತಿಯನ್ನು ಸಹ ಇಷ್ಟಪಡುತ್ತಾನೆ. ಅದರಂತೆ ದೀಪ್ತಿಯೊಂದಿಗೆ ದೈಹಿಕ ಸಂಪರ್ಕವು ಬೆಳೆಯುತ್ತದೆ.
ಪ್ರೊ.ನಾಥನ್ ದೈಹಿಕ ಸಂಪರ್ಕದಿಂದ ದೀಪ್ತಿಯಲ್ಲಿ ಅವನ ಕುಡಿ ಬೆಳಯಲಾರಂಭಿಸುತ್ತದೆ. ತನ್ನೊಳಗೆ ಬೆಳೆಯುವ ಅವನ ಕುಡಿಯೊಂದಿಗೆ ಪ್ರೊ.ನಾಥನ್ ಮೇಲೆ ಪ್ರೀತಿಯು ಹೆಚ್ಚಾಗುತ್ತ ಹೋಗುತ್ತದೆ. ಆದರೆ ಈ ವಿಷಯವನ್ನು ಪ್ರೊ.ನಾಥನ್ ಗೆ ತಾನು ಹೊತ್ತುಕೊಂಡಿರುವ ಮಗು ನಿನ್ನದು ಎಂದು ಹೇಳಲು ಹೋದರು ಅದು ಆಗುವುದಿಲ್ಲ. ಆದರೆ ನಾಥನ್ ಗೆ ತಾನು ಏನು ಅಲ್ಲವೆಂದು ತಿಳಿಸಿದಾಗ ಅವಳ ಮನಸ್ಸಿನ ನೋವು ಉಕ್ಕುವ ಕಡಲಿನ ಅಲೆಗಳಂತೆ ಮನಸ್ಸಿನ ಮೇಲೆ ಆಕ್ರಮಣ ಮಾಡುತ್ತದೆ. ಮಗುವಿನ ಜನನದ ಬಳಿ ಮಾನಸಿಕ ತೊಳಲಾಟದಿಂದ ದೀಪ್ತಿ ಹುಚ್ಚಿಯಾಗುತ್ತಾಳೆ. ಇದರ ಏನು ತಿಳಿಯದ ಪತಿ ದೀಪ್ತಿಗೆ ಚಿಕಿತ್ಸೆ ನೀಡಿ ದೀಪ್ತಿಯನ್ನು ಮತ್ತೆ ಸರಿಪಡಿಸುತ್ತಾನೆ.
ಈ ಚಿತ್ರ ಸಂಕೀರ್ಣತೆ ಪಡೆದು ಕೊಳ್ಳುತ್ತಾ ಇರುವ ಸಮಯದಲ್ಲಿ ಪ್ರೊ.ನಾಥನ್ ಗೆಳತಿ ಬೇಲಾ (ರಮ್ಯಕೃಷ್ಣ) ನಾಥನ್ ಮನಸ್ಸಿನೊಳಗಿರುವ ಅಂತರ್ಪಟವನ್ನು ಸರಿಸಿ ವಸ್ತುಸ್ಧಿತಿಯನ್ನು ಅರಿವುವನ್ನು ಮೂಡಿಸುತ್ತಾಳೆ. ಪ್ರೊ.ನಾಥನ್ ಗೆ ಬೇಲಾ ಮೇಲು ಪ್ರೀತಿ ಹುಟ್ಟತ್ತದೆ. ಪ್ರೊ.ನಾಥನ್ ಕೂಡ ಬೇಲಾ ಪ್ರೀತಿಯ ಹುಚ್ಚನಾಗಿ ಬಿಡುತ್ತಾನೆ.
ಈ ಚಿತ್ರದಲ್ಲಿ ಬರುವ ದೀಪ್ತಿಯ ಪಾತ್ರ ನಿತ್ಯ ಜೀವನದಲ್ಲಿ ಸಾಮಾಜದಲ್ಲಿ ಒತ್ತಡಗಳ ನಡುವೆ ಬದುಕುತ್ತಿರುವ ಹೆಂಗಸರ ಸಾಮಾನ್ಯ ಬದುಕನ್ನು ತೆರದಿಡುವ ಪಾತ್ರದಲ್ಲಿ ಮೀರಾಜಾಸ್ಮಿನ್ ಅತ್ಯಂತ ಸೂಕ್ಷ್ಮವಾಗಿ ಅಭಿನಯಿಸಿ ಮನಸ್ಸಿನೊಳಗೆ ಪಾತ್ರ ಪೂರ್ಣವಾಗಿ ಅವರಸಿಕೊಂಡು ಬಿಡುತ್ತದೆ. ಈ ಚಲನ ಚಿತ್ರ ವಿವಾಹೇತರ ಸಂಬಂಧದ ಬಗ್ಗೆ ಯಾವುದೇ ಸಂದೇಶ ನೀಡುವುದಿಲ್ಲವಾದರೂ ಮಸಸ್ಸಿನೊಳಗಿನ ಸೂಕ್ಷ್ಮತೆಯನ್ನು ನಿರ್ದೇಶಕರು ತೆರದಿಡುವಲ್ಲಿ ನಿರ್ದೇಶಕರಾದ ಶ್ಯಾಮಸುಂದರ‍್ ಯಶಸ್ವಿಯಾಗಿದ್ದಾರೆ.
ಈ ಚಲನಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ಮತ್ತು ವಿರ್ಮಶೆಗಳು ಬಂದಿದ್ದು ಈ ಚಲನಚಿತ್ರಕ್ಕೆ ರಾಷ್ಟ್ರ ಮಟ್ಟದ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಲನಚಿತ್ರ ಹಾಗೂ ಉತ್ತಮ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ ಲಭಿಸಿದೆ. ಕೇರಳ ರಾಜ್ಯದ ಎರಡನೇ ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿಗಳಿಸಿದೆ.
Thursday, September 29, 2011
ಸ್ವಾರ್ಥ, ನಿಸ್ವಾರ್ಥ ಮನಸ್ಸುಗಳ ಅನಾವರಣ.
ಇತ್ತೀಚಿಗೆ ದೈನಂದಿನ ಧಾರವಾಹಿಗಳಲ್ಲಿ ಈ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿರುವ ಅನಾವರಣ ಧಾರವಾಹಿಯನ್ನು ಕಳೆದು ಹದಿನೈದು ವಾರಗಳಿಂದ ಪ್ರಸಾರವಾಗುತ್ತಿದ್ದು ಈ ಧಾರವಾಹಿಗಿಂತ ಹಿಂದೆ ಸೇತುರಾಮ್ ನಿರ್ದೇಶನದ ಮಂಥನ ಧಾರವಾಹಿಯು ಸಹ ಒಂದು ಸಾಮಾಜಿಕ ಕಳಕಳಿಯಳ್ಳು ಹಾಗೂ ಮಧ್ಯಮವರ್ಗದ ಕುಟುಂಬದ ತಳುಮಳಗಳನ್ನು ಕಟ್ಟಿಕೊಟ್ಟಿದ ಸೇತುರಾಮ್ ಧಾರವಾಹಿ ಇದ್ದಕ್ಕಿದ್ದಂತೆ ಈಟಿವಿಯಿಂದ ಕಾಣೆಯಾಗಿತ್ತು.ಯಾಕೋ ಗೊತ್ತಿಲ್ಲ. ಆದರೆ ಇತ್ತೀಚಿಗೆ ಪ್ರಸಾರವಾಗುತ್ತಿರುವ ಅನಾವರಣ ಧಾರವಾಹಿ ಮಧ್ಯಮವರ್ಗದಲ್ಲಿ ಬದುಕಿದ ಒಂದು ಸಂಸಾರದಲ್ಲಿ ನಡೆಯುವ ಭಾವನೆಗಳ ಘರ್ಷಣೆ, ಸ್ವಾರ್ಥ, ನಿಸ್ವಾರ್ಥ ಮನಸ್ಸುಗಳ ದ್ವಂದ್ವವನ್ನು ಹೊರಹಾಕುತ್ತ ಇರುವುದರಿಂದ ಈ ಧಾರವಾಹಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಈ ಧಾರವಾಹಿಯಲ್ಲಿ ಬರುವ ಪಾತ್ರಗಳ ಅಂತರ್ಯಕ್ಕೆ ಇಳಿದು ನಟನೆ ಮಾಡುತ್ತಿರುವುದರಿಂದ ಈ ಧಾರವಾಹಿಯಲ್ಲಿ ನಟಿಸಿರುವ ಎಲ್ಲಾ ಪಾತ್ರಧಾರಿಗಳು ಪ್ರೇಕ್ಷಕರನ್ನು ಹಿಡಿಟ್ಟಿರುವುದರಲ್ಲಿ ಸಂಶಯವೇ ಇಲ್ಲ.
ಈ ಧಾರವಾಹಿಯ ನಿರ್ದೇಶಕರು ಇತ್ತೀಚಿನ ದಿನಗಳಲ್ಲಿ ಇಂತಹ ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡಾಗ ಎಂತಹ ಪ್ರೇಕ್ಷಕರಿಗೆ ಇಂತಹ ಧಾರವಾಹಿಗಳು ತಲುಪತ್ತವೇ ಎಂಬ ಸಂಶಯವು ಸಹ ಮೂಡುತ್ತದೆ. ಆದರೆ ಇಂತಹ ಪ್ರಯತ್ನವನ್ನು ನಿರ್ದೇಶಕರು ಮಾಡಿರುವುದು ಒಂದು ಒಳ್ಳೆಯ ಪ್ರಯತ್ನ ಇಂದಿನ ದಿನಗಳ ಪರಿಸ್ಧಿತಿಗೆ ಅವಶ್ಯಕವೆನ್ನಿಸುವ ಹಾಗೆ ಈ ಧಾರವಾಹಿಯಲ್ಲಿ ಬರುವ ಪಾತ್ರಗಳು ನಮ್ಮ ಸುತ್ತಮುತ್ತ ಇರುವ ಸಮಾಜದಲ್ಲಿ ನಡೆಯುತ್ತಿರುವ ದೈನಂದಿಕ ಬದುಕಿನ ವಾಸ್ತವ ಸತ್ಯವನ್ನು ತೆರೆದಿಡುತ್ತಿದೆ. ಈ ಧಾರವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ತಮ್ಮದೇ ಅದಂತಹ ನಿರ್ದಿಷ್ಟವಾದ ಚೌಕಟ್ಟುನ್ನು ನಿರ್ಮಿಸಿ ಪಾತ್ರಗಳನ್ನು ಪೋಷಿಸಿರುವುದು ಈ ಧಾರವಾಹಿ ಮತ್ತೊಂದು ಗಮನ ಸೆಳೆಯುವ ಅಂಶ ಹಾಗೂ ಈ ಧಾರವಾಹಿಯ ಸಂಭಾಷಣೆಯು ಇವತ್ತಿನ ಪ್ರಸ್ತುತತೆಗೆ ವಾಸ್ತವತೆಗೆ ಹತ್ತಿರವಾಗಿರುವುದರಿಂದ ಒಂದು ವರ್ಗದ ಪ್ರೇಕ್ಷಕರನ್ನು ಸೆಳೆದಿಡುವಲ್ಲಿ ಈ ಧಾರವಾಹಿ ಯಶಸ್ವಿಯಾಗಿ ಹಾಗೂ ನಿರ್ದೇಶನದಲ್ಲಿ ಧಾರವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ತಮ್ಮದೇ ಆದ ಛಾಪನ್ನು ಒತ್ತಿಸಿ ಧಾರವಾಹಿಯ ಯಶಸ್ವಿಗೊಳಿಸಿದ್ದಾರೆ ನಿರ್ದೇಶಕರು. ಈ ಧಾರವಾಹಿಯಲ್ಲಿ ಅಪ್ಪ, ಮಗನ ಸಂಬಂಧ, ತಾಯಿ ಅಥವಾ ಮಗಳ ಸಂಬಂಧಗಳ ನಡುವೆ ಆಗುವ ತಲ್ಲಣಗಳನ್ನು ನೈಜತೆಯಿಂದ ಹೇಳುವುದಕ್ಕೆ ಹೊರಟಿರುವುದು ಈ ಧಾರವಾಹಿಯ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ತಾಯಿ ಮತ್ತು ತಂದೆ ತನ್ನ ಮಕ್ಕಳನ್ನು ಅರ್ಥ ಮಾಡಿಕೊಂಡಿರುವ ರೀತಿ ಇವತ್ತಿನ ರಾಜಕೀಯ ವ್ಯವಸ್ಧೆಯಲ್ಲಿ ಉನ್ನತ ಹುದ್ದೆಯಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಒಳ ಆಳವನ್ನು ಹಾಗೂ ನೈತಿಕತೆ ಹಾಗೂ ಕ್ರೌರ್ಯದ ನಡುವೆ ನಡೆಯುವ ಹೋರಾಟ ಇವತ್ತಿನ ಜಾಗತೀಕರಣದಿಂದ ಬದುಕ ಮತ್ತು ಬಾಂಧವ್ಯಗಳು ಹೇಗೆ ದುಸ್ತರವಾಗುತ್ತಿದೆ ಎಂಬ ಅಂಶವನ್ನು ಈ ಧಾರವಾಹಿಯಲ್ಲಿ ಕಾಣಬಹುದು. ಈ ಧಾರವಾಹಿಯನ್ನು ವೀಕ್ಷಣೆ ಮಾಡುತ್ತಿದ್ದಾಗ ಖಲೀಲ್ ಗಿಬ್ರಾನ್ ಮಕ್ಕಳ ಬಗ್ಗೆ ಬರೆದಿರುವ ಮಾತುಗಳು ನನೆಪಾಗುವುದು ಖಂಡಿತ.
