Popular Posts

Friday, January 28, 2011

ಕಿಲಿಮಂಜಾರೋ,ತಾಜಾ ತಾನ್ಜಾನಿಯ ದೇಶದ ಪ್ರವಾಸ ಕಥನದ ಪುಸ್ತಕ ಪರಿಚಯ

ಕಿಲಿಮಂಜಾರೋ,ತಾಜಾ ತಾನ್ಜಾನಿಯ ದೇಶದ ಪ್ರವಾಸ ಕಥನದ ಪುಸ್ತಕ ಪರಿಚಯ.
    ಈ ಜಗತ್ತಿಗೆ ಹಾಗೇ ಎಲ್ಲಿಂದಲೋ ಬರುತ್ತವೆ, ಮತ್ತೆಲ್ಲಿಗೋ ಹೋಗುತ್ತವೆ, ಈ ಬಂದು ಹೋಗುಗಳ ನಡುವೆ ಒಂದಿಷ್ಟು ಸುತ್ತಾಟ. ಸುತ್ತಾ ಇರುವವರ ಜೊತೆಗೆ ಸ್ನೇಹ, ಪ್ರೀತಿ, ವಿಶ್ವಾಸವನ್ನು ಬೆಳಸುತ್ತವೆ. ಆದರೆ ಪ್ರಕೃತಿ ಹಾಗಲ್ಲ ನಾವು ಇದ್ದವೆಂದು ನೀರು ಹರಿಯುವುದು, ಹೂವು ಅರಳವುದು, ಹಕ್ಕಿ ಕೂಗುವುದು, ಬೀಜ ಮೊಳೆಯುವುದು, ಬೆಳಯುವುದು, ಅಳಿಯುವುದು ಯಾವುದನ್ನು ನಿಲ್ಲಿಸುವುದಿಲ್ಲ ಮತ್ತು ಕೇಳುವುದಿಲ್ಲ ಯಾರೋ ಕೀ ಕೊಟ್ಟ ಗಡಿಯಾರದ ತರಹ ಒಂದೇ ಸಮನೆ ನಡೆಯುತ್ತಾ ಇರುತ್ತದೆ? ಈ ಪ್ರಕೃತಿಗೆ ಮಾನವನ ಜೊತೆ ಅವಿನಾಭವ ಸಂಬಂಧ ಹೊಂದಿದ್ದು ಆದರೆ ಈ ಮನುಷ್ಯನ ದುಷ್ಟತನಕ್ಕೆ ಈ ಪ್ರಕೃತಿ ಹೆದರಿ ಅವನ ಮುಂದೆ ಕೈಚಲ್ಲಿ ಕುಳಿತುಬಿಟ್ಟಿದೆ. ಈ ಪ್ರಕೃತಿ ಮುಂದೆ ಮನುಷ್ಯ ಕುಬ್ಜ ಎನ್ನುವುದನ್ನು ಮನುಷ್ಯ ಮರೆತಿದ್ದಾನೆ. ಆದರೂ ಸಹ ಎಲ್ಲವನ್ನು ಜಯಿಸುತ್ತೇನೆ ಎಂಬ ಹಂಬಲಕ್ಕೆ ಬಿದ್ದಾಗ ಆಗಾಗ ಪ್ರಕೃತಿ ಪೆಟ್ಟು ನೀಡುತ್ತಾ ಬಂದಿದೆ. ಇಂತಹ ಸನ್ನಿವೇಶಗಳನ್ನು ಎದುರಿಸಿದರೂ ಮನುಷ್ಯ ತನ್ನ ಪ್ರಕೃತಿಗೆ ಏನನ್ನು ನೀಡಲಾಗುತ್ತಿಲ್ಲವಾದ್ದರಿಂದ ಅವನು ಪ್ರಕೃತಿ ಎದುರು ತನ್ನ ಸೋಲನ್ನು ಒಪ್ಪಿಕೊಳ್ಳುವಂತಾಗಿದೆ.
    ಈ  ವಿಷಯವನ್ನು ಹೇಳಲು ಹೊರಟಿರುವುದು ಯಾತಕ್ಕೆ? ಎಂಬ ಪ್ರಶ್ನೆ ಮೊದಲು ಉದ್ಭವಿಸುತ್ತದೆ. ಆದರೆ ಈ ಪ್ರಕೃತಿಯ ಬಗ್ಗೆ ಏನೆಲ್ಲಾ ಹೇಳಿದರು ಸಾಕಗುವುದಿಲ್ಲ ಹಾಗೂ ಇವತ್ತಿಗೂ ಸಹ ಮನುಷ್ಯ ಪ್ರಕೃತಿಯ ರಹಸ್ಯವನ್ನು ಭೇದಿಸುತ್ತಿದ್ದಂತೆ ಹೊಸ ಹೊಸ ರಹಸ್ಯಗಳು ಹುಟ್ಟಿಕೊಳ್ಳುತ್ತಲೆ ಇದೆ. ಇದೇ ಪ್ರಕೃತಿಯ ಧರ್ಮ. ಆಯಾ ಆಯಾ ದೇಶದ ನೈಸರ್ಗಿಕ ಮೇಲ್ನೋಟಕ್ಕೆ  ಪ್ರಕೃತಿ ಬಹಳ ವಿಶೇಷವಾಗಿ ವಿಶಿಷ್ಟವಾದ ಪ್ರದೇಶಗಳು ರಚನೆಯಾಗಿವೆ. ಈಗ ನಾನು ಬರೆಯ ಹೊರಟಿರುವುದು ಅಂತಹ ಒಂದು ಪುಸ್ತಕದ ಬಗ್ಗೆ ಮೊನ್ನೆ ತಾನೆ ಬಿಡುಗಡೆಯಾದ ಛಂದಪುಸ್ತಕ ಪ್ರಕಾಶನದ ಪ್ರಶಾಂತ್ ಬೀಚಿ ಬರೆದಿರುವ " ಕಿಲಿಮಂಜಾರೋ" ತಾಜಾ ತಾನ್ಜಾನಿಯಾ  ಪುಸ್ತಕದ ಬಗ್ಗೆ. ಪ್ರವಾಸ ಕಥನಗಳು ಕನ್ನಡ ಸಾಹಿತ್ಯದಲ್ಲಿ ಬೇಕಾದಷ್ಟು  ಬಂದು ಹೋಗಿವೆ ಅದರಲ್ಲಿ ಕೆಲವು ಮಾತ್ರ ನೆನಪಿನಲ್ಲಿ ಉಳಿಯುವಂತಹ ಪುಸ್ತಕಗಳು ಇದರಲ್ಲಿ ಎ.ಎನ್.ಮೂರ್ತಿರಾಯರ "ಅಪರ ವಯಸ್ಸಿನ ಅಮೇರಿಕಾ ಯಾತ್ರೆ" ಗೊರೂರು ರಾಮುಸ್ವಾಮಿ ಅಯ್ಯಂಗಾರರ " ಅಮೇರಿಕಾದಲ್ಲಿ ಗೊರೂರು" ಚಂದ್ರಶೇಖರ ಆಲೂರರ "ನೈಲ್ ನದಿಯ ತೀರದಲ್ಲಿ" ಹಾಗೂ ಜಿ.ಎನ್.ಮೋಹನ್ ರವರ "ನನ್ನದೆಯ ಹಾಡು ಕ್ಯೂಬ" ಇದಲ್ಲದೆ ಇನ್ನೂ ಹಲವಾರು ಪುಸ್ತಕಗಳು ಪ್ರಕಟಗೊಂಡಿದ್ದು ಆಫ್ರಿಕಾ ಖಂಡದ ಬಗ್ಗೆ  ಇದುವರೆವಿಗೂ ಯಾವುದೇ ಸಾಹಿತ್ಯಕ್ಕೆ ಮತ್ತು ಪ್ರವಾಸ ಕಥಾನಕ್ಕೆ ಸಂಬಂಧಿಸಿದ ಪುಸ್ತಕಗಳು ಪ್ರಕಟಣೆಗೊಂಡಿಲ್ಲವೆಂದು ನನ್ನ ಅನಿಸಿಕೆ. ಈ ನಿಟ್ಟಿನಲ್ಲಿ ಪ್ರಶಾಂತ್ ಬೀಚಿಯವರ ಮೊದಲನೆ ಪುಸ್ತಕ "ಲೇರಿಯೊಂಕ"  ಅನುವಾದಿತ ಕಾದಂಬರಿ ಹಾಗೂ ಪ್ರಸ್ತುತ ಈ ಪುಸ್ತಕ ಆಫ್ರಿಕಾದ  ಸಂಸ್ಕೃತಿ, ಜೀವನ, ಪ್ರಕೃತಿ ಇದರ ಬಗ್ಗೆ ತಿಳಿಸಿರುತ್ತಾರೆ.
