Popular Posts

Tuesday, February 1, 2011

ಬಾರಿಸು ಕನ್ನಡ ಡಿಂಡಿಮವ ಕರ್ನಾಟಕದ ರಾಜಧಾನಿಯಲ್ಲಿ ಶಿವ.

ಬಾರಿಸು ಕನ್ನಡ ಡಿಂಡಿಮವ ಕರ್ನಾಟಕದ ರಾಜಧಾನಿಯಲ್ಲಿ ಶಿವ.
   ೪೦ ವರ್ಷಗಳ ನಂತರ ಕರ್ನಾಟಕದ ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ೭೭ನೇ ಕನ್ನಡ ಸಾಹಿತ್ಯ ಸಮೇಳ್ಮನ ಪ್ರಸ್ತುತ ಬೆಂಗಳೂರು ಜನಸಂಖ್ಯೆಯಲ್ಲಿ ಶೇಕಡ ೬೮ರಷ್ಟು ಜನ  ಹೊರಗಿನ ರಾಜ್ಯಗಳಿಂದ ಬಂದವರು ಇನ್ನು ೩೨ ಶೇಕಡ ಮಾತ್ರ  ಕನ್ನಡಿಗರಿದ್ದು ಹೊರಗಿನಿಂದ ಬಂದ ಜನಗಳಿಗೆ ಕನ್ನಡದ  ಬಗ್ಗೆ   ಅಕ್ಕರೆ ಇದಯೇ? ಎಂಬ ಪ್ರಶ್ನೆ ಉದ್ಭವಿಸುವುದು ಆದರೆ  ಪ್ರಸ್ತುತ  ಕನ್ನಡ  ನಾಡು ಮತ್ತು ಸಾಹಿತ್ಯದ ಬಗ್ಗೆ ಜಾಗ್ರತೆವಹಿಸ ಬೇಕಾಗಿರುವ ನಾವು ಅಂತಹ ಕೆಲಸವನ್ನೇನು ಮಾಡುತ್ತ ಕುಳಿತು ಕೊಂಡಿಲ್ಲ ಹಿಂದಿನವರು  ಈ ನಾಡು ನುಡಿಗೆ ಮಾಡಿದ ತ್ಯಾಗ ಸೇವಾ ಮನೋಭಾವನೆ ಇಂದಿನ ದಿನಗಳಲ್ಲಿ ಇಲ್ಲ ಎನ್ನುವುದು ಒಂದು ದೊಡ್ಡ ಕೊರತೆಯಾಗಿದೆ. ಹಚ್ಚೆವು ಕನ್ನಡದ ದೀಪ ಕರುನಾಡು ದೀಪ ಎಂದು ನಿರಂತರವಾಗಿ ಕನ್ನಡ ಸಾಹಿತ್ಯ ದ ರಥವನ್ನು  ಎಳೆದ ತಮ್ಮ ಜೀವನವನ್ನೇ ಕನ್ನಡ ನಾಡು ನುಡಿ ಸಾಹಿತ್ಯಕ್ಕೆ ಮುಡಿಪಾಗಿಟ್ಟ ಹಲವಾರು ಮಹನೀಯರನ್ನು ಇಂದು ನಾವು ನೆನಪನ್ನು ಮಾಡಿಕೊಳ್ಳಬೇಕಾದ ಪ್ರಾತ:ಸ್ಮರಣೀಯರಲ್ಲಿ  ಆಲೂರುವೆಂಕಟರಾಯರು, ಎ.ಆರ‍್ ಕೃಷ್ಣಶಾಸ್ತ್ರಿ, ಗಳಗನಾಥರು, ಅ.ನ.ಕೃ, ಜಿ.ಪಿ.ರಾಜರತ್ನಂ, ರಾ.ಹ.ದೇಶಪಾಂಡೆ, ಶಂಭಾಜೋಶಿ, ವಿ.ಸೀತರಾಮಯ್ಯ, ಕುವೆಂಪು ಇನ್ನು ಮುಂತಾದವರು ನನೆಪಿನ ಮರೆವಣಿಗೆಯೇ  ಇದೆ.