ನಿಮ್ಮ ಮಕ್ಕಳನ್ನು ನಿಮ್ಮ ಮಕ್ಕಳೆಂದು ತಿಳಿಯಬೇಡಿ.ಅವು, ಬದುಕು ತನ್ನ ಇರುವಿಕೆಯನ್ನು ಬಯಸಿ
ಅರಳಿಸಿಕೊಂಡ ಮಕ್ಕಳು ಅಷ್ಟೆ!
ಮಕ್ಕಳು ನಿಮ್ಮ ಮೂಲಕ ಬರುತ್ತಾರೆ ಅಷ್ಟೆ.
ನಿಮ್ಮಿಂದ ಅಲ್ಲ.
ಅವರು ನಿಮ್ಮ ಜೊತೆಯಲ್ಲಿರುತ್ತಾರೆ . ಆದರೆ ಅವರು
ನಿಮಗೆ ಸೇರಿದವರಲ್ಲ.
ಅವರಿಗೆ ನೀವು ನಿಮ್ಮ ವಿಶ್ವಾಸವನ್ನು ಧಾರೆಯೆರೆದು ಬಲ್ಲಿರಿ:
ಆದರೆ ನಿಮ್ಮ ಚಿಂತನೆಯನ್ನು ಧಾರೆಯೆಲಾರರಿ.
ಮಕ್ಕಳ ದೇಹಕ್ಕೆ ವಾಸವನ್ನು ಒದಗಿಸಬಲ್ಲಿರಿ, ಅವರ
ಆತ್ಮಕ್ಕಲ್ಲ. ಏಕೆಂದರೆ ಆ ಮಕ್ಕಳ ಆತ್ಮಕ್ಕೆ ನಾಳೆಯ
ಒಡಲಿನಲ್ಲಿ ವಾಸ. ಅದನ್ನು ನೀವು ಮತ್ತೆ ದರ್ಶಿಸಲಾರಿರಿ.
ಕನಸಿನಲ್ಲಿ ಕೂಡ ಕಾಣಲಾರಿರಿ.
ನೀವು ಬೇಕಾದರೆ ಅವರಂತಾಗಲು ಪ್ರಯತ್ನಿಸಿ, ಆದರೆ
ಅವರು ನಿಮ್ಮಂತೆ ಆಗುವಂತೆ ಮಾಡಬೇಡಿ.
ಏಕೆಂದರೆ ಬದುಕು ಹಿಂದಕ್ಕೆ ಚಲಿಸಲಾರದು. ಅಥವಾ
ನಿನ್ನೆಯೊಂದಿಗೆ ಉಳಿಯಲಾರದು.
ನೀವು ಬಿಲ್ಲುಗಳು. ನಿಮ್ಮ ಮಕ್ಕಳು ಆ ಬಿಲ್ಲಿನಿಂದ
ಬಿಟ್ಟ ಜೀವಂತ ಬಾಣಗಳು.
ಬಿಲ್ಲುಗಾರನು ಅತೀತದ ಕಡೆಗೆ ಗುರಿಯಿಟ್ಟು ತನ್ನ
ಕೈಲಾದ ಮಟ್ಟಿಗೆ ಧನಸ್ಸುನ್ನು ಬಾಗಿಸುತ್ತಾನೆ.
ಆಕರ್ಣಾಂತವಾಗಿ ಸೆಳೆದುಬಿಟ್ಟ ಆ ಬಾಣಗಳು
ಅದಷ್ಟು ಬೇಗ ಗುರಿತಲುಪಲೆಂದು ಹಾಗೆ ಮಾಡುತ್ತಾನೆ.
ಬಿಲ್ಲುಗಾರ ಕೈಯ ಧನುಸ್ಸಿನಂತೆ ನೀವು ಬಾಗುವುದಾದರೆ
ಸಂತೋಷವಾಗಿ ಬಾಗಿರಿ. ಏಕೆಂದರೆ ತೊಟ್ಟ
ಬಾಣದ ಮೇಲೆ ಅವನಿಗೆ ಎಷ್ಟು ಪ್ರೀತಿ ಇದೆಯೋ
ದೃಢವಾಗಿ ನಿಲ್ಲುವ ಬಿಲ್ಲಿನ ಮೇಲೂ ಅವನಿಗೆ
ಅಷ್ಟೇ ಪ್ರೀತಿಯಿದೆ.
ಈ ಪದ್ಯದ ಪ್ರತಿಯೊಂದು ಸಾಲು ಸಹ ಈ ದಾರವಾಹಿ ಪಾತ್ರಗಳಿಗೆ ಅನ್ವಯವಾಗುತ್ತದೆ. ಹಾಗೆಯೇ ನಿಸಾರ ಅಹಮದ್ ರವರ ಮನಸು ಗಾಂಧಿ ಬಜಾರು ಕವನ ಸಂಕಲನ ಸಿಡಿದ ಸದ್ದು ಕವನದಲ್ಲಿ ಬರುವ ಈ ಸಾಲು ಸಹ ತುಂಬ ಅನ್ವಯವಾಗುತ್ತದೆ.
ಒಂದೆ ತಾಯಿಯ ತೊಡೆಯ ಮೇಲಾಡಿ
ಬೆಳೆದವರು ನಾನು ನೀನೂ ಮತ್ತೆ ಅವನು ಕೂಡ
ಅದರವನಾದರ್ಶ ಆಕ್ಷಾಂಕ್ಷೆಗಳೆ ಬೇರೆ:
ನಾವು ಇಲ್ಲಿಯೆ ಕೊಳೆತರವನೋ ಏರಿದ ಮೋಡ
ಗಾಳಿಯೊಂದೇ, ನೀರು ಬೆಳಕು ಒಂದೇ,
ಕೊನೆಗೆ ಇಲ್ಲೆಲ್ಲರಿಗೂ ಒಂದೆ ಒಂದಾವರಣ
ಎಂಥ ಅಚ್ಚರಿಯಣ್ಣ.
Tuesday, June 28, 2011
ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ
ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ
ನಾನು ಇತ್ತೀಚಿಗೆ ಓದಿದ ನನ್ನ ಸ್ನೇಹಿತ ಹಾಲಿವುಡ್ ಚಲನಚಿತ್ರಗಳ ಬಗ್ಗೆ ಬರೆದ ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿವರೆಗೆ ಈ ಪುಸ್ತಕದ ಬಗ್ಗೆ ಏನು ಬರೆಯಬೇಕು ಅಂತ ಯೋಚಿಸುತ್ತಿರುವಾಗ ನನ್ನ ಮತ್ತು ವಿನಯ್ ನಡುವೆ ಕಳೆದ ಐದು ವರ್ಷಗಳ ನನ್ನ ಅವನ ಗೆಳತನ ಈ ಹಂತದವರೆಗೆ ನಮ್ಮನ್ನು ತಂದು ನಿಲ್ಲಿಸಿದೆ. ವಿನಯ್ ಬಗ್ಗೆ ಹೇಳಬೇಕೆಂದರೆ ನನಗೆ ಇವನ ಪರಿಚಯವಿರಲಿಲ್ಲ ನನ್ನ ಸ್ನೇಹಿತ ಅರುಣ್ ಪ್ರಸಾದ್ ನನಗೆ ಇವನ ಪರಿಚಯ ಮಾಡಿಸಿದ. ಆದರೆ ಮನುಷ್ಯನ ಬಾಂಧವ್ಯಗಳು ಸುಖಾಸುಮ್ಮನೆ ಏರ್ಪಾಡುವುದಿಲ್ಲ ಎಲ್ಲೋ ಇದ್ದ ನಾವು ಇಂದು ಸ್ನೇಹತರಾಗಿ ಸೇರಿದ್ದೇವೆ. ಅಲ್ಲಿಂದ ಇಲ್ಲಿನವರೆವಿಗೂ ನನ್ನ ಮತ್ತು ಅವನ ಸ್ನೇಹದ ರಥದಲ್ಲಿ ಇಬ್ಬರು ಪ್ರಯಾಣ ಮಾಡುತ್ತ ಇದ್ದೇವೆ. ನನ್ನ ವೈರುಧ್ಯಗಳು, ಚಿಂತನೆಗಳ ಬೇರೆಯಾಗಿದ್ದು ನನ್ನ ನ್ಯೂನತೆಗಳು ಬಗ್ಗೆ ಅವನು ಟೀಕೆ ಮಾಡಿದ್ದು ಇದೆ. ನಾನು ಅವನ ಬಗ್ಗೆ ಟೀಕೆ ಮಾಡಿದ್ದು ಇದೆ. ಯಾವ ಮನುಷ್ಯಗಳಿಗೆ ಸಮಸ್ಯೆಗಳ ಬರುವುದಿಲ್ಲವೋ ಅವುಗಳನ್ನು ಬಿಡಿಸುವ ಬಗ್ಗೆ ಯಾರಲ್ಲಾದರೂ ಉತ್ತರವನ್ನು ಹುಡುಕುತ್ತಾರೆ. ಆದರೆ ಯಾವ ವ್ಯಕ್ತಿ ಸಮಸ್ಯೆಗಳ ನಡುವೆಯೇ ಬದುಕುತ್ತಿರುತ್ತಾನೋ ಅವನಿಗೆ ಜೀವನವೇ ದಿನವೂ ಒಂದು ಪಾಠ ಕಲಿಸುತ್ತಿರುತ್ತದೆ. ಇಂತಹ ಸಮಸ್ಯೆಗಳು ಇದ್ದು ಸಹ ಇವೆಲ್ಲವನ್ನು ಮೀರಿ ಬೆಳಯುವುದು ಒಬ್ಬ ಸಕ್ರಿಯ ಮತ್ತು ಕ್ರಿಯಾಶೀಲ ವ್ಯಕ್ತಿಗೆ ಮಾತ್ರ ಸಾಧ್ಯ ಎಂತಹ ಆಸಾಧ್ಯಗಳನ್ನು ಸಾಧ್ಯ ಮಾಡುವ ನಿಟ್ಟಿನಲ್ಲಿ ಪ್ರಯೋಗಶೀಲರಾಗುತ್ತಾರೆ.ಇಂತಹ ವ್ಯಕ್ತಿತ್ವ ಹೊಂದಿರುವ ವಿನಯ್ ದು.