ಈ ಪುಸ್ತಕ ಪರಿಚಯಕ್ಕಿಂತ ಮೊದಲು ಈ ಲೇಖಕರ ಪರಿಚಯ ಮಾಡಿಕೊಡಬೇಕಾಗುತ್ತದೆ. ಪ್ರಸ್ತುತ  ಈ ಲೇಖಕರು ಪೂರ್ವ  ಆಫ್ರಿಕಾದ ತಾನ್ಜಾನಿಯದ ಅರುಷದಲ್ಲಿ ಬೆನ್ಸನ್ ಇನ್ ಫಾರ್ಮಾಟೆಕ್ ಕಂಪನಿಯ ತಾಂತ್ರಿಕ ಮುಖ್ಯಸ್ಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇದು ಅವರ ಎರಡನೇ ಕೃತಿಯಾಗಿದ್ದು "ಲೇರಿಯಾಂಕ" ಅನುವಾದಿತ ಕಾದಂಬರಿಗೆ ಬೇಂದ್ರೆ, ಪರಮೇಶ್ವರ ಭಟ್ಟ ಮತ್ತು ವಸುದೇವ ಭೂಪಾಲಂ ಪುಸ್ತಕ ಬಹುಮಾನಗಳು ದೊರತಿವೆ.
    ಕಿಲಿಮಂಜಾರೋ ಪರ್ವತದ ಬಗ್ಗೆ ಓದುವುದಕ್ಕಿಂತ ಮೊದಲು ಈಗಷ್ಟೇ ಬಿಡುಗಡೆಯಾದ ಎಂಥಿರನ್ ಚಿತ್ರದ ಕಿಲಿಮಂಜಾರೋ, ಕಿಲಿಮಂಜಾರೋ ಹಾಡನ್ನು ನೆನೆಪಿಸಿಕೊಂಡೆ.
    ಕಿಲಿಮಂಜಾರೋ ಪುಸ್ತಕವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು  ಮೊದಲನೇ ಭಾಗದಲ್ಲಿ ಕಿಲಿಮಂಜಾರೋ ಪರ್ವತರೋಹಣಕ್ಕೆ ಸಂಬಂಧಿಸಿದಂತೆ ತಮ್ಮ ವಿಶಿಷ್ಟ ಅನುಭವವನ್ನು ಲೇಖಕರು ತೆರೆದಿಡುತ್ತಾರೆ.
    ಪೂರ್ವ ಆಫ್ರಕಾ ಖಂಡದ ತಾನ್ಜಾನಿಯ ದೇಶದಲ್ಲಿ ದೊರೆಯುವ ತಾನ್ಜನೈಟ್ ಹರಳಿನ ಬಗ್ಗೆ ಈ ಹರಳು ವಜ್ರಕ್ಕಿಂತ ಬೆಲೆಬಾಳುವುದು. ಈ ಹರಳನ್ನು ಗುಜರಾತಿನ ವಜ್ರ ವ್ಯಾಪಾರಿಗಳಿಗೆ ಕಳುಹಿಸಿ ಕೆನಡಾ, ಯರೋಪ್ ರಾಷ್ಟ್ರಗಳಿಗೆ ರಫ್ತು  ಮಾಡುವುದರ ಬಗ್ಗೆ ಹಾಗೂ ತಾನ್ಜಾನಿಯದ ರಾಷ್ಟ್ರೀಯ  ಉದ್ಯಾವನ ಗೋರಂಗೋರೊ ಉದ್ಯಾವನ ಪ್ರಪಂಚದ ನೈರ್ಸಗಿಕ ಅದ್ಭುತ ಮತ್ತು  ಕಿಲಿಮಂಜಾರೋ ಪರ್ವತಾರೋಹಣಕ್ಕೆ ಖರ್ಚು ಆಗುವ ವೆಚ್ಚ. ಆರೋಗ್ಯದ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮ ತಾಪಮಾನದ ಏರುಪೇರುಗಳು, ಪರ್ವತರೋಹಣ ಮಾಡಲು ತೆಗೆದುಕೊಳ್ಳುವ ಸಮಯ ಇವೆಲ್ಲದರ ಬಗ್ಗೆ ವಿವರಿಸಿರುತ್ತಾರೆ.
    ಪರ್ವತರೋಹಣದ ಎರಡನೇ ಹಂತದಲ್ಲಿ ಅರುಷದಿಂದ ಮೋಶಿಗೆ ಮತ್ತು ಮೋಶಿಯಿಂದ ಕಿಲಿಮಂಜಾರೋ ಪರ್ವತದ ತಳಕ್ಕೆ  ಬರಲು ಹಿಡಿಯುವ ಸಮಯ ಸಮುದ್ರ ಮಟ್ಟದಿಂದ ೨೭೦೦ ಮೀಟರ‍್ ಮಂಡಾರ ಹಟ್ ನಲ್ಲಿ ಉಳಿದು ಕೊಂಡಿದ್ದು. ಅಲ್ಲಿನ ಪ್ರಕೃತಿಯ ಬದಲಾವಣೆ ಮತ್ತು ಮಾರನೇ ದಿನ ಹೊರೊಂಬೊ ಗುಡಿಸಿಲಲ್ಲಿ ಉಳಿದಕೊಂಡಿದ್ದು ಆಫ್ರಿಕಾದ ಬಹಳ ಹೆಸರುವಾಸಿಯಾದ "ಸುವನ್ನಾ" ಕಾಡಿನ ಬಗ್ಗೆ .ನಾಲ್ಕನೇ ದಿನ ಪ್ರಯಾಣದಲ್ಲಿ ಮವೇನ್ ಜಿ ಮತ್ತು ಕಿಬೊ ಪರ್ವತದ ಎರಡು ಉನ್ನತ ಸ್ಧಾನಗಳ ಬಗ್ಗೆ. ಝೀಬ್ರಾರಾಕ್ಸ್ ಹತ್ತಿದ್ದು ಕಿಬೊ ಹಟ್ ನಲ್ಲಿ ಉಳಿದು ಕೊಂಡಿದ್ದ ಸಮಯದಲ್ಲಿ ಮಂಜಿನಿ ನೀರಿನಲ್ಲಿ ಅಂಡು ತೊಳೆದು ಕೊಂಡ ಹ್ಯಾಸ ಪ್ರಸಂಗ. ಹನ್ಸ್ ಮೇಹರ‍್ ಗುಹೆಯಲ್ಲಿ ಉಳಿದುಕೊಂಡ ಬಗ್ಗೆ.