    ಇಂತಹ ಮಹಾನೀಯರನ್ನು  ನೆನಪಿಸಿ ಕೊಳ್ಳುವ ಒಂದು ಪ್ರಯತ್ನ  ಇಲ್ಲಿ  ಮಾಡಲಾಗಿದೆ. ಎ.ಆರ‍್.ಕೃಷ್ಣ ಶಾಸ್ತ್ರಿಗಳು  ಸೆಂಟ್ರಲ್ ಕಾಲೇಜಿನಲ್ಲಿದ್ದಾಗ ಕನ್ನಡ ಸಂಘವನ್ನು  ಸ್ದಾಪನೆ ಮಾಡಿ "ಪ್ರಬುದ್ಧ ಕರ್ಣಾಟಕ" ಎಂಬ  ತ್ರೈಮಾಸಿಕ ಪತ್ರಿಕೆ  ಆರಂಭಿಸಿದ್ದು  ಕನ್ನಡ ಸಾಹಿತ್ಯಕ್ಕೆ ಹೊಸ ಲೇಖಕರನ್ನು ಪರಿಚಯಿಸಿದ್ದು ಈ ಬಗ್ಗೆ ಡಿ.ವಿ.ಗುಂಡಪ್ಪನವರು  ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರದಲ್ಲಿ  ದಿನಾಂಕ:೬-೦೫-೧೯೩೫ರಲ್ಲಿ ನಡೆದ ವಿಶೇಷ ಸಾಹಿತ್ಯೋತ್ಸವದ ಸಮಾರಂಭದ ಉಪಾಧ್ಯಕ್ಷ  ಸ್ಧಾನದಿಂದ ಮಾಡಿದ ಭಾಷಣದ ಪ್ರತಿರೂಪವನ್ನು ಇಲ್ಲಿ ನೀಡಲಾಗಿದೆ. " ಕನ್ನಡದಲ್ಲಿ ಓದುಗರ ಸಂಖ್ಯೆ ಬೆಳೆಯುತ್ತಿಲ್ಲ. ಪುಸ್ತಕಗಳಗಳನ್ನು ಕೊಳ್ಳುವರ ಸಂಖ್ಯೆ ಬೆಳೆದ ಹೊರತು, ಪುಸ್ತಕಗಳನ್ನು ಬರೆಯುವರ ಸಂಖ್ಯೆಯಾಗಲಿ ಅಥವಾ ಬರೆದ ಪುಸ್ತಕದ ಯೋಗ್ಯತೆಯಾಗಲಿ ಹೆಚ್ಚಲಾರದು ಬಹು ಮಂದಿ ಓದುವವರು ಸಿಕ್ಕಿಯಾರು, ಶ್ರಮಕ್ಕೆ ತಕ್ಕಫಲ ದೊರೆತೀತು ಎಂಬ ಭರವಸೆ ಕಂಡ ಹೊರತು ಸಮರ್ಥರಾದವರು ಗ್ರಂಧ ಲೇಖನಕ್ಕೆ  ಕೈ ಹಾಕಲಾರರು, ಗಿರಾಕಿಗೆ ತಕ್ಕಂತೆ ಸರಬರಾಯಿ ಎಂಬುದು ಸ್ವತಸ್ಸಿದ್ದ ನ್ಯಾಯ ಅದಕಾರಣ, ಕನ್ನಡ ಮಹಾಜನರು ತಮ್ಮ ಭಾಷೆಯ ಮೇಲ್ಮೆಯನ್ನು ಬಯಸುವುದು ದಿಟವಾದರೆ ಅವರಲ್ಲಿ ಅಕ್ಷರಸ್ಧರಾದವರೆಲ್ಲರೂ ತಮ್ಮ ಆದಾಯದಲ್ಲಿ ಒಂದು ಖಚಿತವಾದ ಭಾಗವನ್ನು ಪುಸ್ತಕ ಸಂಗ್ರಹಕ್ಕೆ ಮೀಸಲಿಡಬೇಕು. ಸಾಮಾನ್ಯವಾಗಿ ತಿಂಗಳಿಗೆ ೨೦ ರೂಪಾಯಿಗಳ ವರಮಾನ ಇರತಕ್ಕವರು ಅದರಲ್ಲಿ ಎಂಟು ಅಣೆಯನ್ನಾದರೂ ಒಂದು ಗ್ರಂಧಕ್ಕೆ ವಿನಿಯೋಗಿಸಲು ಮನಸ್ಸು ಮಾಡಬೇಕು ಹಾಗಾಗಾದ ಹೊರತು ಕನ್ನಡ ಸಾಹಿತ್ಯ ಉಚ್ಛ್ರಾಯ ಸ್ಧಿತಿಗೆ ಬರುವುದೆಂಬ ಆಸೆಗೆ ಕಾರಣವಿರಲಾರದು."