ಒಂದು ಸಮಸ್ಯೆಗಳನ್ನು ಚರ್ಚೆಗೆತ್ತಿಕೊಂಡು ಬೇಕಾದಷ್ಟು ಬಾರಿ ನನಗೂ ಅವನಿಗೆ ಜಗಳವಾಗಿದ್ದು ಇದೆ. ಆದರೆ ಅವನಲ್ಲಿರುವ ಒಂದು ಪ್ರಯೋಗಾತ್ಮಕ ವ್ಯಕ್ತಿತ್ವ ಹೊಸತನ್ನು ಕಲಿಯಲು ಎಡೆಮಾಡಿಕೊಟ್ಟಿದೆ. ನಾನು ಜಾಗತಿಕ ಮಟ್ಟದ ಚಲನಚಿತ್ರಗಳನ್ನು ನೋಡಿರಲಿಲ್ಲ ನಾನು ಕನ್ನಡ, ತಮಿಳು, ಹಿಂದಿ, ತೆಲುಗು ಹಾಗೂ ದೂರದರ್ಶನದಲ್ಲಿ ಆ ದಿನಗಳಲ್ಲಿ ಬರುತ್ತಿದ್ದ ರಾಷ್ಟ್ರೀಯ ಪುರಸ್ಕಾರ ವಿಜೇತ ಚಲನಚಿತ್ರಗಳನ್ನು ಭಾನುವಾರ ಮಧ್ಯಾಹ್ನ ಪ್ರಸಾರ ಮಾಡುತ್ತಿದ್ದ ಅವಧಿಯಲ್ಲಿಷ್ಟೆ ನೋಡುತ್ತಿದ್ದ ನೆನಪು. ಹಾಲಿವುಡ್ ಸಿನಮಾಗಳಾದ ಕಿಂಗ್ ಕಾಂಗ್, ಜುರಾಸಿಪಾರ್ಕ್, ಬಾಂಡ್ ಚಲನಚಿತ್ರಗಳನ್ನು ನೋಡಿದ್ದು ಬಿಟ್ಟರೆ ಬೇರೆ ದೇಶದ ಯಾವುದೇ ಚಲನಚಿತ್ರಗಳನ್ನು ನೋಡಿದ ನೆನಪುಗಳು ಇಲ್ಲ. ಆದರೆ ನಾನು ಮಾಜಿದ್ ಮಜ್ಜಿದಿಯ "ಫಾದರ್" ಚಲನಚಿತ್ರವನ್ನು ಮೊದಲಬಾರಿಗೆ ನೋಡಿದಾಗ ಇಂತಹ ಜಾಗತಿಕ ಮಟ್ಟದ ಬೇರೆ ಬೇರೆ ದೇಶದ ಚಲನಚಿತ್ರಗಳನ್ನು ನೋಡದೆ ಇನ್ನು ಮೂರ್ಖರಾಗಿ ಕಾಲಕಳೆಯುತ್ತಿದ್ದವಲ್ಲ ಎಂಬ ಮನೋಭಾವ ಕಾಡಲು ಶುರುಮಾಡಿತ್ತು. ಚಲನಚಿತ್ರಗಳು ಹಾಗೂ ದೃಶ್ಯ ಮಾಧ್ಯಮ ಬೇರೆ ಬೇರೆ ದೇಶದ ಸಂಸ್ಕೃತಿಯನ್ನು, ಪ್ರಕೃತಿ, ಜನರ ಜೀವನ ಅಭ್ಯಸಿಸುವುದರ ಜೊತೆಗೆ ವಿವಿಧ ದೇಶದ ಭಾಷೆಯನ್ನು ಅರ್ಥಿಕ ಸ್ಧಿತಿ-ಗತಿಗಳನ್ನು ಗ್ರಹಿಸುವುದರಿಂದ ನಮ್ಮ ಯೋಚನಾಶಕ್ತಿಯು ಸಹ ವಿಸ್ತೃತಗೊಳ್ಳವುದು. ಅಂದಿನಿಂದ ಇದುವರೆವಿಗೂ ಸುಮಾರು ದೇಶಗಳ ಚಲನಚಿತ್ರಗಳನ್ನು ನೋಡಿ ಅವುಗಳ ಬಗ್ಗೆ ಚರ್ಚೆ ಮಾಡುತ್ತಿದ್ದುದ್ದು ಉಂಟು. ಹೀಗೆ ಅವನು ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಂಡು ಯಾವುದರ ಕಡೆಗೂ ಗಮನ ಕೊಡದೆ ಯಾವುದೇ ಒಂದು ಕೆಲಸ ಕೈಗೆತ್ತಿಕೊಂಡರೆ ಬೇಗ ಮುಗಿಸುವುದಿಲ್ಲವೆಂದು ನಾನು ಹಲವಾರು ಬಾರಿ ಅವನ ಜೊತೆ ಪ್ರೀತಿಯಿಂದ ಜಗಳವಾಡಿದ್ದು ಇದೆ. ಅವನ ಇರ್ಷೆಗಳನ್ನು ಒಂದು ಹಿಡಿತಕ್ಕೆ ತಂದು ಒಂದು ಕೆಲಸ ಮುಗಿದ ಮೇಲೆ ಇನ್ನೊಂದು ಕೆಲಸಕ್ಕೆ ಕೈಹಾಕು ಎಂದು ಹೇಳಿ ಸಾಕಾಗಿತ್ತು ಆದರೆ ಅವನ ಸಿನಿಮಾ ತುಡಿತ, ಸಿನಿಮಾದ ಬಗ್ಗೆ ಇರುವ ಗ್ರಹಣ ಶಕ್ತಿ ಅವನಲ್ಲಿ ಒಂದು ಹೊಸ ಆಯಾಮಕ್ಕೆ ಅವನನ್ನು ತಂದು ನಿಲ್ಲಿಸಿದೆ. ಅವನ ಸ್ನೇಹಿತರ ಪ್ರಪಂಚ ಕೂಡ ಅಷ್ಟೇ ದೊಡ್ಡದಾಗಿದ್ದು ಇವನ ಪ್ರಯೋಗಾತ್ಮಕತೆಗೆ ಮಂಡ್ಯದ ಸ್ನೇಹಿತರೂ ಕೂಡ ಸ್ಪಂದಿಸಿದ್ದಾರೆ. ಇವನ ಹಪಾಹಪಿ ಹೇಗೆ ಎಂದರೆ ಎಲ್ಲವನ್ನು ಒಂದೇ ಬಾರಿಗೆ ಮಾಡುವ ತವಕ ಅದರಲ್ಲಿ ಸೋಲುತ್ತೇನೋ, ಗೆಲ್ಲುತ್ತೇನೋ ಅದು ಮುಖ್ಯವಲ್ಲ ಏನಾದರೂ ಪ್ರಯೋಗ ಮಾಡುತ್ತಲೆ ಇರುವುದು ಇವನ ಜಾಯಮಾನ ಅದೆಲ್ಲದರ ಫಲವೇ ಇಂದು ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿಯವರೆಗೆ ಪುಸ್ತಕವಾಗಿ ಹೊರಬಂದಿದೆ.
ಈ ಪುಸ್ತಕಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಯುವ ಬರಹಗಾರರ ಚೊಚ್ಚಲ ಕೃತಿಗೆ ಧನ ಸಹಾಯ ಪಡೆದ ಕೃತಿಯಾಗಿದೆ. ಥೇಮ್ಸ್ ನಿಂದ ಮಿಸ್ಸಿಸ್ಸಿಪ್ಪಿಯವರೆಗೆ ಈ ಪುಸ್ತಕದಲ್ಲಿ ಹಾಲಿವುಡ್ ನಲ್ಲಿ ಅತ್ಯಂತ ಜನಪ್ರಿಯ ಚಲನಚಿತ್ರಗಳನ್ನು ಆರಿಸಿಕೊಂಡಿದ್ದು ಈ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಇಂಟರ್ ನೆಟ್ ಹಲವಾರು ವಿಮರ್ಶಕರು ಪುಟಗಟ್ಟಲೇ ಈ ಚಲನಚಿತ್ರಗಳ ಬಗ್ಗೆ ವಿಮರ್ಶೆ ಮಾಡಿದ್ದಾರೆ. ಆದರೆ ಜಾಗತಿಕ ಮಟ್ಟದ ಸಿನಿಮಾಗಳ ಬಗ್ಗೆ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಪುಸ್ತಕಗಳು ಲಭ್ಯವಿಲ್ಲದಿರುವುದು. ಇದಕ್ಕೆ ಕಾರಣವಿರಬಹುದು. ಆದರೆ ಇಂತಹ ಪ್ರಯೋಗಕ್ಕೆ ತಾನು ಒಳಪಡಿಸಿಕೊಂಡಾಗ ಆಯ್ದಕೊಂಡಿರುವ ಚಲನಚಿತ್ರಗಳು ಬಂದು ಹಲವಾರು ವರ್ಷಗಳೇ ಕಳೆದಿವೆ. ಈ ಚಲನಚಿತ್ರಗಳನ್ನು ಸ್ಟಾರ್ ಮೂವೀಸ್ ಇನ್ನಿತರ ಚಾನೆಲ್ ಗಳಲ್ಲಿ ಆಗ್ಗಾಗ ಮರುಪ್ರಸಾರಗೊಂಡಿದ್ದು ಇಂತಹ ಚಲನಚಿತ್ರಗಳ ಬಗ್ಗೆ ಬರೆದರೆ ಅಂತಹ ಪುಸ್ತಕಗಳನ್ನು ಕೊಂಡು ಓದುವ ಓದುಗರು ಇದ್ದಾರೋ ಇಲ್ಲವೋ ಎಂಬ ಅನುಮಾನ ಎಂತಹವರನ್ನೂ ಸಹ ಕಾಡುತ್ತದೆ. ಆದರೂ ಸಹ ಇಂತಹ ಸಾಧ್ಯತೆಗಳಿಗೆ ಕೈ ಹಾಕಬೇಕಾದರೆ ಅವನಲ್ಲಿರುವ ವಿಶ್ವಾಸ ಮುಖ್ಯವಾಗುತ್ತೆ. ಅದಕ್ಕೆ ತನ್ನ ಬರವಣಿಗೆಯ ಶಕ್ತಿಯ ಪೂರಕವಾಗಿರಬೇಕಾಗುತ್ತದೆ.