ಪರ್ವತರೋಹಣದ ಕೊನೆಯ ಭಾಗದಲ್ಲಿ  ಗಿಲ್ಮನ್ಸ್ ಪಾಯಿಂಟ್ ತನಕ ಪರ್ವತರೋಹಿಗಳು ಬಂದು ಅಲ್ಲಿಂದ ಸಾಗಲಾದರೆ ಹಿಂತಿರುಗಿದ ಪ್ರಕರಣ. ಉಹುರು ಪರ್ವತದಲ್ಲಿ -೨ಡಿಗ್ರಿ ತಾಪಮಾನ ಬಂದಿದ್ದು ಲೇಖಕರು ಹಾಗೂ ಅವರ ಪತ್ನಿ ಈ ಪರ್ವತದ ತುದಿ ತಲುಪುವ ಹೊತ್ತಿಗೆ ಹೈರಾಣಾಗಿದ್ದು. ಆಫ್ರಿಕಾ ಖಂಡ ಅತಿ ಎತ್ತರದ ಸ್ವಾವಲಂಬಿ ಪರ್ವತದ ಮೇಲೆ ನಿಂತು ಕರ್ನಾಟಕದ ಬಾವುಟ ಹಾರಿಸಿದ್ದು  ಒಂದು ಪೂರ್ತಿ ಖಂಡವನ್ನೇ ಮೆಟ್ಟಿ ನಿಂತ ಅನುಭವದ ಬಗ್ಗೆ ಬರೆಯಾಲಾಗಿದೆ.
    ಈ ಎರಡನೇ ಭಾಗದಲ್ಲಿ ಲೇಖಕರು ತಾನ್ಜಾನಿಯ ದೇಶದ ಕಿರುಪರಿಚಯ. ಈ ದೇಶಕ್ಕೆ ತಾನ್ಜಾನಿಯ ಎಂದು ಹೇಗೆ ಹೆಸರು ಬಂತು. ಅಲ್ಲಿನ ಪರ್ವತಗಳು, ರಾಷ್ಟ್ರೀಯ ಉದ್ಯಾವನಗಳು, ದೇಶದ ಅರ್ಥಿಕ ಪರಿಸ್ಧಿತಿ, ರಾಜಕೀಯ, ಮಾಸಾಯಿ ಕಾಡು ಮನುಷ್ಯರ ಆಚಾರ-ವಿಚಾರ, ಆಹಾರದ  ವಿಭಿನ್ನತೆ, ವೈಶಿಷ್ಟತೆ, ಕಾಡುಮನುಷ್ಯರನ್ನು ಭೇಟಿ ಮಾಡಿದ್ದು. ತಾನ್ಜಾನಿಯ ದೇಶಕ್ಕೆ ಹೇಗೆ ಕೆಲಸಕ್ಕೆ ಹೋಗಿದ್ದು ಹೋದಾಗ ಪಟ್ಟ ಪರಿಪಾಟಲು ಹಾಗೂ ಆ ದೇಶದ ಬಡತನ, ನಿರುದ್ಯೋಗ, ವಿದ್ಯಾಭ್ಯಾಸವಿಲ್ಲದೆ ಅಲ್ಲಿನ ಪ್ರಜೆಗಳು ಡ್ರಗ್ಸ್ ಅಭ್ಯಾಸದಿಂದ ಅಲ್ಲಿನ ಜನ ವಿದೇಶ ಮತ್ತು ಸ್ವದೇಶ ಜನಗಳ ಹತ್ತಿರ ಹೊತ್ತಿಲ್ಲದ ಹೊತ್ತಿನಲ್ಲಿ ಸುಲಿಗೆ ಮಾಡುವುದು. ಈ ವಿಷಯದ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಹಾಗೂ ಸ್ವತ ಲೇಖಕರೇ ದರೋಡೆಗೆ ಒಳಗಾದ ಅನುಭವಗಳು. ಆಫ್ರಿಕಾ ಖಂಡದ ಜೀವಂತ ಜ್ವಾಲಾಮುಖಿ ಪರ್ವತ ಓಲ್ಡೋ ನಿಯೊ ಲೆಂಗಾಯಿ ಪರ್ವತವನ್ನು ಹತ್ತಿದ್ದು. ಗೋರೊಂಗೋರೋ ರಾಷ್ಟ್ರೀಯ ಉದ್ಯಾವನದಲ್ಲಿ ತಮ್ಮ ಎರಡನೇ ಮಧುಚಂದ್ರವೆಂದು ರಾಷ್ಟ್ರೀಯ ಉದ್ಯಾವನದಲ್ಲಿ ಸಫಾರಿ ಮಾಡಿದ ಬಗ್ಗೆ ಅನುಭವಿಸಿದ ವಿವರಗಳು. ಅಮೇರಿಕಾದಿಂದ ಬಂದು ಸಮಾಜ ಸೇವೆ ಮಾಡುತ್ತಿರುವ ಡಾ:: ಫ್ರಾಂಕ್ ರವರ ಯಶೋಗಾಥೆಯ ಬಗ್ಗೆ. ಒಟ್ಟಾರೆ ಲೇಖಕರ ಕಿಲಿಮಂಜಾರೋ ತಾಜಾ ತಾನ್ಜಾನಿಯ ಪುಸ್ತಕ ಕನ್ನಡ ಸಾಹಿತ್ಯಕ್ಕೆ ಒಂದು ವಿಶೇಷ  ಕೊಡುಗೆಯಾಗಿದ್ದು ಲೇಖಕರು ಇನ್ನೊಂದಿಷ್ಟು ಸಂಕ್ಷೀಪ್ತವಾಗಿ ವಿವರಿಸಿ ಪೋಟೋಗಳೊಂದಿಗೆ ವಿವರ ನೀಡಿದಲ್ಲಿ ಚೆನ್ನಾಗಿರುತ್ತಿತ್ತು.
    ಈ ಕಿಲಿಮಂಜಾರೋ  ಬಗ್ಗೆ  ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಪಡೆದ ಅರ್ನೆಸ್ಟೋ ಹೆಮಿಂಗ್ ವೇಯ " ಸ್ನ್ಸೋ ಆಫ್ ಕಿಲಿಮಂಜಾರೋ" ಎಂಬ ಪುಸ್ತಕದ ಕಥೆಯನ್ನು ಆಳವಡಿಸಿ 1952ರಲ್ಲಿ " ಸ್ನ್ಸೋ ಆಫ್ ಕಿಲಿಮಂಜಾರೋ"  ಎಂಬ ಚಲನಚಿತ್ರವನ್ನು ಅಮೇರಿಕಾದ ನಿರ್ದೇಶಕ ಹೆನ್ರಿ ಕಿಂಗ್ ನಿರ್ದೇಶಿಸಿದ್ದು. ಮುಖ್ಯ ಭೂಮಿಕೆ ಗ್ರೆಗರಿ ಪೆಕ್, ಸುಸಾನ್ ಹೈವಾರ್ಡ್ ಮತ್ತಿತ್ತರು ಅಭಿನಯಿಸಿದ್ದು ಈ ಚಿತ್ರ ಆಕಾಡೆಮಿ ಪ್ರಶಸ್ತಿಗೆ ಉತ್ತಮ ಛಾಯಾಗ್ರಹಣ ಮತ್ತು ಕಲಾ ನಿರ್ದೇಶನಕ್ಕೆ ವಿಭಾಗದಲ್ಲಿ ನಾಮನಿರ್ದೇಶನವಾಗಿತ್ತು.