    ಈ ಪ್ರಸಂಗವನ್ನು  ಬಿ.ಎಸ್. ಕೇಶವರಾವ್ ರವರು ಬೀಚಿ, ಬುಲೆಟ್ಸು ಬಾಂಬು ಭಗವದ್ಗೀತೆ ಎಂಬ ಪುಸ್ತಕದ     "ಸಾಹಿತ್ಯ ಸೈಂಧವನ ಸಾನಿಧ್ಯದಲ್ಲಿ ಆರಿಸಿಕೊಳ್ಳಲಾಗಿದೆ. ಬೀಚಿ ಮತ್ತು ಕಾಳಿಂಗರಾಯರು ಬಳ್ಳಾರಿ ಸುಡು ಬೇಸಿಗೆಯ ದಿನಗಳು ಅಲ್ಲೊಂದು ಪುಸ್ತಕ ಅಂಗಡಿ ಆ ಅಂಗಡಿಯ ಮುಂದಿದ್ದ ಬೆಂಚೊಂದರ ಮೇಲೆ ಏನನ್ನೋ ಹರಟುತ್ತರಾ ಕುಳಿತಿದ್ದಾರೆ. ಆಗ ಒಬ್ಬ ವೃದ್ದ ಆ ಅಂಗಡಿಯ ಮುಂದೆ ಬಂದು ನಿಂತ. ವಯಸ್ಸಿನಿಂದ ಸುಕ್ಕುಗಟ್ಟಿದ ಆತನ ಮುಖ ಆ ರಣಬಿಸಿಲಿನ ತಾಪದಲ್ಲಿ ಬೆಂದು ಮತ್ತಷ್ಟು ಮುದುಡಿಕೊಂಡಿತ್ತು. ಅವನು ಉಟ್ಟಿದ್ದ ಉಡುಗೆಯೆಂದರೆ ಒಂದು ತುಂಡು ಪಂಚೆ ಹಾಗೂ ತಲೆಗೆ ಸುತ್ತಿಕೊಂಡಿದ್ದ ಒಂದು ಕೆಂಪು ವಸ್ತ್ರ, ಅದೂ ಮಾಸಲಾಗಿ ಅಲ್ಲಲ್ಲಿ ಹರಿದು ಜೂಲಗಿತ್ತು. ಬೆಂದ ಭೂಮಿಯ ಮೇಲೆ ಬರಿಗಾಲಿನಲ್ಲಿ ನಡೆಯುತ್ತಿದ್ದ ಆತನ ಪಾದಗಳ ಹಿಮ್ಮಡಿ ಒಡೆದು ಸೀಳು ಸೀಳಾಗಿತ್ತು ರಕ್ತ ಒಸರುವಂತೆ, ಹೆಗಲ ಮೇಲೆ ಸುಮಾರು ಗಾತ್ರದ ಅರೆತುಂಬಿದ ಒಂದು ಗೋಣಿಚೀಲದ ಮೂಟೆ.