ಈ ಪುಸ್ತಕದಲ್ಲಿ ಬರುವ ಆರು ಚಲನಚಿತ್ರಗಳು ಜಾಗತಿಕ ಸಿನಿಮಾರಂಗದಲ್ಲಿ ಒಳ್ಳೆಯ ಹೆಸರನ್ನು ಮಾಡಿರುವಂತಹ ಚಲನಚಿತ್ರಗಳನ್ನು ಈ ಪುಸ್ತಕದ ಲೇಖಕರು ಆಯ್ಕೆ ಮಾಡಿಕೊಂಡಿದ್ದು ಈ ಆಯ್ಕೆಗಳು ಸಹ ಭಿನ್ನತೆಯಿಂದ ಕೊಡಿದೆ ಈ ಚಲನಚಿತ್ರಗಳ ಕನ್ನಡ ಸಾಹಿತ್ಯದಲ್ಲಿ ಮೊದಲ ಪ್ರಯತ್ನವಾಗಿದ್ದು ಈ ಮೊದಲು ಕೆ.ವಿ.ಸುಬ್ಬಣ್ಣನವರ ಬೈಸಿಕಲ್ ಥೀವ್ಸ್ ಪುಸ್ತಕ ಕನ್ನಡ ಸಾಹಿತ್ಯಕ್ಕೆ ಒಂದು ಕೊಡುಗೆಯಾಗಿತ್ತು. ನಂತರ ಎ.ಎನ್.ಪ್ರಸನ್ನ ರವರ ಚಿತ್ರಕಥೆ ಹಾಗೂ ಕನ್ನಡ ಚಿತ್ರರಂಗದ ಬಗ್ಗೆ ಬರೆದ ಸಿನಿಮಾಯಾನ ಎಂಬ ಕೆಲವೇ ಬೆರಳಣಿಕೆಯಷ್ಟು ಪುಸ್ತಕಗಳು ಬಂದಿರುವುದು ಆದರೆ ಜಾಗತಿಕ ಸಿನಿಮಾದ ಬಗ್ಗೆ ಕನ್ನಡದಲ್ಲಿ ಬಂದಿರುವುದು ಕಡಿಮೆ. ಆದರೆ ಈ ಲೇಖಕರು ಈ ಪುಸ್ತಕದಲ್ಲಿ ಹಾಲಿವುಡ್ ಸಿದ್ದ ಸೂತ್ರಬದ್ದವಾದ ಚಲನಚಿತ್ರಗಳನ್ನು ಇಂತಹ ಪ್ರಯತ್ನವನ್ನು ಈ ಚಿಕ್ಕವಯಸ್ಸಿನಲ್ಲಿ ಇವರು ಆಯ್ಕೆ ಮಾಡಿಕೊಂಡಿರುವುದು ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ಆಶಾಭಾವದೊಂದಿಗೆ ಲಭ್ಯವಾಗಿದೆ. ಆದರೆ ಈ ಪುಸ್ತಕವೇ ಮೊದಲು ಅಥವಾ ಕೊನೆಯಾಗಬಾರದು ಮುಂದಿನ ದಿನಗಳಲ್ಲಿ ಈ ಲೇಖಕರಿಂದ ಸಿನಿಮಾ ಜಗತ್ತಿನ ಅತ್ಯಂತ ಶ್ರೇಷ್ಟ ಚಲನಚಿತ್ರಗಳು ಮತ್ತು ನಿರ್ದೇಶಕರೆಂದು ಪರಿಗಣಿತರಾಗಿರುವ ಚಲನಚಿತ್ರ ಮತ್ತು ನಿರ್ದೇಶಕರ ಬಗ್ಗೆ ಮತ್ತೊಂದು ಪುಸ್ತಕ ಹೊರಬರುವ ಬಗ್ಗೆ ಆಶಯವನ್ನು ಸಹ ಇಟ್ಟುಕೊಂಡಿರುತ್ತೇವೆ. ಈ ಪುಸ್ತಕದ ಮುನ್ನಡಿಯನ್ನು ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ಬರೆದಿದ್ದು ಮತ್ತು ಬೆನ್ನುಡಿಯನ್ನು ಲೇಖಕರಾದ ಜಿ.ಎನ್.ಮೋಹನ್ ಬರೆದಿದ್ದು ಈ ಪುಸ್ತಕದ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿರುತ್ತಾರೆ. ಈ ಪುಸ್ತಕದಲ್ಲಿ ಬರುವ ಚಲನಚಿತ್ರಗಳಾದ ಜೋಸೆಫ್ ಕಾನ್ರಾಡ್ ನ "ಹಾರ್ಟ್ ಆಫ್ ಡಾರ್ಕನೆಸ್" ಕೃತಿ ಆಧಾರಿತ ಫ್ರಾನ್ಸಿಸ್ ಫೋರ್ಡ್ ಕಪ್ಪೋಲ ನಿರ್ದೇಶನದ "ಅಪೋಕ್ಯಾಲಿಪ್ಸ್ ನವ್" ಚಿತ್ರ, ಚಾರ್ಲಿಚಾಪ್ಲಿನ್ ನಿರ್ದೇಶನದ "ಮಾರ್ಡ್ನ್ ಟೈಮ್ಸ್" ಜೇಮ್ಸ್ ಬಾಂಡ್ "ಟುಮಾರೋ ನೆವರ್ ಡೈಸ್" ಹಾಗೂ ಆಲೈಸ್ ವಾಕರ್ಳ "ದಿ ಕಲರ್ ಪರ್ಪಲ್" ಕೃತಿ ಆಧಾರಿತ ಸ್ಟೀವನ್ ಸ್ಪೀಲ್ ಬರ್ಗ ನಿರ್ದೇಶನದ "ದಿ ಕಲರ್ ಪರ್ಪಲ್", ಮೆಲ್ ಗಿಬ್ಬನ್ಸ್ "ಅಪೋಕ್ಯಾಲಿಪ್ಟೋ" ರೋಮನ್ ಪೊಲಾನಸ್ಕಿಯ "ದಿ ಪಿಯಾನಿಸ್ಟ್" ಚಿತ್ರಗಳ ಬಗ್ಗೆ ಅಪರೂಪದ ಪ್ರಯತ್ನವನ್ನು ಈ ಲೇಖಕರು ಮಾಡಿದ್ದಾರೆ. ಈ ಲೇಖಕರ ವಿಭಿನ್ನವಾದ ಗ್ರಹಿಕೆ ಮತ್ತು ಸಿನಿಮಾದಲ್ಲಿರುವ ಆಳವಾದ ಆಸಕ್ತಿ ಇವುಗಳಿಂದ. ಇಂದಿನ ಪೀಳಿಗೆಗೆ ಜಾಗತಿಕ ಮಟ್ಟದ ಸಿನಿಮಾಗಳನ್ನು ನೋಡುವ ಹವ್ಯಾಸವುಳ್ಳವರಿಗೆ ಈ ಪುಸ್ತಕವೊಂದು ಹೊಸ ಅಭಿರುಚಿಯನ್ನು ಹುಟ್ಟಿಸುವುದರಲ್ಲಿ ಸಂಶಯವೇ ಇಲ್ಲ. ಈ ಆರು ಚಲನಚಿತ್ರಗಳಲ್ಲಿ ಬಳಸಿರುವ ವಸ್ತು ವಿಶೇಷತೆ ಚಲನಚಿತ್ರಗಳ ವಿಶ್ಲೇಷಣೆಗಳು ಒಂದು ಹೊಸ ವಿಭಿನ್ನ ದೃಷ್ಟಿಕೋನವನ್ನು ಸೃಷ್ಟಿಮಾಡುವುದರಲ್ಲಿ ಈ ಲೇಖನಗಳು ಗಮನ ಸೆಳಯುತ್ತವೆ. ಈ ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ವಿಶೇಷತೆಯನ್ನು ತಂದು ಕೊಟ್ಟಿದೆ. ಇಂತಹ ಪ್ರಯೋಗಶೀಲ ಹೊಸ ಬರಹಗಾರರು ಕನ್ನಡ ಸಾಹಿತ್ಯಕ್ಕೆ ಅವಶ್ಯಕತೆ ಇರುವುದರಿಂದ ಇಂತಹ ಪುಸ್ತಕಗಳನ್ನು ಕನ್ನಡದ ಓದುಗರ ಪ್ರೋತ್ಸಾಹಿಸಿದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಪುಸ್ತಕಗಳು ಕನ್ನಡ ಸಾಹಿತ್ಯಕ್ಕೆ ಬರುವುದರಲ್ಲಿ ಸಂಶಯೇ ಇಲ್ಲ. ಈ ಪುಸ್ತಕದ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಇ-ಮೇಲ್ ಗೆ ಕಳುಹಿಸಿ vinaysamvedhane@gmail.com or mandyafilmsociety@gmail.com
ಪುಸ್ತಕ ದೊರೆಯುವ ಸ್ಧಳ : ಮಂಡ್ಯ ಫಿಲಂ ಸೊಸೈಟಿ,
"ಹೆಣ್ಣು", ೪ನೇ ಅಡ್ಡರಸ್ತೆ (ಕಬ್ಬಾಳಮ್ಮ ದೇವಸ್ಧಾನದ ಹತ್ತಿರ)
ಹೊಸಹಳ್ಳಿ, ಮಂಡ್ಯ.
ಲೇಖಕರ ದೂರವಾಣಿ ಸಂಖ್ಯೆ: 9972391577
Saturday, May 21, 2011
"ಒಲವೇ ಪೂಜೆ, ಇದುವೆ ಅವರ ರಸಜೀವನದ ಓಜೆ"
"ಒಲವೇ ಪೂಜೆ, ಇದುವೆ ಅವರ ರಸಜೀವನದ ಓಜೆ"
ಸೂಫೀ ಪ್ರೇಮ ಕಾವ್ಯ
ಈ ಮೊದಲು ನಾನು ಡಿ.ವಿ.ಜಿ ಯವರ ಅನುವಾದಿಸಿರುವ ಉಮರನ ಒಸುಗೆಯಲ್ಲಿ ಉಮರ‍್ ಖಯ್ಯಾಂ ಕೆಲವೊಂದು ರುಬಾಯಿಗಳನ್ನು ಡಿ.ವಿ.ಜಿಯವರ ಕೃತಿ ಶ್ರೇಣಿಯಲ್ಲಿ ಓದಿದ್ದ ನೆನಪನ್ನು ಬಿಟ್ಟರೆ ನನ್ನ ಪೀಳಿಗೆಯವರಿಗೆ ಇದನ್ನೆಲ್ಲ ಓದಿ ಅರಗಿಸಿಕೊಳ್ಳುವುದು ದೊಡ್ಡ ಮಾತು ಎಂದು ಅಲ್ಲಿಗೆ ಕೈಬಿಟ್ಟಿದೆ. ಆದರೆ ಇತ್ತೀಚಿಗೆ ಜೋಗಿಯವರ ಸೂಫಿ ಕಥೆಗಳನ್ನು ಓದಲು ಪ್ರಾರಂಭಿಸುತ್ತಿದ್ದಂತೆ ಸೂಫಿ ಕಥೆಗಳಲ್ಲಿನ ಅಂತ:ಶಕ್ತಿ ಹೊಸ ಅನುಭವವನ್ನು ನೀಡಿತು. ಆದ್ದರಿಂದ ಸೂಫಿ ಕಥೆಗಳ ಪುಸ್ತಕವನ್ನು ಓದಿದ ಮೇಲೆ ಮೊದಲು ಸೂಫೀ ಸಾಹಿತ್ಯದ ಬಗ್ಗೆ ತಿಳಿದು ಕೊಳ್ಳಬೇಕೆಂಬ ಆಸೆ ಶುರುವಾಯಿತು. ಆಗ ನಾನು ನನ್ನ ದೊಡ್ಡಪ್ಪನ ಹತ್ತಿರ ಈ ಬಗ್ಗೆ ಕೇಳಿದಾಗ ಮ.ಸು.ಕೃಷ್ಣಮೂರ್ತಿಯವರ ಸೂಫೀ ಪ್ರೇಮ ಕಾವ್ಯ ಪುಸ್ತಕ ಮನೆಯಲ್ಲಿ ಇದೆ ಅದನ್ನು ಒಮ್ಮೆ ಓದು ನಿನಗೆ ಸೂಫೀ ಸಾಹಿತ್ಯ ಎಲ್ಲಿ ಹುಟ್ಟಿತು ಎಂಬ ಬಗ್ಗೆ ನಿನಗೆ ಮಾಹಿತಿ ಸಿಗುತ್ತದೆ ಎಂದು ಹೇಳಿದರು. ನಾನು ಓದಲು ಶುರವಾದಂತೆ ನನಗೆ ಮನಸ್ಸಿಗೆ ತುಂಬಾ ಹತ್ತಿರವಾಗುವಂತಹ ವಿಚಾರದೊಂದಿಗೆ ಪುಸ್ತಕ ಇಷ್ಟವಾಗುತ್ತ ಹೋಯಿತು. ಆದ್ದರಿಂದ ಈ ಸೂಫೀ ಪ್ರೇಮ ಕಾವ್ಯದ ಪುಸ್ತಕದಲ್ಲಿ ಬರುವ ಕೆಲವೊಂದು ವಿಷಯಗಳನ್ನು ತಿಳಿಸುವ ಪ್ರಯತ್ನ ಇಲ್ಲಿದೆ.
ಸೂಫೀ ಸಂತರ ಬಗ್ಗೆ ಓದಲು ಶುರುಮಾಡಿದಾಗ ಒಂದೊಂದು ವಿಶೇಷ ಅರ್ಥದಲ್ಲಿ ಒಲವೇ ಪೂಜೆ, ಇದುವೆ ಅವರ ರಸಜೀವನದ ಓಜೆ. ಒಲವೇ ತಮ್ಮ ಬದುಕಾಗಿ ಉಳ್ಳ ಈ ಸೂಫೀ ಸಂತರು ಅರೇಬಿಯಾದ ಮರುಭೂಮಿಯಲ್ಲಿ ಪ್ರೇಮದ ಹುಚ್ಚು ಹೊಳೆಯನ್ನು ಹರಿಸಿದವರು. ಒಮ್ಮೆ ಸೂಫೀ ಸಂತ ರಮಣಿ ರಬಿಯಾಳನ್ನು ಯಾರೋ ಕೇಳಿದರಂತೆ " ನೀನು ದೇವರನ್ನು ಪ್ರೀತಿಸುವೆಯಾ?" ಎಂದು ಹೌದು , ಪ್ರೀತಿಸುತ್ತೇನೆ ಎಂದು ಅವಳು ಹೇಳಿದಳಂತೆ " ಹಾಗಾದರೆ ಸೈತಾನನ್ನು ದ್ವೇಷಿಸುವೆಯಾ? ಅದಕ್ಕೆ ಅವಳು ಹೇಳಿದಳಂತೆ " ನನ್ನ ಹೃದಯದಲ್ಲಿ ಪ್ರೇಮ ಎಷ್ಟೊಂದು ತುಂಬಿ ತುಳುಕಾಡುತ್ತಿದೆಯೆಂದರೆ ಅದರಲ್ಲಿ ಇತರರನ್ನು ದ್ವೇಷಿಸಲು ಜಾಗವೇ ಇಲ್ಲ ಎಂದು.