   

Wednesday, January 26, 2011

ಬೆಳೆಯುವ ಸಿರಿಯನು ಮೊಳಕೆಯಲಿ ಕಾಣುವವರು.





ಬೆಳೆಯುವ ಸಿರಿಯನು ಮೊಳಕೆಯಲಿ ಕಾಣುವವರು.

         ಬೆಳೆಯುವ ಸಿರಿಯನು ಮೊಳಕೆಯಲ್ಲಿ ಕಾಣುವವರು. ಈ ವ್ಯಾಕಕ್ಕೆ ಅರ್ಥ ಬರುವಂತೆ ಮಾಡಿರುವುದು ನಮ್ಮ ಛಂದ ಪುಸ್ತಕ ಪ್ರಕಾಶನ. ಛಂದ ಪುಸ್ತಕ ಪ್ರಕಾಶನ ಕಳೆದ ಆರು ವರ್ಷಗಳಿಂದ ಸತತವಾಗಿ ಕನ್ನಡ ಪುಸ್ತಕಗಳನ್ನು ಪ್ರಕಾಶನ ಮಾಡುತ್ತಿದ್ದು ಇದರ ರೂವಾರಿ ಶ್ರೀ ವಸುಧೇಂದ್ರರವರು ಸಾಧನೆ ಶ್ಲಾಘನೀಯ. ಸ್ವತ ಲೇಖಕರು ಆಗಿರುವ ಶ್ರೀ ವಸುಧೇಂದ್ರರವರು ತಮ್ಮ ಪ್ರಕಾಶನದಲ್ಲಿ ಈವರೆವಿಗೂ (ಲೇಖಕರ ಪುಸ್ತಕಗಳನ್ನು ಹೊರತು ಪಡಿಸಿ) ಹದಿನೈದು ಕಥಾಸಂಕಲನ, ಆರು ಪ್ರಬಂಧಗಳು, ಐದು ಕಾದಂಬರಿಗಳನ್ನು ಪ್ರಕಟಿಸಿರುತ್ತಾರೆ. ಶ್ರೀ ವಸುಧೇಂದ್ರರವರು ಈವರೆವಿಗೂ ನಮ್ಮಮ್ಮ ಅಂದ್ರೆ ನಂಗಿಷ್ಟ, ಕೋತಿಗಳು ಸಾರ‍್ ಕೋತಿಗಳು, ಹಂಪಿಎಕ್ಸೆಪ್ರೆಸ್ಸ್, ಚೇಳು, ಮನೀಷೆ, ಹರಿಚಿತ್ತ ಸತ್ಯ, ಕಥಾ ಸಂಕಲನ, ಪ್ರಬಂಧಗಳು, ಕಾದಂಬರಿಗಳನ್ನು ಪ್ರಕಟಿಸಿರುತ್ತಾರೆ.  ಈ ಲೇಖಕರು ತಮ್ಮ ಪುಸ್ತಕಗಳಲ್ಲದೆ ತಮ್ಮ ಪ್ರಕಾಶನದಿಂದ ಹೊಸ ಬರಹಗಾರರಿಗೆ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಿ ಹೊಸ ಬರಹಗಾರರ ಪುಸ್ತಕವನ್ನು ಪ್ರಕಟಣೆ ಮಾಡಿದ್ದು. ಈಗಾಗಲೇ ಈ ಪ್ರಕಾಶನದಡಿಯಲ್ಲಿ ಪ್ರಶಾಂತ್ ಬೀಚಿ, ಸಚ್ಚಿದಾನಂದಹೆಗೆಡೆ, ಅಪಾರ, ಸುನಂದಾಪ್ರಕಾಶ ಕಡಮೆ, ಕಾಣದ ರಾಘವ, ಕೀರ್ತಿರಾಜ್, ಹೀಗೆ ಇನ್ನೂ ಹಲವಾರು ಲೇಖಕರನ್ನು ಕನ್ನಡ ಸಾಹಿತ್ಯ ಜಗತ್ತಿಗೆ ನೀಡಿದ್ದು  ಇಂತಹ ಪರಿಶ್ರಮ, ಸಾಧನೆ ಮೆಚ್ಚುವಂತಹ ವಿಷಯವಾಗಿದೆ.

    ಈಗಾಗಲೇ ಛಂದ ಪುಸ್ತಕ ಪ್ರಕಾಶನದಿಂದ ಹೊರಬಂದ ಪುಸ್ತಕಗಳಾದ "ನಮ್ಮಮ್ಮ ಅಂದ್ರೆ ನಂಗಿಷ್ಟ" ಪುಸ್ತಕವು ಕನ್ನಡ ಸಾಹಿತ್ಯ ಆಕಾಡೆಮಿ, ಡಾ:: ಬೆಸಗರಹಳ್ಳಿ ರಾಮಣ್ಣ ಸಾಹಿತ್ಯ ಪ್ರತಿಷ್ಟಾನ, ಅಮ್ಮ ಮತ್ತು ಕಥಾರಂಗಂ ಪ್ರಶಸ್ತಿಗಳನ್ನು ಪಡೆದಿದ್ದು ಸುನಂದಾಪ್ರಕಾಶಕಡಮೆರವರ "ಪುಟ್ಟಪಾದದ ಗುರುತು" ಪ್ರಶಾಂತ ಬೀಚಿಯವರ ಲೇರಿಯೊಂಕ ಹೀಗೆ ಹಲವಾರು ಪುಸ್ತಕಗಳು ಪ್ರಶಸ್ತಿಗೆ ಭಾಜನವಾಗಿದೆ. ಇದಲ್ಲದೆ ಪ್ರತಿ ವರ್ಷ ಅತ್ಯುತ್ತಮ ಕಥಾಸಂಕಲನಕ್ಕೆ " ಛಂದ ಪುಸ್ತಕ ಬಹುಮಾನ" ಕೂಡ ನೀಡಲಾಗುತ್ತಿದ್ದು ರೂ ಹತ್ತು ಸಾವಿರಗಳು ನಗದು  ಮತ್ತು  ಪ್ರಶಸ್ತಿವನ್ನು ಕೊಡಮಾಡುತ್ತದೆ.