    ಹೀಗೆ ಆ ಮೂಟೆಯನ್ನು ಹೊತ್ತು ತಮ್ಮೆದುರು ಬಂದು ನಿಂತು ಆ ವ್ಯಕ್ತಿಯನ್ನು ಬೀಚಿಗೆ ಹಾಗೂ ಕಾಳಿಂಗರಾಯರು ಯರೋ ಭಿಕ್ಷುಕನಿರಬೇಕೆಂದು ಭಾವಿಸಿದರು. ಇವರು ಆತನಿಗೆ ಭಿಕ್ಷೆ ಎಂಬಂತೆ ಮೂರು ಕಾಸನ್ನೋ, ಆರು ಕಾಸನ್ನೋ ಚಿಮ್ಮಬೇಕೆನ್ನುವಷ್ಟರಲ್ಲಿ ಆ ಮುದುಕ ಮುಂಬಂದು ಬಹು ನಮ್ರತೆಯಿಂದ " ಒಂದಿಷ್ಟು ಕನ್ನಡ ಪುಸ್ತಕಗಳಿವೆ, ಹೊಸಾವು ಕೋಳ್ತಿರೇನು? ಉಪಯೋಗಕ್ಕೆ ಬಂದಾವು" ಎಂದ. ಅವು ಯಾವುವೋ, ತೂಕಕ್ಕೆ ಹಾಕಬಹುದಾದ ಪುಸ್ತಕಗಳಿರಬಹುದೆಂದು ಭಾವಿಸಿದ ಬೀಚಿ ತಮಗವು ಬೇಡವೆಂದು ತಲೆಯಾಡಿಸಿ ಮುಂದೆ ಹೋಗುವಂತೆ ಕೈಬೀಸಲು ಹತಾಶನಾದ ಆ ಮುದುಕ ಆಯ್ತೂ ದೇವ್ರೂ ಬರತೀನಿ ಎಂದು ಹೊರಟು ಹೋದ. ಇದೆಲ್ಲಾ ಆದದ್ದು ಆ ದಿನ ಮಧ್ಯಾಹ್ನ ಎರಡು ಘಂಟೆಯ ಹೊತ್ತಿನಲ್ಲಿ.
    ಆ ಮುದುಕ ಅತ್ತ ಹೋದ ನಂತರ ಇತ್ತ ಬೀಚಿ ಹಾಗೂ ಕಾಳಿಂಗರಾಯರು ಆ ಅಂಗಡಿ ಮಾಲೀಕನ ಮನೆಯಲ್ಲಿ ಊಟಮಾಡಿ, ವಿಶ್ರಾಂತಿ ಪಡೆದು, ಸಾಯಂಕಾಲವಾಗುತ್ತ ಬಳ್ಳಾರಿಯ ಅಂಚಿನಲ್ಲಿರುವ ಕೆರೆಯ ದಂಡೆಯ ಮೇಲೆ ಅಡ್ಡಾಡಿ ಬರಲು  ಹೋದಾಗ ಕಂಡದ್ದಾದರೂ ಏನನ್ನು? ಮಧ್ಯಾಹ್ನ ಕಂಡಿದ್ದ ಅದೇ ಮುದುಕ ಈಗ ಕೆರೆಯಲ್ಲಿ ಕೌಪೀನಧಾರಿಯಾಗಿ, ಆಗಷ್ಟೇ ಸಾನ್ನಮಾಡಿ, ತಲೆಗೆ ಸುತ್ತಿದ್ದ ಕೆಂಪು ವಸ್ತ್ರವನ್ನೂ, ಪಂಚೆಯಂತೆ ಉಟ್ಟಿದ್ದ ಮಾಸಲು ಧೋತ್ರವನ್ನೂ ನೆನಸಿ ಕೆರೆಯ ಸೋಪಾನದ ಮೆಟ್ಟಿಲ ಮೇಲೆ ಕಸಕುತ್ತಿರುವುದು ಕಂಡು ಬಂತು. ಅವನು ಹೆಗಲ ಮೇಲೆ ಹೊತ್ತುಕೊಂಡಿದ್ದ ಮೂಟೆ ಇನ್ನೊಂದು ಮೆಟ್ಟಿಲ ಮೇಲೆ!