ಇಸ್ಲಾಮಿನ ಒಡಲಿನಿಂದ ಮೂಡಿದ ಈ ಧರ್ಮ ಧರ್ಮಾಂಧರ ದುರಾಗ್ರಹಕ್ಕೆ ಸಿಲುಕಿ ನಲುಗಿತು. ಇದರಿಂದ ಹಲವಾರು ಸೂಫಿ ಕವಿಗಳು ತಲೆದಂಡ ತೆತ್ತರು. ನೋವೇ ಅವರ ಹೃದಯದ ಹಾಡಾಗಿ, ಹೂವಾಗಿ ಅರಳಿ ಇಡೀ ಇರಾನಿ ಸಾಹಿತ್ಯದಲ್ಲಿ ಅದು ಘಮಘಮಸಿತು. ಸೂಫೀ ಸಂತರ ವೇದನೆ ನಿವೇದನೆಗಳಿಂದ ಇಡೀ ಫಾರಸೀ ಸಾಹಿತ್ಯ ಪ್ರಖ್ಯಾತವಾಗಿದೆ. ಇಸ್ಲಾಮಿನೊಂದಿಗೆ ಸೂಫೀ ಸಾಹಿತ್ಯ ಭಾರತಕ್ಕೆ ಬಂದು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ ಅರಬ್, ಇರಾನ್ ಮತ್ತು ಭಾರತ ಸೂಫೀ ಸಾಹಿತ್ಯದ ಪ್ರಮುಖಸ್ಧಾನಗಳೆಂದು ಕರೆಯಲಾಯಿತು. ಸೂಫೀ ಸಾಹಿತ್ಯ ಹಿಂದಿ, ಬೆಂಗಾಳಿ, ಉರ್ದುವಿನಲ್ಲಿ ಹೊಸತೊಂದು ಆಯಾಮವನ್ನು ಸೃಷ್ಟಿಮಾಡಿತು. ಈ ಸೂಫೀ ಪ್ರೇಮದ ಮಹಾಪೂರವನ್ನು ಇಮ್ಮಡಿಗೊಳಿಸಿತು. ಈ ಸೂಫೀ ಪ್ರೇಮ ಕಾವ್ಯದ ಬಗ್ಗೆ ಓದಬೇಕಾದರೆ ಮೊದಲನೆಯದು ಸೂಫೀ ಧರ್ಮ, ದರ್ಶನ ಮತ್ತು ಅದರ ಹುಟ್ಟು ಬೆಳವಣಿಗೆಯ ಇತಿಹಾಸವನ್ನು ತಿಳಿದುಕೊಳ್ಳಬೇಕು. ಇರಾನಿನ ಖ್ಯಾತ ಸೂಫೀ ಸಂತರಾದ ಸನಾಯ, ಅತ್ತಾರ‍್, ಶಬ್‌ಸತರಿ, ಉಮರ‍್ ಖಯ್ಯಾಂ,ಶೇಕ್ ಸಾದಿ ರೂಮಿಜಾಮಿ ಮತ್ತು ಹಾಫಿಜ್ ಹಾಗೂ ಭಾರತೀಯ ಸೂಫೀ ಸಾಹಿತ್ಯದಲ್ಲಿ ಹಿಂದಿಯ ಸೂಫೀ ಕವಿ ಮಲಿಕ್ ಮಹಮದ್ ಜಾಯಸಿಯ, ಅಮೀರ‍್ ಖಸ್ರೋ ಹೀಗೆ ಹಲವಾರು ಸೂಫೀ ಸಂತರ ವಿಶ್ವದಲ್ಲಿ ಸೂಫೀ ಸಾಹಿತ್ಯವನ್ನು ಪ್ರವರ್ಧಮಾನಕ್ಕೆ ತಂದಂತಹ ಮಹಾಪುರುಷರು.
ಸೂಫೀ ಶಬ್ದದ ಉತ್ಪತ್ತಿ ಹಜರತ್ ಮಹಮದರು ತೀರಿಕೊಂಡ ಇನ್ನೂರು ವರ್ಷದ ನಂತರ ಆಸ್ತಿತ್ವಕ್ಕೆ ಬಂದಂತೆ ಕಾಣುತ್ತದೆ. ಸೂಫೀ ಎಂದರೆ ಕೆಲವರ ಪ್ರಕಾರ ಮದೀನಾದಲ್ಲಿ ಮಸೀದಿಯೆದುರಿಗೆ ಒಂದು ಜಗುಲಿ "ಸುಫ್ವಾ" ಇತ್ತು ಅದರ ಮೇಲೆ ಕುಳಿತುಕೊಳ್ಳುತ್ತಿದ್ದ ಫಕೀರರೇ ಸೂಫೀಗಳು ಎಂದು ಇನ್ನೊಂದು ಮತದ ಪ್ರಕಾರ ಸೂಫಾ ಎಂದರೆ " ಪಂಕ್ತಿ" "ಸಾಲು" ಎಂದರ್ಥ "ಸಾಫ್" ಎಂದರೆ ಚೊಕ್ಕಟ ಅಥವ ಶುದ್ದ ಎಂಬ ಶಬ್ದದಿಂದ ಬಂದಿದೆ. ಹಾಗೂ ಸೂಫೀ ಸಂತರು ಶುಭ್ರ ಜೀವನ ನಡೆಸುತ್ತಿದ್ದರಿಂದ ಅವರು ಸೂಫೀ ಎನಿಸಿಕೊಂಡರು. ಆದರೆ ಮತ್ತೊಂದು ಮತದ ಪ್ರಕಾರ ಸೂಫೀ ಶಬ್ದ "ಸೋಫಿಯಾ" "ಸೋಫೋ ಎಂದರೆ ಜ್ಞಾನ ಎಂದು ಇವರ ಜ್ಞಾನದಿಂದಾಗಿಯೇ ಇವರನ್ನು ಸೂಫೀ ಎಂದು ಕರೆಯುತ್ತಿದ್ದರು. ಆದರೆ ಜನಾಭಿಪ್ರಾಯದ ಪ್ರಕಾರ ಸೂಫೀ ಶಬ್ದ "ಸೂಫ್" ಎಂದರೆ ಉಣ್ಣೆ ಎಂಬ ಶಬ್ದದಿಂದ ಬಂದಿದೆ. ಸೂಫೀ ಸಂತರು ಉಣ್ಣೆಯ ಟೋಪಿಯನ್ನು, ಕಂಬಳಿಯನ್ನು ಹೆಚ್ಚಾಗಿ ತೊಡುತ್ತಿದ್ದರಿಂದ "ಸೂಫೀ ಎಂದು ಹೆಸರು ಬಂದಿತೆಂದು ಪ್ರತಿತೀ ಇದೆ.
ಸೂಫೀ ಮತದ ಬಗ್ಗೆ ಹಲವಾರು ವಾಖ್ಯಾನಗಳು ಇವೆ. "ಕೇವಲು ಪರಮಾತ್ಮನಿಗೆ ತಿಳಿಯಬಲ್ಲ ಕಾರ್ಯಗಳನ್ನು ಪ್ರತಿಪಾದಿಸುವ, ಮತ್ತು ಯಾವಾಗಲೂ ಪರಮಾತ್ಮನ ಜೊತೆಯಲ್ಲಿ ಪರಮಾತ್ಮನಿಗೆ ಮಾತ್ರ ಬಲ್ಲ ರೀತಿಯಲ್ಲಿ ಜೀವಿಸುವವನೇ ಸೂಫೀ.
ಸೂಫೀ ಮತ ಪೂರ್ಣವಾಗಿ ಆತ್ಮಾನುಶಾಸನ. ಯಾವುದೇ ವಸ್ತುವಿನ ಮೇಲೆ ಅಧಿಕಾರವನ್ನು ಹೊಂದದಿರುವುದು ಮತ್ತು ಯಾವುದೇ ವಸ್ತುವಿನ ಅಧಿಕಾರಕ್ಕೆ ಒಳಪಡಿದಿರುವುದೇ ಸೂಫೀ ಮತ.
" ನಿನ್ನ ತಲೆಯಲ್ಲಿರುವುದನ್ನೂ ತೆಗೆದು ಹೊರಗೆ ಹಾಕುವುದು, ನಿನ್ನ ಕೈಯಲ್ಲಿರುವುದನ್ನೂ ತೆಗೆದು ಇತರರಿಗೆ ಕೊಟ್ಟು ಬಿಡುವುದು,ಮತ್ತು ನಿನ್ನ ಮೇಲೆ ಘಟಿಸುವ ಎಲ್ಲ ಘಟನೆಗಳಿಂದಲೂ ದೂರ ಸರಿಯುವುದೇ ಸೂಫೀ ಮತ.
ಹೀಗೆ ಹಲವಾರು ವಿಚಿನ್ನ ಅರ್ಥಗಳನ್ನು ನೀಡುವ ಒಂದು ಶಬ್ದ ಸೂಫೀ ಮತ. ಈ ಸೂಫೀಗಳಲ್ಲಿ ಯಾವುದೇ ವಿಶೇಷ ವರ್ಗಗಳಿಲ್ಲ, ಯಾವುದೇ ನಿಯಮ ಬದ್ದ, ಕಟ್ಟಪಾಡುಗಳಿಲ್ಲ ಇವರ ಮಾರ್ಗಗಳು ಅನಂತ. ಒಂದೇ ಮಾತಿನಲ್ಲಿ ಹೇಳುವುದಾದರೆ "ಚೆಲುವೆ ದೇವರು ಒಲವೇ ಪೂಜೆ" ಇದೇ ತಮ್ಮ ಬದುಕಾಗಿರುವ ಜನ ಸೂಫೀಗಳು.
ಈ ರೀತಿ ಸೂಫೀಗಳು ಪರಮಾತ್ಮನೊಡನೆ ಪ್ರೀತಿಯಿಂದ ಸಂಬಂಧವನ್ನು ಸ್ಧಾಪಿಸಿ ಉಪಾಸನೆ ಮಾಡುವ ಅನುಭವಿ ಮುಸಲ್ಮಾನರ ಉದಾರ ವರ್ಗವನ್ನು ಸೂಫೀ ಎಂದು ಕರೆಯಬಹುದು. ಮುಸ್ಮಿಂ ಅನುಭವವನ್ನು "ತಸವ್ವುಫ್" ಇಲ್ಲವೆ ಸೂಫೀ ಧರ್ಮ ಎಂದು ಕರೆಬಹುದು. ಸೋಫಿಯ, ಸೂಫಿ ಹಾಗೂ ಸಂಸ್ಕ್ರತದ "ಸ್ವಭಾಸ" ಶಬ್ದಗಳ ನಡುವೆ ತುಂಬ ಹೋಲಿಕೆ ಇದೆ.