    ದಿನಾಂಕ:26-01-2011 ರ ಪೂರ್ವಾಹ್ನ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇಲ್ಲಿ ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ಛಂದ ಪುಸ್ತಕ ಪ್ರಕಾಶನ ಬಿಡುಗಡೆಗೊಳಿಸಿದ್ದು ಖ್ಯಾತ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ, ಅಮರೇಶನಗುಡೋಣಿ, ಇನ್ನು ಹಲವಾರು ಸಾಹಿತಿಗಳು ಹಾಗೂ ಸಾಹಿತ್ಯಾಸ್ತಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದು ಈ ಸಮಾರಂಭದಲ್ಲಿ  ಸುನಂದಾ ಪ್ರಕಾಶ ಕಡಮೆ ರವರ  ಕಾದಂಬರಿ" ಬರೀ ಎರಡು ರೆಕ್ಕೇ". ಎಂ.ಆರ‍್ ದತ್ತಾತ್ರಿಯವರ ಕಾದಂಬರಿ "ದ್ವೀಪವ ಬಯಸಿ", ಪ್ರಶಾಂತ್ ಬೀಚಿಯವರ ಪ್ರವಾಸ ಕಥನ "ಕಿಲಿಮಂಜಾರೋ" ಹಾಗೂ ಕಣಾದ ರಾಘವರವರ ಕಥಾಸಂಕಲ "ಮೊದಲ ಮಳೆಯ ಮಣ್ಣು" ಪುಸ್ತಕಗಳು ಬಿಡುಗಡೆಯಾಗಿದ್ದು. ಕಾಣದ ರಾಘವ ರವರ ಕಥಾಸಂಕಲನವಾದ " ಮೊದಲ ಮಳೆಯ ಮಣ್ಣು" ಈ ಬಾರಿಯ ಅತ್ಯುತ್ತಮ ಕಥಾಸಂಕಲನ ಎಂದು ಛಂದ ಪುಸ್ತಕ ಬಹುಮಾನ ದೊರಕಿತು. ಹಾಗೂ ಈ ಪುಸ್ತಕದ ಮುಖ ಪುಟ ವಿನ್ಯಾಸಕ್ಕೆ ಅತ್ಯಂತ ಉತ್ತಮ ಮುಖಪುಟ ವಿನ್ಯಾಸವೆಂದು ಗುರುತಿಸಲಾಯಿತು.

 ಪುಸ್ತಕಗಳಿಗಾಗಿ ಸಂಪರ್ಕಿಸಿ
ಛಂದ ಪುಸ್ತಕ ಪ್ರಕಾಶನ
ಐ-೦೦೧, ಮಂತ್ರಿ ಪ್ಯಾರಡೈಸ್,
ಬನ್ನೇರುಘಟ್ಟ ರಸ್ತೆ,
ಬೆಂಗಳೂರು-76
ದೂರವಾಣಿ ಸಂಖ್ಯೆ:98444 22782
ಇ-ಮೇಲ್ :vas123u@rocketmail.com


Tuesday, January 25, 2011

" ಆಧುನಿಕ ಕಾಲ" ಎಂದೆಂದಿಗೂ ಆಧುನಿಕ ಕಾಲವೇ...........

" ಆಧುನಿಕ ಕಾಲ" ಎಂದೆಂದಿಗೂ ಆಧುನಿಕ ಕಾಲವೇ...........

ಈ ಲೇಖನ ನನ್ನ ಸ್ನೇಹಿತ ವಿನಯಕುಮಾರ ಎಂ.ಜಿ.,  ಪ್ರೀತಿಯಿಂದ ಜೋಳಿಗೆ ಬ್ಲಾಗ್ ಗೆ ಬರೆದು ಕೊಟ್ಟಿದ್ದಾನೆ.
ಸಚಿನ್ ತೆಂಡುಲ್ಕರ‍್ ಹಾಗೂ ಮಿಥುನ್ ಚಕ್ರವರ್ತಿ ಇಬ್ಬರೂ ಒಂದು ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದರು. ಸಚಿನ್ ಬಗ್ಗೆ ಮಿಥುನ್ ಮಾತನಾಡಬೇಕಿತ್ತು. ಮಿಥುನ್ ಅಂದರು " ಸಾಮಾನ್ಯ ಲೌಕಿಕ ಮನುಷ್ಯರಾದ ನಾವು ದೇವರ ಬಗ್ಗೆ ಏನನ್ನು ಮಾತನಾಡಲು ಸಾಧ್ಯ? ಹೌದು ಸಚಿನ್ ಕ್ರಿಕೆಟ್ ನ ದೇವರು ಚಾಪ್ಲಿನ್ ವಿಷಯದಲ್ಲೂ ಹಾಗೆಯೇ: ಅವನ ಅಪ್ರತಿಮ ಕಲಾನೈಪುಣ್ಯತೆಯನ್ನು ಮತ್ತಾರು ಮಾಡಲಾಗದು. ಎಲ್ಲ ವಯೋಮಾನ, ಹಿನ್ನೆಲೆ, ದೇಶ, ಸಂಸ್ಕೃತಿ,ಭಾಷೆ ಗಡಿಯನ್ನು ದಾಟಿ ಆಪ್ತ ಅದ್ಭುತವೆನಿಸುವ ಅವನ ವ್ಯಕ್ತಿತ್ವ  ಸಿನಿಮಾವನ್ನು ಕಂಡು " ಚಾಪ್ಲಿನ್ ಮುನುಷ್ಯನಲ್ಲ ದೇವರು" ಎಂದು ತುಂಬಾ ಜನ ಹೇಳಿದ್ದಾರೆ. ಇನ್ನೂ ೩೦ರ ಹರೆಯ ತುಂಬಿಲ್ಲದಿರುವಾಗಲೇ ಫ್ರೆಂಚ್ ಲೇಖಕ ಎಲಿಫಾವ್ರ‍್ ಆತನನ್ನು ಷೇಕ್ಸ್ ಪಿಯರಿಗೆ ಹೋಲಿಸಿದ. ಸುಬ್ಬಣ್ಣ- ಅಕ್ಷರ ತಮ್ಮ ಪುಸ್ತಕದಲ್ಲಿ "ದೂರ ಚಿತ್ರ ಸಮೀಪ ಚಿತ್ರಗಳು" ವಿನಲ್ಲಿ ಕ್ರೋಢಿಕರಿಸಿ ಹೇಳಿರುವಂತೆ " ಇಡೀ ಪ್ರಪಂಚದ ಈ ತನಕದ ಇತಿಹಾಸದಲ್ಲಿ (ಅಂಥ) ಭಾರಿ ಜನಪ್ರಿಯತೆ ಪಡೆದ ಕಲಾವಿದರು ಇಬ್ಬರೇ, ಒಬ್ಬ ಷೇಕ್ಸ್ ಪಿಯರ‍್ ಮತ್ತೊಬ್ಬ ಚಾರ್ಲಿ ಚಾಪ್ಲಿನ್"

    ಚಾರ್ಲಿ ಚಾಪ್ಲಿನ್ ೧೯೧೪ ರಿಂದ ತೊಡಗಿ ೧೯೪೭ರವೆರೆಗಿನ  33 ವರ್ಷಗಳ ಅವಧಿಯಲ್ಲಿ  76 ಚಲನಚಿತ್ರಗಳನ್ನು ಚಿತ್ರಿಸಿದ. ಪ್ರತಿಯೊಂದೂ ಕೂಡಾ ವಸ್ತು ವೈವಿಧ್ಯವನ್ನು ಹೊಂದಿದ್ದವು. ಆದರೆ ಅವೆಲ್ಲದರ ಹಿನ್ನೆಲೆ ಮನುಷ್ಯನ ಬದುಕೇ ಆಗಿತ್ತು. ಒಂದು ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಆಧುನಿಕ ಜಗತ್ತು ತನ್ನ ಸಂಕೋಲೆಗಳನ್ನು ಬಿಗಿಯುತ್ತಾ ಹೇಗೆ ತೊಡಕಾಗಿದೆ ಎಂಬುದನ್ನು ಚಾರ್ಲಿ ಚಾಪ್ಲಿನ್ ದಾಖಲಿಸುತ್ತಾನೆ.