ಬೀಚಿ ಹಾಗೂ ರಾಯರು ಕುತೂಲಹದಿಂದ ಅವನತ್ತ ನೋಡುತ್ತಿರಲು, ಆ ಮುದುಕ ಒಗೆದಿದ್ದ ವಸ್ತ್ರಗಳನ್ನು ಅಲ್ಲೇ ಮೆಟ್ಟಿಲಗಳ ಮೇಲೆ ಹರವಿ ಅನಂತರ ಕೆರೆ ಅಂಚಿನ ಬಳಿ ಕುಳಿತು ಸಂಧ್ಯಾವಂದನೆಯನ್ನು ಮಾಡಲಾರಂಭಿಸಿದ. ಅವನನ್ನೇ ನೋಡುತ್ತಿದ್ದ ಇವರಿಬ್ಬರಿಗೆ ಕುತೂಹಲ ಮತ್ತಷ್ಟು ಕೆರಳಿತು " ಪಾಪ ಕರ್ಮಠ ಬ್ರಾಹ್ಮಣಾನ್ಸುತ್ತೇ ಬೀಚಿ! ಯರೋ ಏನೋ, ಈತನ ಪೂರ್ವಾಪರಗಳನ್ನು ವಿಚಾರಿಸಿಯೇ ಬಿಡೋಣ. ಎಂದು ಕಾಳಿಂಗರಾಯರೆನ್ನಲು ಬೀಚಿ ಹೂಂಗುಟ್ಟಿದರು.
    ಆ ಮುದುಕ ಸಂಧ್ಯಾವಂದನೆಯನ್ನು  ಮುಗಿಸವುದನ್ನೇ ಕಾಯುತ್ತಿದ್ದರು. ಮುಗಿಯಿತು. ಮುದುಕ ಐದಾರು ಮೆಟ್ಟಿಲಗಳನ್ನೇರಿ ತಾನು ಅಲ್ಲಿರಿಸಿದ್ದ ಮೂಟೆಯ ಬಾಯಿಗೆ ಕಟ್ಟಿದ್ದ ಸುತ್ತಲಿಯನ್ನು ಬಿಚ್ಚಿ ಒಳಗಿದ್ದ ಪುಸ್ತಕಗಳನ್ನು ಜೋಪಾನವಾಗಿ ಹೊರತೆಗೆದು ಅಲ್ಲೇ ಪಕ್ಕಕ್ಕಿರಿಸಿ, ಅವುಗಳಲ್ಲಿ ಎಷ್ಟು ಖರ್ಚಾಗಿವೆ ಎಂದು ಎಣಿಸುತ್ತಿರುವಾಗ ಇದನ್ನೆಲ್ಲಾ ಮೇಲೆ ನಿಂತು ಗಮನಿಸುತ್ತಿದ್ದ ಬೀಚಿ ಹಾಗೂ ಕಾಳಿಂಗರಾಯರಿಗೆ ಆ ಪುಸ್ತಕಗಳೆಲ್ಲಾ ಹೊಚ್ಚಹೊಸ ಪುಸ್ತಕಗಳೆಂದು ತೋರಿ, ಅಚ್ಚರಿಗೊಂಡ ಇವರು ಆ ಮುದುಕನ ಬಳಿ ಸಾರಿ ಎದುರು ನಿಲ್ಲಲು  ಆ ವೃದ್ದ ಇವರನ್ನು ದಿಟ್ಟಿಸಿ ಬನ್ನಿ ಬನ್ನಿ,  ಕನ್ನಡದ ಪುಸ್ತಕಗಳು, ಸೊಗಸಾದ ಸಾಹಿತ್ಯ ಉಪಯೋಗಕ್ಕೆ ಬಂದಾವು, ಕೊಳ್ಳಿ  ಎಂದು ಕೈಮುಗಿದ. ಈ ಇಬ್ಬರೂ ಆ ಪುಸ್ತಕಗಳತ್ತ ಇಣುಕಿದರು. ಹೊಸದಾಗಿ ಮುದ್ರಿತವಾಗಿದ್ದ ಪುಸ್ತಕಗಳವು! ಶಿವರಾಮ ಕಾರಂತ, ಆಲೂರು ವೆಂಕಟರಾಯರು, ಕುವೆಂಪು, ಇಂಥವರ ಪುಸ್ತಕಗಳು! ಇವುಗಳನ್ನು ನೋಡುತ್ತಲೇ ಅಚ್ಚರಿಗೊಂಡ ಬೀಚಿಯವರು "ಅದ್ಸರೀ ಯಜಮಾನ್ರೇ, ಈ ಇಳಿ ವಯಸ್ಸಿನಲ್ಲಿ ನೀವ್ಯಾಕೆ ಹೀಗೆ ಈ ಪುಸ್ತಕಗಳನ್ನು ಹೊತ್ತು ಬೀದಿಬೀದಿ ಸುತ್ತಿ ಮಾರುತ್ತಿದ್ದೀರಿ?"  