ಸೂಫೀ ಮತವನ್ನು ಅರಿಯಬೇಕಾದರೆ ಮೊದಲು ಇಸ್ಲಾಮ್ ದೇಶಗಳಾದ ಅರಬ್ ಮತ್ತು ಇರಾನಿನ ಹಿನ್ನೆಲೆಯನ್ನು ಅರಿಯಬೇಕಾಗುತ್ತದೆ. ಅರಬ್ ಮತ್ತು ಇರಾನಿನ ಸಂಸ್ಕಾರ ಮತ್ತು ನಂಬಿಕೆಗಳು ತುಂಬ ಭಿನ್ನ ಭೌಗೋಳಿಕ ಪರಿಸ್ಧಿತಿಯಿಂದಾಗಿ ಅರಬರಲ್ಲಿ ಪ್ರಜಾತಾಂತ್ರಿಕವಾದ ಭಾವನೆಗಳು ಪ್ರಾಬಲ್ಯ ಹೆಚ್ಚು. ಇರಾನಿನಲ್ಲಿ ಇದಕ್ಕೆ ತದ್ವಿರುದ್ದ ಭಾರತೀಯರಂತೆ ಇರಾನಿಗಳು ರಾಜ ಪರಮಾತ್ಮನ ಪ್ರತಿನಿಧಿ ಎಂದು ನಂಬಿದ್ದರು. ಅರಬ್ ಮತ್ತು ಇರಾನಿನ ನಡುವೆ ಹಿಂದಿನಿಂದಲೂ ಸಂಬಂಧವೇನೊ ಇತ್ತು. ಆದರೆ ಎರಡು ದೇಶಗಳ ಇತಿಹಾಸ ಭಿನ್ನವಾಗಿತ್ತು. ಆದರೆ ಅರೇಬಿಯಾದಲ್ಲಿ ಎರಡು ಭಿನ್ನ ಪ್ರಕೃತಿಯ ಸಂಸ್ಕಾರದ ಜನ ಇದ್ದಾರೆ ಈ ಭಿನ್ನತೆಯ ಮೂಲ ಅವರ ಭೌಗೋಳಿಕ ಸ್ಧಿತಿ. ಇಡೀ ಅರೇಬಿಯಾದ ನಿವಾಸಿಗಳೆಲ್ಲ ಒಂದೇ ಜನಾಂಗದವರಾಗಿದ್ದರೂ ಉತ್ತರ ಅರೇಬಿಯಾದವರ ಜೀವನ ಅವರ ದೃಷ್ಟಿಕೋನ ದಕ್ಷಿಣ ಅರೇಬಿಯಾದವರಗಿಂತ ತುಂಬ ಭಿನ್ನವಾಗಿತ್ತು .ಇಸ್ಲಾಮಿನ ಉದಯದ ತರುವಾಯ ಅರಬ್ಬರ ಸಾಮ್ರಾಜ್ಯ ವಿಸ್ತರಿಸುತ್ತ ಹೋಯಿತು. ಜೊತೆಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳು ಹೆಚ್ಚಿನ ವಿಸ್ತಾರಪಡೆಯಿತು. ಅರಬ್ ಭಾಷೆ ಇತರ ಭಾಷೆಗಳ ಮತ್ತು ಸಂಸ್ಕೃತಿಗಳ ಸಂರ್ಪಕಕ್ಕೆ ಬಂದು ಈ ಭಾಷೆಯನ್ನು ಸಮೃದ್ದಗೊಳಿಸುವಲ್ಲಿ ಫಾರಸಿ ಸಾಹಿತ್ಯ ಹಾಗೂ ಇರಾನಿಗಳ ಪಾತ್ರ ಬಹಳ, ಇರಾನಿಗಳ ಇತಿಹಾಸ ಅತ್ಯಂತ ಪ್ರಾಚೀನವಾದುದು. ಇಸ್ಲಾಮ ಧರ್ಮ ಇರಾನಿಗೆ ಬರುವ ಮುನ್ನ ಇರಾನಿನ ಸಾಮ್ರಾಜ್ಯ ಅರಬ್ ನ ದಕ್ಷಿಣ ಭಾಗವಾದ ಅಲ್ ಯಮನ್ ಇರಾನಿನ ಸಾಮ್ರಾಟರ ಅಧೀನದಲ್ಲಿತ್ತು. ಆದರೆ ಇರಾನಿಯರ ಜೀವನದ ಮೇಲೆ ಇಸ್ಲಾಮ್ ಧರ್ಮದ ಪ್ರಭಾವ ಎಷ್ಟು ತೀವ್ರವಾಗಿತ್ತೆಂದರೆ ಇರಾನಿಗಳು ತಮ್ಮ ಇತಿಹಾಸವನ್ನೇ ಮರೆಯಬೇಕಾಯಿತು. ಅವರು ತಮ್ಮ ಭಾಷೆ ಮತ್ತು ಲಿಪಿಯನ್ನು ಬಿಟ್ಟು ಅರಬ್ಬೀ ಭಾಷೆ ಮತ್ತು ಲಿಪಿಯನ್ನು ಬಳಸತೊಡಗಿದರು. ಆ ಸಮಯದಲ್ಲಿ ಇರಾನಿಗಳಲ್ಲಿ ಅರಬ್ಬೀ ಭಾಷೆಯ ದೊಡ್ಡ ದೊಡ್ಡ ಲೇಖಕರು ಹುಟ್ಟಿಕೊಂಡರು ಅರಬ್ಬೀ ಸಾಹಿತ್ಯದಲ್ಲಿ ಇರಾನಿಗರಿಗೆ ಸಿಕ್ಕ ಅಷ್ಟು ಪ್ರಾಶ್ಯಸ್ತ ಮೂಲ ಅರಬ್ಬರಿಗೂ ದೊರೆಯಲಿಲ್ಲ. ಇದರ ಫಲವಾಗಿ ಇರಾನೀ ಸಾಹಿತ್ಯ, ಕಲೆ, ದರ್ಶನ ಮೊದಲಾದವು ಇಸ್ಲಾಮಿ ಜಗತ್ತಿನ ಸ್ವಂತ ಆಸ್ತಿಗಳಾದವು. ಇಸ್ಲಾಮ್ ಇರಾನನ್ನೇನೊ ಜಯಿಸಿತು. ಸಾಂಸ್ಕೃತಿಕವಾಗಿ ಅದು ಇರಾನಿನ ಮುಂದೆ ಸೋತಿತು.
ಸೂಫೀ ಮತದ ಮೂಲ ಸೆಲೆಯನ್ನು ಕಂಡುಹಿಡಿಯಬೇಕಾದರೆ ಅದರ ಸಾಮಾನ್ಯ ಲಕ್ಷಣಗಳನ್ನು ಅರಿಯಬೇಕು. ಪ್ರೇಮ ಒಂದು ಮಾನಸ ಪ್ರಕ್ರಿಯೆ.ಆದರ ಗುರಿ ಆನಂದ. ಸೂಫೀಗಳ ಪ್ರಕಾರ ಚೆಲುವೆ ದೇವರು, ಒಲವೇ ಪೂಜೆ. ಪ್ರೇಮವೇ ಸೂಫೀ ಮತದ ತಳಹದಿ ಪ್ರೇಮ ಮತ್ತು ಸೂಫೀ ಮತ ಎರಡೂ ಅಭಿನ್ನ ಎನ್ನುವವರಿದ್ದಾರೆ.
ಸೂಫೀಗಳ ಪ್ರಧಾನ ಭಾವ ರತಿ. ರತಿ ಮುಖ್ಯ ಉದ್ದೀಪನ ಸುರೆ. ಸುರೆ ಹಾಗೂ ರತಿಯ ಆಧಾರದ ಮೇಲೆ ಸೂಫೀ ಸಾಹಿತ್ಯದ ಭವನವೆಲ್ಲ ನಿಂತಿರುವುದು. ಇದರಲ್ಲೂ ರತಿಯ ಅವಲಂಬನವೇ ಸುರೆಯ ದಾತನೂ ಹೌದು. ಪ್ರೇಮ ಪಾತ್ರ ಮಾಶೂಕನೇ ಸಾಕಿಯ ಕೆಲಸ ಮಾಡಿ ಪ್ರೇಮ ಮದಿರೆಯನ್ನು ಕುಡಿಸಿ, ಪ್ರೇಮಿಯನ್ನು ತೃಪ್ತಿಗೊಳಿಸುತ್ತಾನೆ. ಪ್ರೇಮಿಯ ಸೌಂದರ್ಯ ಅಲ್ಲಾನ ಐಶ್ವರ್ಯ. ಅದ್ದರಿಂದ ಸುಂದರಿಯನ್ನು ಅಲ್ಲಾನ ಪ್ರತೀಕವೆಂದು ಭಾವಿಸಲಾಯಿತು. ಅಲ್ಲಾ ಪುರುಷ ಹಜರತ್ ಮಹಮ್ಮದ್ ರಿಗೆ ಕಿಶೋರ ರೂಪದಲ್ಲಿ ದರ್ಶನವಿತ್ತನಂತೆ. ಕಿಶೋರಿ ಪುರುಷನ ಅಂಗವಿಶೇಷದಿಂದ ರತಿಗಾಗಿ ನಿರ್ಮಿಸಲ್ಪಟ್ಟಳು ಅವಳ ಬೆನ್ನು ಹತ್ತಿ ಮನುಷ್ಯ ಮರ್ತ್ಯಲೋಕಕ್ಕೆ ಬಂದ ಅವನ ಸ್ವರ್ಗದಿಂದದೊಡಲ್ಪಟ್ಟ, ಕಿಶೋರಿ ಪ್ರೇಮ ಪ್ರಲೋಭನೆ ಕಾರಣವೆಂದು ಭಾವಿಸಲಾಯಿತು. ರಮಣಿಯನ್ನು ಉಮರ‍್ ಖಯ್ಯಾಂನಂಥ ಶ್ರೇಷ್ಟ ಕವಿ ಕೂಡ ಪ್ರೇಮದ ಆನಲಂಬವನ್ನಾಗಿ ಮಾಡಿಕೊಂಡ. "ಅಮರದ್"ನನ್ನೇ ತನ್ನ ಕವಿತೆಯ ಪ್ರತೀಕವನ್ನಾಗಿ ಮಾಡಿಕೊಂಡ ನಿಜವಾಗಿ ನೋಡಿದರೆ ಸೂಫೀಗಳು ಅವನ ಶಿಷ್ಯತ್ವವನ್ನೇ (ಮುರೀದಿ) ಮಾಡುತ್ತಾರೆ. ಮತ್ತು ಅವನ ಪ್ರೇಮ ಪ್ರಸಾರದಲ್ಲೇ ಮಗ್ನರಾಗುತ್ತಾರೆ. ಸೂಫೀಗಳು ಸಂಸ್ಕಾರದಿಂದಾಗಿ ಮಗಬಚ್ಚಗಳ ಬಳಿಗೆ ಹೋಗಲು ಉತ್ಸಾಹಕರಾಗಿದ್ದರು. ಪಾರಸಿಗಳು ಅನಾದಿಕಾಲದಿಂದಲೂ ಸೋಮರಸ ಪಾನ ಮಾಡುತ್ತಿದ್ದರೂ. ಅರಬ್ಬರೂ ಶರಾಬಿನ ಭಕ್ತರು. ಹೀಗಾಗಿ ಇಸ್ಲಾಮಿನ ಪ್ರಭಾವಿದ್ದರೂ ಅವರು ಮದಿರಾ ಪಾನಕ್ಕಾಗಿ ಬಾಯಿ ಬಿಡುತ್ತಿದ್ದರು. ಸೂಫೀಗಳು ಈ ಮಧುಪಾನವನ್ನೇ ಪ್ರತೀಕವನ್ನಾಗಿ ಗ್ರಹಿಸಿದರು ಮತ್ತು ಮಗಬಚ್ಚಗಳನ್ನು ಮುರ್ಶಿದ್, ಪೀರ‍್, ಸಾಕಿ, ಮಾಶೂಕ್, ಮೊದಲಾದ ಹೆಸರುಗಳಿಂದು ಕರೆದರು. ಸೂಫೀಗಳು ಹೆಣ್ಣುನ್ನು ಪ್ರೇಮ ಪ್ರತೀಕವೆಂದು ಬಗೆದರು, ಅರಬಿಯಂಥ ವಿದ್ವಾಂಸರ ಪ್ರಕಾಋ ಅಲ್ಲಾ ಅಮೂರ್ತ ರೂಪದಲ್ಲಿ ದರ್ಶನ ಕೊಡಲಾರ. ಆದ್ದರಿಂದ ಹೆಣ್ಣಿನ ರೂಪದಲ್ಲೇ ಆತನ ಸಾಕ್ಷಾತ್ಕಾರ ಶ್ರೇಷ್ಠ. ಈ ರೀತಿ ಸೌಂದರ್ಯವೇ ರತಿಯ ಆವಲಂಬನ, ಸುಂದರ ವಸ್ತುಗಳನ್ನು, ಸುಂದರಿಯನ್ನು ಕಂಡಾಗ ನಾವು ಆಕರ್ಷಿತರಾಗುತ್ತೇವೆ. ಈ ಆಕರ್ಷಣೆ ಆ ಲೌಕಿಕವಾದಾಗ ನಾವು ಭವಸಾಗರವನ್ನು ದಾಟ ಬಲ್ಲೆವು. ಆದ್ದರಿಂದಲೇ ರೂಮಿ, ಜಾಮಿಯಂಥ ಸಿದ್ದ ಫಕೀರರೂ ಕೂಡ ಯಾರನ್ನಾದರೂ ಪ್ರೀತಿಸುವಂತೆ ಒತ್ತಾಯಮಾಡಿದ್ದಾರೆ. ಅವರ ದೃಷ್ಟಿಯಲ್ಲಿ ಯಾವುದೇ ಸುಂದರಿಯನ್ನು ಪ್ರೀತಿಸದೆ ನಮ್ಮ ಮನಸ್ಸು ಪರಮಾತ್ಮನಲ್ಲಿ ತೊಡುಗುವುದಿಲ್ಲ. ಆದರೆ ಈ ಸುಂದರಿ ನಮ್ಮ ಪ್ರೇಮದ ವಾಹಕಳೇ ಹೊರತು ಆಲಂಬನವಲ್ಲ ಎಂಬುದನ್ನು ಮರೆಯಬಾರದು.
ಸೂಫೀ ಸಾಹಿತ್ಯದ ಪ್ರೇಮದರ್ಶನದಲ್ಲಿ ಸುರತಿಯ ಜೊತೆಗೆ ಸುರೆಯ ವಿಧಾನವಿದೆ. ಸುರಾ ಸೇವೆನೆಯಲ್ಲಿ ಏನೇ ದೋಷವಿರಲಿ ಆದರ ಒಂದು ಗುಣವೆಂದರೆ ಕ್ಷಣಕಾಲವಾದರೂ ಸರಿ, ಆದರ ಉಲ್ಲಾಸ, ಚಾರ್ತುರ್ಯಕ್ಕಾಗಿ ಸುರೆಯನ್ನು ಸೂಫೀಗಳು ಪ್ರತೀಕವಾಗಿ ಭಾವಿಸುತ್ತಾರೆ. ಸೂಫೀಗಳು ಸಾಕಿ (ಹೆಂಡ ಮಾರುವವರು) ಕುಡಿಸುವ ಹೆಂಡ ಹೆಂಡವಲ್ಲ. ಅಮೃತ ಆದರಿಂದ ಶಾಶ್ವತಾನಂದ ಪ್ರಾಪ್ತಿ ಎಂದು ನಂಬಿದ್ದರು.ಯಾವುದೇ ಫಾರಸಿ ಕವಿಗೆ ಸುರೆ, ಸುರಾವಿಕ್ರೀತೆಯಿಲ್ಲದೆ ಕಾವ್ಯದ ರಚನೆ ಮಾಡುವುದೇ ಕಷ್ಟವಾಯಿತು.