    ಚಾಪ್ಲಿನ್ ಸಿನಿಮಾ ಮಾಡಲು ತೊಡಗಿದಾಗ,  ಆಗಷ್ಟೇ ಆ ಮಾಧ್ಯಮ ರೂಪಗೊಳ್ಳುತ್ತಾ ಇತ್ತು. ಗ್ರಿಫಿತ್ ಫ್ಲಾಹರ್ಜಿ, ಜಿಗಾ ವೆರ‍್ಟೋವ, ಐಸೆನ್ ಸ್ಟೈನ್ ರಂಥಹ ನಿರ್ದೇಶಕರಿದ್ದರೂ, ಚಲನಚಿತ್ರದ ಇತಿಹಾಸದಲ್ಲಿ ಬಹುಗಣ್ಯ ಚಿತ್ರಗಳನ್ನು ನಂತರದ ದಿನಗಳಲ್ಲಿ ಇವರು ತಯಾರಿಸಿದರು. ಬಹು ವಿಶಾಲ ಜನಸಮುದಾಯವನ್ನು ತಲುಪಿದವನು ಚಾಪ್ಲಿನ್ ನೇ ಮತ್ತು ಮುಂದೆಯೂ ಇವನು ಎಲ್ಲರನ್ನು ಹಿಡಿದಿಡಬಲ್ಲ ಎಂಬ ಆಶಾಕಿರಣವನ್ನು ಎಲ್ಲಾ ವೀಕ್ಷಕರಲ್ಲಿಯೂ, ವಿದ್ವಾಂಸರಲ್ಲಿಯೂ ಹುಟ್ಟಿಸಿದ್ದ ಆದ್ದರಿಂದಲೇ ಎಲಿ ಫ್ರಾವ್ ಹೇಳಿದ್ದು  “ So far one man, and only one, has shown that he entirely understands the new art of the cinema. only one man has shown that he knows how to use this art as if it were a keyboard where all the elements of sense and feeling that determine the attitude and form of things merge and convey in one cineographic expression the complex revelation of  their  inner life and quality”  ಈ ಮಾತುಗಳಂತೆ ಹೇಳುವುದಾದರೆ, ಚಾಪ್ಲಿನ್ ಚಿತ್ರ ಮಾಧ್ಯಮದ ಎಲ್ಲವನ್ನು ಅರಿತುಕೊಂಡಿದ್ದ. ಬದುಕಿನ ಆದ ಅನುಭವ ಪಡೆದು ಕೆಳವರ್ಗದ ಬದುಕನ್ನು ತೀಕ್ಷವಾಗಿ ಅಭ್ಯಾಸ ಮಾಡಿದ್ದರಿಂದ ತಾನು ಹೇಳಬೇಕಾದುದದ್ನ್ನು ಸರಿಯಾಗಿ ಎಲ್ಲರಿಗೂ ಅರ್ಥವಾಗುವಂತೆ ಹೇಳಲು ಅವನಿಗೆ ಸಾಧ್ಯವಿತ್ತು. ಗೋಳಿನ ಕಥೆಯಂತೆ ಹೇಳಿದರೆ ಆಧುನಿಕ ಕಾಲದಲ್ಲಿ ಯಾರೂ ತಾಳ್ಮೆಯಿಂದ ಕೇಳಲಾರರೇನೋ ಎಂದು ಆತನಿಗನಿಸಿರಬೇಕು! ತಮಾಷೆಯನ್ನು ತನ್ನ ಅಭಿವ್ಯಕ್ತಿಯಾಗಿಸಲು ತನ್ನನ್ನೇ ಮೂದಲಿಸಿಕೊಳ್ಳುವ ಟ್ರಾಮ್ಪ್ ಪಾತ್ರ ಸೃಷ್ಟಿಸಿದ. ದೊಗಳೆ ಪ್ಯಾಂಟು, ಅಸ್ತವ್ಯಸ್ತ ವಸ್ತ್ರ, ವಿಚಿತ್ರ ನಡಿಗೆ,ಬೂಟು, ಕೋಲು, ಸಿನಿಮಾದ ಕಥಾನಾಯಕನಿಗೆ ಹೊಸದೇ ಇಮೇಜ್ ಅನ್ನು ಚಾರ್ಲಿ ಸೃಷ್ಟಿಸಿದ ಆದರೆ ಅವನ ಪ್ರಕಾರ “Making fun is serious business”.

ಆ ಕಾಲದಲ್ಲಿ ಚಿತ್ರಗಳು ಮಾತನಾಡುತ್ತಿರಲಿಲ್ಲ ಚಾಪ್ಲಿನ್ ಗೆ ಅದರ ಆಗತ್ಯತೆಯೇ ಸೃಷ್ಟಿಯಾಗಲಿಲ್ಲ “ The master of this new art never speaks, never writes, never explains” ಚಾಪ್ಲಿನ್ ಮಾತನಾಡಲಿಲ್ಲ ಮಾತ್ರವಲ್ಲ ಏನನ್ನು ತೆರೆಯ ಮೇಲೆ ಬರೆದು ತೋರಿಸಿಲಿಲ್ಲ, ವಿವರಿಸಲು ಇಲ್ಲ. ಆದರೆ, ಆತನ ಮನಸ್ಸಿನಲ್ಲಿ ಏನು ಹೇಳುಬೇಕೆಂದಿದ್ದನೋ ಅದು ಎಲ್ಲರಿಗೂ ಅರ್ಥವಾಯಿತು. ಪೀಟರ‍್ ಎಫ್ ಪುಕ್ಕರ‍್ ನ ಮಾತಿನಂತೆ “ The important thing in communication is to hear which isn’t being said” .

    ಮಾತಿಲ್ಲದ ಚಿತ್ರಗಳಿಗೆ ಚಾಪ್ಲಿನ್ ಬಹುವಾಗಿ ಒಗ್ಗಿಕೊಂಡ 1927ರ ಹೊತ್ತಿಗೆ ಸಿನಿಮಾಗೆ ಮಾತು ಬಂತು. ಚಾಪ್ಲಿನ್ ಆಧುನಿಕತೆ ಹಾಗೂ ಅದರ ತ್ವರಿತ ಯಾಂತ್ರಿಕೃತ ಸಂಸ್ಕೃತಿಯ ಬಗ್ಗೆ ಅನುಮಾನದಿಂದಲೇ ನೋಡುತ್ತಿದ್ದ ಅವನು ಮಾತಿಗೆ ಒಗ್ಗಿಸಿಕೊಳ್ಳಲು ಸ್ಪಲ್ಪ ಹಿಂಜರಿದ. ಚಾಪ್ಲಿನ್ ನಷ್ಟೇ ಅಲ್ಲದೆ ಬಹಳಷ್ಟು ಸಿನಿಮಾ ಮಂದಿ ಅದರತ್ತ ಆತಂಕದಿಂದಲೇ ನೋಡಿದರು ನಟರಿಗೂ ಸ್ಪಲ್ಪ ಉಸಿರುಗಟ್ಟಿದ ಅನುಭವವಾಯಿತು. ಆದುದರಿಂದ 1936 ರಲ್ಲಿ ಆತನ ಮಹಾನ್ ಚಿತ್ರಗಳಲ್ಲಿ ಒಂದಾದ  ಮಾಡರ್ನ ಟೈಮ್ಸ್ ನಲ್ಲಿ ಟೈಟಲ್ ಕಾರ್ಡ್ ಹಾಗೂ ಹಿನ್ನೆಲೆ ಸಂಗೀತವನ್ನಷ್ಟೇ ಬಳಸಿಕೊಂಡ.