ಎನ್ನಲು ವಿಚಿತ್ರವಾಗಿ ನಕ್ಕ ಆ ಮುದುಕ " ಹಾಗೇ ಮಾಡ್ಬೇಕೂ ದೇವ್ರು, ಕನ್ನಡ ಪುಸ್ತಕಗಳನ್ನು ಮನೆಮನೇಗೆ ತಲುಪಿಸಿ ಓದುವ ಅಭಿರುಚಿಯನ್ನು ನಮ್ಮವರಲ್ಲಿ ಬೆಳಸಬೇಕೂ ಅಂಬೋದಾದ್ರೆ ಹೀಗೆ ಮಾಡಿದರೆ ಮಾತ್ರ ಆದೀತು  ಅಂತ ನನಗೆ ಅನ್ನಿಸಿತು, ಮಾಡ್ತಿದ್ದೀನಿ, ಈಗ ಹಲವು ವರ್ಷಗಳಿಂದ ಹೀಗೆ ಮಾಡ್ತಿದ್ದೀನಿ" ಎಂದ. ಆಗ ಬೀಚಿ ಮುಂದುವರೆದು " ಆದ್ರೂ ಈ ಮುಪ್ಪಿನಲ್ಲಿ ನೀವು ಹೀಗೆ ಈ ಕನ್ನಡದ ಕೆಲಸವನ್ನ ಮಾಡ್ತಿರೋದ್ನ ನೋಡಿದ್ರೆ ನಮ್ಮಂಥ ಯುವಕರು ನಾಚ್ಕೆಪಟ್ಕೋಬೇಕು. ಅಂದ್ಹಾಗೆ ತಾವ್ಯಾರು? ಎಲ್ಲಿದ್ದೀರಿ?" ಎಂದು ಬೀಚಿಯವರು ಕೇಳಲು ಆ ಮುದುಕ ಪುಸ್ತಕಗಳನ್ನು ಮತ್ತೆ ಮೂಟೆಗೆ ಸೇರಿಸುತ್ತಾ  " ಹೀಗೇನ್ರಿ, ಛತ್ರ ದೇವಸ್ಥಾನಗಳಲ್ಲಿ ಇಳ್ಕೋತೀನಿ, ನದಿ,ಕೆರೆ, ಕೊಳಗಳಲ್ಲಿ ಸ್ನಾನ ಸಂಧ್ಯಾವಂದನೆಗಳನ್ನು ಮುಗಸ್ಕೋತೀನಿ. ಊರಿಂದೂರ‍್ಗೆ ಅಲೀತ ಕನ್ನಡ ಪುಸ್ತಕಗಳನ್ನು ಅದಷ್ಟು ಜನಪ್ರಿಯ ಮಾಡೋದೇ ನನ್ನ ಕೆಲಸ ಹಾಗೂ ಉದ್ದಿಶ್ಯ" ಎಂದಾಗ ಕಾಳಿಂಗರಾಯರು " ಆದಾಯ್ತು ಸ್ವಾಮೀ, ತಮ್ಮ ನಾಮಧೇಯ?" ಎಂದು ಕೇಳಲು ಕ್ಷಣ ಕಾಲ ಈ ಇಬ್ಬರನ್ನೂ ದುರುಗುಟ್ಟಿ ದಿಟ್ಟಿಸಿದ ಆ ಮುದುಕ " ನಮ್ಮ ಕಡೆ ತಿಳಿದೋರು ನನ್ನನ್ನು ಪಂಡಿತ ಗಳಗನಾಥಾ ಅಂತ ಕರೀತಾರೇ" ಎಂದು ಮುಕ್ಕಿರಿಯುತ್ತಾ  ತನ್ನ ಮೂಟೆಯನ್ನು ಹೊತ್ತು ನಿಂತಾಗ ದೇಹಾದ್ಯಂತ ಕಂಪನಗೊಂಡ ಬೀಚಿ ಹಾಗೂ ಕಾಳಿಂಗರಾಯರು ಆ ಕ್ಷಣವೇ ಕುಸಿದು ಗಳಗನಾಥರ ಶ್ರೀಚರಣ ಕಮಲಗಳಿಗೆ ಸಾಷ್ಟಾಂಗವೆರಗಿದರು.