ಅರಬಿಯದಲ್ಲಿ ದೊರೆಯುವ ಸೂಫೀ ಸಾಹಿತ್ಯದ ಬಹುಪಾಲು ಅರಬರದಲ್ಲ ಇರಾನಿಗಳದ್ದು. ಸೂಫೀ ಸಾಹಿತ್ಯದಲ್ಲಿ ಮೂರು ಅಂಗಗಳು ಇವೆ ಅವುಗಳೆಂದರೆ ಪ್ರಬಂಧಗಳು, ಜೀವನ ಚರಿತ್ರೆಗಳು, ಕಾವ್ಯಗಳು ಮತ್ತು ಸೂಫೀಗಳ ಪ್ರತಿಷ್ಠೆ ಅವರ ಕಾವ್ಯವನ್ನೇ ಅವಲಂಬಿಸಿದ್ದರೂ. ಭಾರತದಲ್ಲಿ ಈ ಸೂಫೀ ಕಾವ್ಯದಲ್ಲಿ ಅಮೀರ‍್ ಖಸ್ರೋನಂಥ ಪ್ರಸಿದ್ದ ಕವಿಗಳು ಫಾರಸಿಯಲ್ಲಿ ಕಾವ್ಯ ರಚನೆ ಮಾಡಿದರು. ಆತನ ಕಾವ್ಯದ ಪ್ರಭಾವ ಎಷ್ಟೊಂದು ಇತ್ತೆಂದರೆ ಅನೇಕ ಇರಾನಿಗಳು ಅವನ ಶಿಷ್ಯರಾದರು. ಅಮೀರ‍್ ಖಸ್ರೋವಿನ ತರುವಾಯ ಮೊಗಲರ ಕಾಲದಲ್ಲಿ ಕಾವ್ಯಕ್ಕೆ, ಕವಿಗಳಿಗೆ ವಿಶೇಷ ಪ್ರೋತ್ಸಾಹ ದೊರೆಯಿತು. ಆ ಫಾರಸಿ ಕವಿಗಳ ಪರಂಪರೆಯನ್ನು ಮುಂದುವರೆಸಿದವರಲ್ಲಿ ಉರ್ದುವಿನ ಅಮರ ಕವಿ ಮಹಮದ್ ಇಕ್ಬಾಲ್ ಆದ್ವೀತಿಯರು.
ಸೂಫೀ ಕವಿಗಳ ಚರ್ಚೆ ಬಂದಾಗ ಉಮಾರ‍್ ಖಯಾಮ್ ಗಣಿತ ಹಾಗೂ ಜ್ಯೋತಿಷ್ಯಕ್ಕಾಗಿ ಹೆಸರಾಗಿದ್ದಾನೆ. ಸೂಫೀ ಕಾವ್ಯಕ್ಕಾಗಿ ಅಲ್ಲ. ಆದರೆ ಅವನ ಸ್ವಚ್ಛಂದತೆ ಪಾಶ್ಚಾತ್ಯರಿಗೆ ಎಷ್ಟೊಂದು ಪ್ರಿಯವಾಯಿತೆಂದರೆ ಅವನ ಮುಂದೆ ಉಳಿದೆಲ್ಲಾ ಫಾರಸಿ ಕವಿಗಳು ನಿಸ್ತೇಜರಾದರು. ರೂಮಿ ಮತ್ತು ಹಾಫಿಜರನ್ನು ಜನ ಮರತಂತೆ ಭಾಸವಾಗ ತೊಡಗಿತು. ಆದರೆ ಖಯಾಮ್ ವಿಜೃಂಭಿಸುತ್ತಿದ್ದಾನೆ. ಆತನ ಕವಿತೆ ಸಮಯಾನುಕೂಲವಾಗಿದೆ. ಆತ ಅನೇಕರ ದೃಷ್ಟಿಯಲ್ಲಿ ಸುರತಿ ಹಾಗೂ ಸುರೆಯ ನಿಜವಾದ ಭಕ್ತನಾಗಿದ್ದ ಮತ್ತು ಯಾವುದೋ ಪಾರ್ಥಿವ ಸಾಕಿಯೊಂದಿಗೆ ತನ್ನ ಗೋಳನ್ನು ತೋಡಿಕೊಳ್ಳುತ್ತಿದ್ದ. ದ್ರಾಕ್ಷಿಯ ಕನ್ಯೆಯಲ್ಲೇ ಅವನಿಗೆ ಎಲ್ಲವೂ ಕಾಣುತ್ತಿತ್ತು. ಏನಾದರಾಗಲಿ ಖಯಾಮ್ ಆನಂದಕ್ಕಾಗಿ ಕವಿತೆ ಬರೆಯುತ್ತಿದ್ದ.
ಸೂಫೀ ಸಾಹಿತ್ಯದಲ್ಲಿ ರುಬಾಯಿಗಳಲ್ಲಿ ಪ್ರತೀಕಗಳಿಗೆ ಗಜಲ್ ನಂತೆಯೇ ಸ್ಧಾನ ದೊರೆಯಿತು. ಸೂಫೀಗಳು ಹೃದಯ ತೋರುವುದು ಗಜಲ್ ನಲ್ಲೇ , ಭಾವಸಾಗರ ಗಜಲ್ ನಲ್ಲಿ ಉಕ್ಕಿ ಹರಿದಂತೆ ಬೇರೆ ಛಂಧಸ್ಸಿನಲ್ಲಿ ಆಗಲಿಲ್ಲ, ಗಜಲ್ ನಲ್ಲಿ ಪ್ರೇಮದ ಪ್ರಚಂಡ ಬಿರುಗಾಳಿ ಬೀಸಿತು. ಅದರಲ್ಲಿ ಧರ್ಮ, ಕರ್ಮ, ಆಚಾರ, ವಿಚಾರಗಳೆಲ್ಲ ಹಾರಿಹೋದವು. ಗಜಲ್ ಗಳಲ್ಲಿ ಶರಾಬು, ಸಾಕಿ, ಬುಲ್ ಬುಲ್, ಚಮನ್ ಮೊದಲಾದ ಪ್ರತೀಕಗಳ ಗುಣಗಾನವೇ ಗುಣಗಾನ.
ಪ್ರಸಿದ್ದ ರುಬಾಯಿಕರ ಉಮರ‍್ ಖಯಾಮ್ ಲಹರಿಯ ಜೀವ. ಆತ ಅಮರದ್ ಷರಸ್ತ್ (ಪ್ರಣಯ ಉಪಾಸಕ) ಅಲ್ಲ. ರಮಣಿಯ ಉಪಾಸಕ. ಆತ ರಮಣಿಯನ್ನೇ ಆಲಂಬನವನ್ನಾಗಿ ಮಾಡಿಕೊಂಡ, ಅಮರದ್ ನನ್ನು ಅಲ್ಲ ಅವನ ರುಬಾಯಿಗಳು ಕರ್ಮಕಾಂಡವನ್ನು ಚಿಂದಿಯೆಬ್ಬಿಸಿದ್ದಾನೆ. ಸೂಫೀ ಸಾಹಿತ್ಯದಲ್ಲ ಭಾವ ಪ್ರದರ್ಶನಕ್ಕೆ ಗಜಲ್ ಗಳಾದರೆ, ವ್ಯಂಗ್ಯ ವಿಡಂಬನೆಗೆ ರುಬಾಯಿಗಳನ್ನು ಆರಿಸಿಕೊಂಡರು. ಮಸ್ನವಿಯಲ್ಲಿ ರೂಮಿ, ಗಜಲ್ ನಲ್ಲಿ ಹಾಫಿಜ್ ಹಾಗೂ ರುಬಾಯಿಯಲ್ಲಿ ಖಯಾಮ್ ಆಯಾ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಿ ಸಾಹಿತ್ಯವನ್ನು ರಚಿಸಿದರು. ಆದ್ದರಿಂದ ರೂಮಿ ಆಚಾರ್ಯನೆನಿಸಿಕೊಂಡರೆ, ಹಾಫಿಜ್ ಭಕ್ತನೆನಿಸಿಕೊಂಡ, ಖಯಾಮ್ ಮನಸ್ವಿಯೆನಿಸಿದ.
ಉಮಾರ‍್ ಖಯಾಮ್ ಪರ್ಷಿಯಾ ದೇಶದಲ್ಲಿ ಆತ ಜ್ಯೋತಿಷಿಯಾಗಿ ಗಣಿತ್ಞನಾಗಿದ್ದ. ೧೧ನೇ ಶತಮಾನದ ಮಧ್ಯೆದಲ್ಲಿ ಜನಿಸಿದ ಖಯಾಮ್ ೧೨ ಶತಮಾನದಲ್ಲಿ ಮರಣ ಹೊಂದಿದ ಎಂದು ಕೆಲವರು ಹೇಳುತ್ತಾರೆ. ಖಯಾಮ್ ನ ಪೂರ್ವಿಕರು ಗುಡಾರ ಕಟ್ಟುವ ಕೆಲಸ ಮಾಡುತ್ತಿದ್ದರಂತೆ. "ಖೇಮಾ"(ಗುಡಾರ) ಶಬ್ದದಿಂದ ಖಯಾಂ ಶಬ್ದ ಬಂದಿರಬಹುದೆಂದು ಕೆಲವರ ಊಹೆ. ಖಯಾಮ್ ನ ಕವಿತೆಗಳ ಪೂರ್ಣ ಸಂಗ್ರಹ ಇನ್ನೂ ದೊರೆತಿಲ್ಲ. ಅತ್ಯಂತ ಪ್ರಾಚೀನ ಹಸ್ತಲಿಪಿ ಅವನ ನಿಧನದ ೭೫ ವರ್ಷಗಳ ತರುವಾಯ ನಿರ್ಮಿತವಾಯಿತು. ಇದೊಂದು ಸಂಕಲನದಲ್ಲಿ ೩೫೦ ರುಬಾಯಿಗಳಿವೆ. ಸುಮಾರು ಒಂದು, ಒಂದೂವರೆ ಸಾವಿ ರುಬಾಯಿಗಳಿಂದ ಇದನ್ನು ಸಂಗ್ರಹಿಸಿರಬಹುದು. ಈ ಕವಿ ಶಬ್ದಗಳ ಗುಡಾರ ಶಬ್ದಗಳ ಗುಡಾರ ಕಟ್ಟಿ ನಿಲ್ಲಿಸಬಲ್ಲ. ರೂಬಾಯಿಯ ನಾಲ್ಕುಗಳುಗಳ ಮೇಲೆ ಭಾವ ಅಥವಾ ವಿಚಾರಗಳನ್ನು ಗುಡಾರ ಹಾಕಿ ಬಿಡುತ್ತಾನೆ ಎಂದು ಹಿಂದಿಯ ಪ್ರಸಿದ್ದ ಕವಿ ಹರಿವಂಶರಾಯ್ ಬಚ್ಚನ್ ಹೇಳಿದ್ದಾರೆ.