    ಮಾಡರ್ನ್‌ಟೈಮ್ಸ್ ನ ತಲೆಬರಹ
“ Modern Times” A story of industry , of individual enterprise humanity crusading in the pursuit of happiness” ಬದುಕನ್ನು ಉತ್ತಮಪಡಿಸಿಕೊಂಡು ಸಂತೋಷವಾಗಿಸಲು ಮನುಷ್ಯ ನಿರಂತರವಾಗಿ ಪ್ರಯತ್ನಿಸುವುದು ಆಧುನಿಕ ಕಾಲದ ಒಂದು ಮುಖ್ಯ ಲಕ್ಷಣ. ಬದುಕು ಹಿಂದೆಂದೂ ಇಷ್ಟೊಂದು ಸಂಕೀರ್ಣವಾಗಿರಲಿಲ್ಲ, ಬದುಕುವ ಕ್ರಿಯೆಯೂ ಈಗ ಉದ್ದೇಶಪೂರ್ವಕ ಲೆಕ್ಕಾಚಾರವಾಗಿಯೇ ನಡಿಯಬೇಕು. ಇಲ್ಲಿಂದ ತೊಡಗಿ ಕಾಲ ಸಂದಂತೆ ಬದುಕನ್ನು ಇನ್ನೂ ಜಟಿಲವಾಗುತ್ತಲೇ ಹೋಗುತ್ತದೆ. ಇದು ಆ ಜಟಿಲತೆಯ ಮುನ್ನುಡಿಯಷ್ಟೇ ಎನ್ನುವಂತಿದೆ “ Modern Times” .

    ಸಿನಿಮಾ ಆರಂಭದಲ್ಲಿ ಗಡಿಯಾರವೊಂದು ಕಾಣಿಸುತ್ತದೆ. ವೇಗವಾಗಿ ಚಲಿಸುವ ಮುಳ್ಳು ಆಧುನಿಕ ಕಾಲದ ಆತುರವನ್ನು ಪ್ರತಿನಿಧಿಸುವಂತಿದೆ. ಇದೇ ಗಡಿಯಾರವನ್ನೇ ನಾಲ್ಕು ವಿಭಾಗವಾಗಿ ವಿಂಗಡಿಸಿ “ Modern Timesನಲ್ಲಿ plot construct   ಮಾಡಲಾಗಿದೆ ಎಂದೆನಿಸುತ್ತದೆ. ಯಾಕೆಂದರೆ ಇಡೀ ಸಿನಿಮಾ Tramp ಒಬ್ಬನ ಜೀವನದ ನಾಲ್ಕು ಭಾಗಗಳ ಬಗ್ಗೆ ಹೇಳುತ್ತದೆ. ಕಾರ್ಖಾನೆ, ಜೈಲು, ಮಾಲ್ ನಂತಹ ದೊಡ್ಡ ಮಳಿಗೆ ಹೋಟೇಲ್ಲು ಈ ನಾಲ್ಕು ಕಡೆಯಲ್ಲಿ ಆತ ತನ್ನ ಬದುಕನ್ನು ಕಳೆಯಲು ತೊಡುಗುವ ಭಾಗಗಳ ಒಳಸುಳಿಯನ್ನು ಚಿತ್ರ ಒಟ್ಟಾರೆಯಾಗಿ ಬಿಡಿಸಿಡುತ್ತದೆ.

ಮೈಕ್ ಲೆಫೆವ್ರ ಹೇಳುತ್ತಾನೆ.“… I don’t (even need the alarm clock to get up in the morning… It’s a pseudo-death, more of less(your) whole system is paralyzed…” ಲೆಫೆವ್ರ‍್ಗೆ ಆಧುನಿಕ ಕಾಲದ ಬಗ್ಗೆ ಅಸಹನೆ ಇದೆ. ಇಲ್ಲಿ ಯಾವುದೊ ಸಹಜವಾಗಿ ನಡೆಯುವುದಿಲ್ಲ. ಬೆಳಿಗ್ಗೆ ಏಳುವುದೂ ಕೂಡಾ ಆಲರಾಂನ ಒತ್ತಾಯ ಪೂರ್ವಕ ಶಬ್ಧ, ಮನಸ್ಸಿನೊಳಗಿನ ಬೇಸರದ ಮೂಲಕವೇ, ಆಮೇಲಿನದ್ದೆಲ್ಲಾ ಬೇಗ ಬೇಗ ಮುನ್ನಡೆಯಬೇಕೆಂಬ ದುಗುಡ ಅವನ ಮಾತಿನಂತಯೇ “ Modern Times”ನ ಆರಂಭ ದೃಶ್ಯದಲ್ಲಿಯೇ ಕುರಿಗಳ ಮಂದೆ ಗುರಿಯಿಲ್ಲದೆ ನುಗ್ಗುವುದನ್ನು ತೋರಿಸುತ್ತಾ ಆ ಚಿತ್ರ Fade out ಆಗುವುದಕ್ಕೆ ಮುನ್ನವೇ ವೇಗವಾಗಿ ಜನರು ನೂಕು-ನುಗ್ಗಲಲ್ಲಿ ಬರುವುದನ್ನು ಚಾರ್ಲಿ ತೋರಿಸುತ್ತಾನೆ. ಜನರು ಅವಸರವಾಗಿ ಓಡುತ್ತಾರೆ. ಅವರಷ್ಟೇ ಅವಸರದ ಕಾರುಗಲು ಅವರಿಗೆ ಸ್ಪಂದಿಸದೆ ನಡುವೆಯೇ ನುಗ್ಗಿ ಓಡುತ್ತವೆ. ಮನುಷ್ಯನಾಗಲೀ ಮನುಷ್ಯ ನಿರ್ಮಿತ ಯಂತ್ರವಾಗಲೀ ಎಲ್ಲವೂ ಬಂದಿಯೇ ಎಂಬುದನ್ನು ಸಂಕೇತಿಸುತ್ತಾ ಹಿನ್ನೆಲೆಯಲ್ಲಿ ದೊಡ್ಡ ನಳಿಕೆಯಲ್ಲಿ ಹೊಗೆಸೂಸುತ್ತಿರುತ್ತದೆ ಕಾರ್ಖಾನೆ.

    ಆ ನೂಕುನುಗ್ಗಲನ್ನು ದಾಟಿಕೊಂಡು ಒಳನುಗ್ಗಿದರೆ ದೈತ್ಯಯಂತ್ರಗಳು ನಮಗೆ ಕಾಣುತ್ತದೆ. ಆದರೆ, ಅಲ್ಲಿ ಯಾವ ಆತುರವೂ ಇಲ್ಲ. ಮನುಷ್ಯನು ಓಡಾಡುವ ಸ್ಧಳಗಳಿಗಿಂತಲೂ ಈ ಯಂತ್ರ ಇರುವ ಸ್ಧಳ ಹೆಚ್ಚು ಪ್ರಶಸ್ತವಾಗಿದೆ. Of course “ only perfect building must be the factory, because that is built to house machines, not men” ಒಟ್ಟೋ ಸೈಲೆನಸ್ ನ ಈ ಲಕ್ಷ್ಯ ಸರಿಯಾಗಿಯೇ ಇದೆ. ಆಧುನಿಕತೆ ಮನುಷ್ಯರನ್ನು ಶೋಷಿಸುತ್ತದಯೇ ಹೊರತು ಯಂತ್ರಗಳನ್ನಲ್ಲ. ಹಾಗಾಗಿ ಇಲ್ಲಿ ಯಂತ್ರಗಳನ್ನುಳಿಸಲು ಸೂಕ್ತವಾದ ವಾತಾವರಣವಿರುತ್ತದೆ.