    ಇಂತಹ ರೋಮಾಂಚನ ಪ್ರಸಂಗಗಳು "ಕನ್ನಡದ ಕೂಲಿ" ಎಂದೆ ಕರೆಯುತ್ತಿದ್ದ ರಾಜರತ್ನಂ.ಜಿ.ಪಿ ರವರು ಇನ್ನು ಮುಂತಾದ ಮಹಾನೀಯರ ಯಶೋಗಾಥೆ ಕನ್ನಡ ಸಾಹಿತ್ಯ ಹಿಂದೆ ಇದೆ . ಮಯೂರು ಮಾಸ ಪತ್ರಿಕೆಯಲ್ಲಿ  ನವೆಂಬರ ೨೦೧೦ರಲ್ಲಿ ಪ್ರಕಟವಾದ ಯು.ಆರ‍್.ಅನಂತಮೂರ್ತಿ ಯವರ "ಬೌದ್ದಿಕ ಸಂಕಟ ಮತ್ತು ಸೃಜಶೀಲತೆ" ಲೇಖನದಲ್ಲಿ ತಿಳಸಿರುವಂತೆ  ಇವತ್ತು ಕನ್ನಡ ಯಾಕೆ ಉಳಿದಿದೆ ಅಂದರೆ ಇನ್ನೂ ಹಿಂದುಳಿದವರು ಇದ್ದಾರೆ ಎಂದೇ. ಹಾಗಾದರೆ ಕನ್ನಡವನ್ನು ಉಳಿಸುವುದಕ್ಕಾಗಿ ಹಿಂದುಳಿದವರು ಹಿಂದೆಯೇ ಉಳಿದಿರಬೇಕೇ? ಖಂಡಿತವಾಗಿಯೂ ಅದು ಹಾಗಾಗಬೇಕಿಲ್ಲ. ಹಾಗಿಲ್ಲದೆಯೇ ಅನೇಕ ಬಾಷೆಗಳು ಉಳಿದಿವೆ. ಕೊಂಕಣಿ ಮತ್ತು ತುಳು ಭಾಷೆಗಳು ಇದಕ್ಕೆ ಉತ್ತಮ ಉದಾರಹಣೆ. ಕೊಂಕಣಿ ಏಕೆ ಉಳಿದಿದೆ ಎಂದರೆ ಒಬ್ಬ ಕೊಂಕಣಿ ಮತ್ತೊಬ್ಬ ಕೊಂಕಣಿಯನ್ನು ಕಂಡಾಗ ತನ್ನ ಭಾಷೆಯನ್ನು ಬಳಸದೇ ಹೋದರೆ ಇವನು ಗರ್ವಿಷ್ಟ ಎಂದು ಅವನು ತಿಳಿಯುತ್ತಾನೆ. ಈ ಬಗೆಯ ಸಾಮಾಜಿಕ ಅನಿವಾರ್ಯತೆಗಳಿಂದ ಮನೆ ಮಾತುಗಳು ಉಳಿದುಬಿಡುತ್ತವೆ. ತುಳು ಭಾಷೆ ಉಳಿದಿರುವುದೂ ಹೀಗೆಯೇ. ಇಂಥದ್ದೊಂದು ವಾತಾವರಣದಲ್ಲಿ ನಮ್ಮ ಭಾಷೆಗಳು ಉಳಿಯಬೇಕಾದರೆ ಏನು ಮಾಡಬೇಕು. ನಾನು ಬಹಳಷ್ಟು ಸಾರಿ ಹೇಳಿರುವ ವಿಚಾರವೇ ಆಗಿದ್ದರೂ ಅದನ್ನು ಮತ್ತೊಮ್ಮೆ ಹೇಳಬೇಕು ಅನ್ನಿಸುತ್ತದೆ. ನಮ್ಮ ಭಾಷೆಗಳು ಉಳಿಯಲು ಸಾಮಾನ್ಯ ಶಾಲೆಗಳು ಬೇಕು. ನನ್ನ ಅಜ್ಜ ಅಉರೋಹಿತರು ಈ ಪುರೋಹಿತರು ಹೊಸ ಕಾಲದ ಜಾತಿ ವಾದಿಗಳಿಗಿಂತ ಒಳ್ಳೆಯವರು. ಏಕೆಂದರೆ ಅವರು