೧೮ನೇ ಶತಮಾನದ ಮಧ್ಯದಲ್ಲಿ ಆಕ್ಸ್ ಫರ್ಡಿನ ಬೋಡಲಿಯನ್ ಲೈಬ್ರರಿಯಲ್ಲಿ ಒಂದು ಫಾರಸೀ ಹಸ್ತಲಿಪಿಯತ್ತ ಪ್ರೊ.ಕೋವೆಲ್ಲರ ಗಮನ ಹರಿಯಿತು. ಆದರಲ್ಲಿ ಖಯಾಮ್ ೧೫೮ ರುಬಾಯಿಗಳಿದ್ದವು ಇದನ್ನು ಇಂಗ್ಲೀಷ್ ಗೆ ಅನುವಾದಿಸಿದರು. ರುಬಾಯಿಗಳ ಮೂಲ ಸೌಂದರ್ಯವನ್ನು ಗ್ರಹಿಸದ್ದೇ ಅಲ್ಲ ಇನ್ನೂ ಹೆಚ್ಚಿಸಿದರು ಇದರಿಂದಾಗಿ ಅವರು ಅನುವಾದ ಚಕ್ರವರ್ತಿ ಎನಿಸಿಕೊಂಡರು. ಇಷ್ಟದರೂ ಅನುವಾದದ ರುಬಾಯಿಗಳಿಗೆ ಅಷ್ಟಾಗಿ ಸ್ವಾಗತ ದೊರೆಯಲಿಲ್ಲ ಒಬ್ಬ ಸಂಪಾದಕರಂತು ಇದು ಪ್ರಕಾಶನಕ್ಕೆ ಅನರ್ಹ ಎಂದು ತಿರಸ್ಕರಿಸಿದ್ದರು. ೧೮೫೯ರಲ್ಲಿ ೭೬ ರುಬಾಯಿಗಳಿದ್ದ ಪ್ರಥಮ ಸಂಸ್ಕರಣ ೨೫೦ ಪ್ರತಿಗಳನ್ನು ಅಚ್ಚು ಮಾಡಿದರು ಬೆಲೆ ಇಳಿಸಿದರು ಸಹ ಯಾರು ಕೊಳ್ಳುವರಿಲ್ಲದೆ ಕೊನೆಗೆ ಪ್ರಕಾಶರು ಹಳೆಯ ಹರಕಲು ಪುಸ್ತಕದ ಗುಂಪಿಗೆ ದೂಡಿದರು. ಇಂಗ್ಲೀಷ್ ನ ಇಬ್ಬರು ಪ್ರಸಿದ್ದ ಕವಿಗಳು ಅದು ಹೇಗೋ ಅದನ್ನು ಕೊಂಡರು, ಸರಿ, ಅವರಿಗೆ ಕೆಸರಿನಲ್ಲಿ ಕಮಲ ಕಂಡಿತು ಅವರು ಅದನ್ನು ಮನಸಾರೆ ಕೊಂಡಾಡಿದರು ದಿನಬೆಳಗಾಗುವುದರೊಳಗೆ ಅದು ಪ್ರಸಿದ್ದವಾಯಿತು. ಇಂದು ಒಂದು ಹಳೆಯ ಪ್ರತಿಗೆ ಲಕ್ಷಾಂತರ ಹಣ ಸುರಿಯವವರಿದ್ದಾರೆ.
ರುಬಾಯಿ ಕಾವ್ಯ ಸೌಂದರ್ಯವಂತೂ ಅದ್ಭುತ. ಇನ್ನು ದರ್ಶನದ ದೃಷ್ಟಿಯಿಂದ ಕೆಲವರಿಗೆ ಅದರಲ್ಲಿ ಸುಖವಾದೀ ದರ್ಶನ ಕಂಡುಬಂದರೆ ಕೆಲವರಿಗೆ ದು:ಖವಾದೀ ದರ್ಶನ. ಈ ನೆಲದ ಚೆಲುವು ಪರಮಾತ್ಮನ ಚೆಲುವೇ ಎಂಬ ಸೂಫೀ ದರ್ಶನ ಇದರಲ್ಲಿ ಗುಪ್ತಗಾಮಿನಿಯಾಗಿ ಹರಿದಿದೆ. . ಸಾಕಿ, ಮಧು, ಮಧುಬಾಲೆ, ಮಧುಶಾಲೆಯಂತೂ ಸೂಫೀಗಳ ಪ್ರಿಯ ರೂಪಕಗಳು ಉಮರ‍್ನ ಕಾವ್ಯ ತನ್ನ ಜಗತ್ತಿನ ಸ್ಧೂಲ, ಅಸಾಧಾರಣ, ಆಕರ್ಷಕ, ವರ್ಣರಂಜಿತ ಹಾಗೂ ಅರ್ಥಗರ್ಭಿತ ದೃಶ್ಯ ಹಾಗೂ ರೂಪಕಗಳ ಮಾಯಾ ಲೋಕವನ್ನೇ ನಮ್ಮ ಕಣ್ಣು ಮುಂದೆ ತೆರೆಯುತ್ತದೆ. ಆತನ ಭಾವಗಳು ನಮ್ಮ ಎದೆಯ ತುಡಿತವನ್ನು ಪ್ರತಿಬಿಂಬಸುತ್ತವೆ. ಎಂಬ ಅನುಭವ ಪ್ರತಿಯೊಬ್ಬನಿಗೂ ಉಂಟಾಗುತ್ತದೆ. ಈ ರೀತಿ ಉಮರ‍್ ಖಯಾಮ್ ಅಮರ, ಅಜರ.
*****
ಒಂದು ಪ್ರಾತ:ಕಾಲ ನನ್ನ ಮದಿರಾಗೃಹದಿಂದ ಒಂದು ದನಿ ನನ್ನ ಕಿವಿಗೆ ಬಿತ್ತು " ಓ ಮತ್ತ, ಮದಿರಾಲೋಲ, ಎದ್ದು ಕುಳಿತುಕೋ, ಬಾ: ಬದುಕಿನ ಬಟ್ಟಲು ತುಂಬುವ ಮುನ್ನ ನಾವು ದೈವೀ ಪ್ರೇಮದ ಬಟ್ಟಲನ್ನು ಪಾನ ಮಾಡೋಣ, ಮೃತ್ಯವಿಗೆ ಮುನ್ನ ಅವನನ್ನು ಪ್ರೀತಿಸೋಣ.
*****
ಪ್ರಣಯಮದಿರೆ, ನಮಗೆ ತುಂಬ ಲಾಭವುಂಟು ಮಾಡುತ್ತದೆ. ಆದರಿಂದ ನಮ್ಮ ಶರೀರ, ಪ್ರಾಣಗಳಿಗೆ ಶಕ್ತಿ ದೊರೆಯುತ್ತದೆ. ಆದರ ಪಾನದಿಂದ ರಹಸ್ಯಗಳು ಮೈದೋರುವುವು. ನನಗೆ ಆ ಮದಿರೆಯ ಒಂದು ಗುಟುಕು ಸಾಕು. ಅದು ದೊರೆತ ಬಳಿಕ ನನಗೆ ಜಗತ್ತು ಅಥವಾ ಜೀವನದ ಚಿಂತೆಯಿಲ್ಲ, ಸಾವಿನ ಚಿಂತೆಯೂ ಇರಲಾರದು.
*****
ಪ್ರಣಯ, ದಿನವೆಲ್ಲ ಪ್ರಣಯದಲ್ಲೇ ಮತ್ತನಾಗಿರಬೇಕು, ಅವನು ಹುಚ್ಚನಾಗಿ ವ್ಯಾಕುಲನಾಗಿ ಅಲೆಯುತ್ತಿರಬೇಕು. ಎಚ್ಚರವಿದ್ದರೆ ಪ್ರತಿಯೊಂದು ವಸ್ತುವಿನ ಚಿಂತೆ ಸುತ್ತಿಕೊಂಡಿರುತ್ತದೆ. ಆದರೆ ಉನ್ಮತ್ತನಾದಾಗ ಎಲ್ಲ ವಸ್ತುಗಳ ಗಮನವೂ ತಲೆಯಿಂದ ದೂರವಾಗಿ ಬಿಡುತ್ತದೆ. ಯಾವುದಾದರೂ ಗಮನವಿದ್ದರೆ ಉನ್ಮತ್ತಗೊಳಿಸಿದ ವಸ್ತುವಿನ ಗಮನವಿರುತ್ತದೆ.
*****
ನಾನು ಎಷ್ಟೊಂದು ಮದಿರೆಯನ್ನು ಪಾನ ಮಾಡುವನೆಂದರೆ ಆದರ ವಾಸನೆ ನನ್ನ ನೆಲದಡಿಯಿಂದ ಹೊರಟು ಗೋರಿಯನ್ನು ಮುಟ್ಟಲಿ, ಮತ್ತು ಆದರಿಂದಲೂ ಹೊರಹೊಮ್ಮಲಿ. ಆದರಿಂದ ಯಾರಾದರೂ ಉನ್ಮತ್ತ ಪ್ರೇಮಿ ಅದರ ಬಳಿಗೆ ಬಂದರೆ ಅದರ ವಾಸನೆಯಿಂದ ಮತ್ತೂ ಮತ್ತು ಹಿಡಿದು ಮೈ ಮರೆಯಲಿ.
*****
ಈ ಪ್ರಣಯದ ಮದಿರಾಗೃಹದ ಸೂಚಿಯಲ್ಲಿ ಎಲ್ಲಕ್ಕಿಂತ ಮೊದಲು ನನ್ನ ಹೆಸರು. ಮಸ್ತಿ ಮತ್ತು ಮದಿರಾಪಾನ ನನ್ನ ಪಾಲಿಗೆ ಬಂದಿದೆ. ಮದಿರಾ ವಿಕ್ರೇತರ ಈ ಮನೆಯಲ್ಲಿ ಇರುವುದೆಲ್ಲ ನಾನೇ. ನಾನೇ ಶರೀರ, ನಾನೇ ಪ್ರಾಣ, ಇಡೀ ಜಗತ್ತಿನ ಆಕೃತಿಗಳಲ್ಲಿ ನಾನೇ ಇದ್ದೇನೆ.
*****
ಜಗತ್ತಿನಲ್ಲಿ ಯಾವನಿಗೆ ತಿನ್ನಲು ಅರ್ಧ ರೊಟ್ಟಿ, ಕೂರಲು ತುಣುಕು ನೆಲ, ದೊರೆತಿದೆಯೋ ಮತ್ತು ಯಾವನು ಯಾರ ಆಳ ಅಲ್ಲವೋ, ಅರಸನೂ ಅಲ್ಲವೋ ಅವನೇ ಸುಖಿ. ಅವನು ಅದರಲ್ಲೇ ಮಗ್ನನಾಗಿರಲಿ. ಅವನ ಜಗತ್ತು ಎಲ್ಲಕ್ಕಿಂತಲೂ ಮಿಗಿಲು.
Thursday, April 28, 2011
ಶಾಶ್ವತವಲ್ಲ
ಶಾಶ್ವತವಲ್ಲ
ನಾನು ನೀನು ಒಂದೊಂದೇ ಹೆಜ್ಜೆ
ಇಡುತ್ತ ನಡೆದವು ಆ ಸಮುದ್ರ ದಂಡೆಯಲ್ಲಿ?
ಪಶ್ಚಿಮದಲ್ಲಿ ಸೂರ್ಯ ವಿರಮಿಸುತ್ತಾ ಇದ್ದಾನೆ
ತನ್ನ ಪಾಡಿಗೆ ತಾನು.
ನೀನು ಅಂದು ಹೇಳಿದ ಮಾತು
ಅದೋ ಅಲ್ಲಿ ನೋಡು ಕಾಣುತ್ತಿವೆ
ನಮ್ಮಿಬ್ಬರ ಜೋಡಿ ಹೆಜ್ಜೆಗಳು
ಉಸುಕಿನಲ್ಲಿ ಎದ್ದು ಕಾಣುತ್ತವೆ ಎಂದು
ಅವನೆಂದ ಅವು ಶಾಶ್ವತವಲ್ಲ
ಇನ್ನೊಂದು ಕ್ಷಣದಲ್ಲಿ ಆ ಹೆಜ್ಜೆಗಳು ಅಲ್ಲಿರುವುದಿಲ್ಲ
ದೊಡ್ಡ ಅಲೆ ಬಂದು ಅವುಗಳನ್ನು ಅಳಿಸಿ ಹಾಕುತ್ತವಲ್ಲ
ಇಲ್ಲಿ ಯಾವುದು ಶಾಶ್ವತವಲ್ಲ?
ಇಡುತ್ತ ನಡೆದವು ಆ ಸಮುದ್ರ ದಂಡೆಯಲ್ಲಿ?
ಪಶ್ಚಿಮದಲ್ಲಿ ಸೂರ್ಯ ವಿರಮಿಸುತ್ತಾ ಇದ್ದಾನೆ
ತನ್ನ ಪಾಡಿಗೆ ತಾನು.
ನೀನು ಅಂದು ಹೇಳಿದ ಮಾತು
ಅದೋ ಅಲ್ಲಿ ನೋಡು ಕಾಣುತ್ತಿವೆ
ನಮ್ಮಿಬ್ಬರ ಜೋಡಿ ಹೆಜ್ಜೆಗಳು
ಉಸುಕಿನಲ್ಲಿ ಎದ್ದು ಕಾಣುತ್ತವೆ ಎಂದು
ಅವನೆಂದ ಅವು ಶಾಶ್ವತವಲ್ಲ
ಇನ್ನೊಂದು ಕ್ಷಣದಲ್ಲಿ ಆ ಹೆಜ್ಜೆಗಳು ಅಲ್ಲಿರುವುದಿಲ್ಲ
ದೊಡ್ಡ ಅಲೆ ಬಂದು ಅವುಗಳನ್ನು ಅಳಿಸಿ ಹಾಕುತ್ತವಲ್ಲ
ಇಲ್ಲಿ ಯಾವುದು ಶಾಶ್ವತವಲ್ಲ?
Subscribe to:
Comments (Atom)