ಸರಳವಾದ ಜನರು ಬಡವರೂ ಹೌದು  ಭವತಿ ಭಿಕ್ಷಾಂದೇಹಿ ಎಂದು ಎಲ್ಲಾ ಕಡೆ ಭಿಕ್ಷೆ ಎತ್ತಿಕೊಂಡು ಬರುತ್ತಿದ್ದರು. ಅವರಿಗೆ ಕನ್ನಡ ಗೊತ್ತಿತ್ತು ಸಂಸ್ಕೃತ ಬಾಯಿಪಾಠವಾಗಿತ್ತು. ಪುರೋಹಿತರ ಮನೆಯಲ್ಲಿ ಹುಟ್ಟಿದ ಎಲ್ಲ ಮಕ್ಕಳಂತೆ ನಾನು ಮನೆಯಲ್ಲಿ ಅಂಗವಸ್ತ್ರ ಧರಿಸುತ್ತಿದ್ದೆ. ಶಾಲೆಗೆ ಹೋಗುವಾಗಲಷ್ಟೇ ಅಂಗಿ ಹಾಕಿಕೊಳ್ಳುತ್ತಿದೆ. ನಾನು ಪುರೋಹಿತರ ಕುಟುಂಬದಲ್ಲಿ ಹುಟ್ಟಿದರೂ ಸಾಮಾನ್ಯ ಶಾಲೆಯಲ್ಲಿ ಕಲಿತೆ. ನನ್ನ ಸುತ್ತಲಿನ ಎಲ್ಲವುಗಳ ಅನುಭವ ಪಡೆದೆ. ಆದರೆ ಈ ಅವಕಾಶ ನನ್ನ ಮೊಮ್ಮಕ್ಕಳಿಗೆ  ಇಲ್ಲ. ಅವರು ಅವರ ವರ್ಗದ ಮಕ್ಕಳ ಜೊತೆಗಷ್ಟೇ ಓದುತ್ತಾರೆ. ನಾವೆಲ್ಲಾ ಇವತ್ತು ನಮ್ಮ ಮಕ್ಕಳನ್ನು ನಮ್ಮ ವರ್ಗದವರ ಮಕ್ಕಳೇ ಇರುವಂಥ ಶಾಲೆಗಳಿಗೆ ಕಳುಹಿಸುತ್ತಿದ್ದೇವೆ. ಅವರಿಗೆ ಕನ್ನಡ ಒಂದು ಮನೆ ಮಾತಾಗಿ ಉಳಿದಿರುತ್ತದೆ. ಆದರೆ ನನ್ನ ಹಾಗೆ ಅವರಿಗೆ ಕನ್ನಡ ಬಳಸಲು ಅಂದರೆ ಇಲ್ಲಿ ಬೌದ್ದಿಕ ವಿಚಾರಗಳಿಗೆ ಕನ್ನಡ ಬಳಸುತ್ತಿದ್ದೇನಲ್ಲ ಹಾಗೆ ಅವರಿಗೆ ಕನ್ನಡವನ್ನು ಬಳಸಲು ಆಗುವುದಿಲ್ಲ. ನನ್ನ ವಿಚಾರಗಳನ್ನು ಓದುತ್ತಿರುವ ನೀವೂ ಬೌದ್ದಿಕ ವಿಚಾರಗಳಿಗೆ ಕನ್ನಡವನ್ನು ಬಳಸಲು ಗೊತ್ತಿರುವವರು. ಆದರೆ ಈಗಿನ ಪ್ರತಿಷ್ಠಿತ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಮನೆಯಲ್ಲಿ ಕನ್ನಡ ಮಾತನಾಡಿದರೂ ನಮ್ಮಂತೆ ಕನ್ನಡ ಬಳಸಲು ಸಾಧ್ಯವಿಲ್ಲ. ನಮಗೇಕೆ ಸಾಧ್ಯವಾಗಿದೆ ಎಂದರೆ ನಾವು ಚಿಂತಿಸುವ ಭಾಷೆಯೇ ಕನ್ನಡ.
   

No comments:

Post a Comment