    ಕಂಪನಿಯ ಮಾಲೀಕನನ್ನು ನೋಡುತ್ತೇವೆ. ಆತ Electro Steel corporation ಅಧ್ಯಕ್ಷ ಪಧಬಂಧ ಆಟವಾಡಿ ಬೇಸರವಾದಾಗ ಪತ್ರಿಕೆಯಲ್ಲಿ ಕಾಮಿಕ್ಸ್ ಗಳನ್ನು ಓದುತ್ತಾನೆ. ಅಷ್ಟಕ್ಕೇ ಮಾತ್ರೆ ತೆಗೆದುಕೊಳ್ಳಬೇಕು. ಆತ ಕಾರ್ಖಾನೆಯ ಮಾಲೀಕರಾದರೂ ಯಾರೊಟ್ಟಿಗೂ ನೇರ ಸಂಪರ್ಕ ಹೊಂದುವುದಿಲ್ಲ. ಇಡೀ ಕಾರ್ಖಾನೆಯನ್ನು ನಿಯಂತ್ರಿಸಲು ಟೆಲಿವಿಷನ್ ಮಾದರಿಯ ದೊಡ್ಡ ಪರದೆಯನ್ನಿಟ್ಟುಕೊಂಡಿದ್ದಾನೆ. ಅದರ ಮೂಲಕವೇ ಕಾರ್ಖಾನೆಯನ್ನು ಗ್ರಹಿಸುತ್ತಾನೆ. ಸೂಚನೆಯನ್ನು ಕೊಡುತ್ತಾನೆ. ಆತನ ಸೂಚನೆ ಪ್ರಕಾರ ಕಾರ್ಖಾನೆಯ ಐದನೇ ವಿಭಾಗದಲ್ಲಿ ಕೆಲಸ ನಡೆಯುವಿಕೆ ಜಾಸ್ತಿ ಮಾಡಲಾಗುತ್ತದೆ.

    ವಿಭಾಗ ಐದರಲ್ಲಿ ಮಾಡರ್ನ ಟೈಮ್ಸ್ ನ ಕಥಾನಾಯಕ ನಮಗೆ ಕಾಣಸಿಗುತ್ತಾನೆ. ಆತ ಯಾರೂ ಆಗಿರಬಹುದು ಅವನ ಹೆಸರು, ವಿವರ ಯಾವುದು ಅನಿವಾರ್ಯವಲ್ಲ ಡಬ್ಲ್ಯು.ಹೆಚ್.ಆಡನ್ ನ ‘Unknown citizen’ನಂತೆ ಅವನು ತಿರುಗಣೆ ಬೀಗಿ ಮಾಡುವ ಕೆಲಸ ಮಾಡುತ್ತಲೇ ಇರುತ್ತಾನೆ. ಸ್ಪಲ್ಪ ವಿಶ್ರಾಂತಿ ಸಿಕ್ಕರೂ ಅವನು ಅಪ್ರಜ್ಞಾಪೂರ್ವಕವಾಗಿ ತಿರುಗಣೆ ಬೀಗಿ ಮಾಡುವಂತೆಯೇ ವರ್ತಿಸುತ್ತಾನೆ. ಅವನು ಪ್ರಜ್ಞೆಗೆ ಮರಳಿ, ಆ ಜಂಜಾಟವನ್ನು ಮೆರೆಯಲು ಬಾತ್ ರೂಮಿನಲ್ಲಿ ಸಿಗರೇಟು ಹೊತ್ತಿಸಿದ ತಕ್ಷಣವೇ ಅಲ್ಲಿನ ಪರದೆಯಲ್ಲಿ ಮೂಡುವ ಅಧ್ಯಕ್ಷನು ಆತನನ್ನು ಕೆಲಸಕ್ಕೆ ಹಿಂತಿರುಗಿ ಹೋಗಲು ಸೂಚಿಸುತ್ತಾನೆ. ಮರುಮಾತಿಲ್ಲದೆ ಕೆಲಸ ಮುಂದುವರೆಸುತ್ತಾನೆ.

    ಕಾರ್ಖಾನೆಯಲ್ಲಿನ ನೌಕರರಿಂದ ಹೆಚ್ಚು ಕೆಲಸ ಮಾಡಿಸಿ ಲಾಭ ಪಡೆಯಲು ಅವರ ಸಮಯವನ್ನು ಸಂಪೂರ್ಣವಾಗಿ ಹೇಗೆ ಬಳಸಿಕೊಳ್ಳಬಹುದೆಂದು ಬಂಡವಾಳಶಾಹಿಗಳು ನಿರಂತರ ಚಿಂತನೆ ಮಾಡುತ್ತಲೇ ಇರುತ್ತಾರೆ. ಇಲ್ಲಿನ ಕಾರ್ಖಾನೆಗೆ ಹೊಸದೊಂದು ಯಂತ್ರ ಪರಿಚಯಿಸುತ್ತಾರೆ, ಅದು Bellows Feeding Machine. ನೌಕರರು ಕೆಲಸ ಮಾಡುತ್ತಲೇ ಇದ್ದರೆ ಆ ಯಂತ್ರ ಅವರಿಗೆ ಊಟ ಮಾಡಿಸುತ್ತದೆ. ಆಧುನಿಕ ಯಂತ್ರಮಾನವಗಳಿಂದ ಮಾಡಿಸುವ ಕಾರ್ಯವನ್ನು ಆಧುನಿಕತೆಯ ಪರಮೇಚ್ಛ ಸ್ಧಿತಿಯು ಕಲ್ಪನೆಯನ್ನು ಚಾಪ್ಲಿನ್ ಕನಸಿದ್ದು ಇಲ್ಲಿ ಗೊತ್ತಾಗುತ್ತದೆ.  ಆ Feeding Machine ನ ಮತ್ತೊಂದು ವ್ಯಂಗ್ಯವೆಂದರೆ, ಇನ್ನೊಂದು ಯಂತ್ರವಾದ ರೆಕಾರ್ಡರ‍್ ಮೂಲಕ ಅದು ತನ್ನ ಜಾಹಿರಾತನ್ನು ಪಡೆದುಕೊಳ್ಳುತ್ತದೆ. "Actions speaks louder than word” ಎನ್ನುವ ಆ ಯಂತ್ರ ಆರಂಭದಲ್ಲಿ ತನ್ನ ಕಾರ್ಯವನ್ನು ಮಾಡಲು ತೊಡಗುತ್ತಾದರೂ ಬಳಿಕ ದೊಡ್ಡ ಮಟ್ಟದಲ್ಲಿ ವಿಫಲವಾಗುತ್ತದೆ.

    ಪುನ: ಕಾರ್ಯಮಾಡುವ ಆತ ತಿರುಗಣೆ ಬೀಗಿ ಮಾಡಿ ಮಾಡಿ, ತನ್ನ ಶಕ್ತಿ ಮೀರಿ ಒತ್ತಡ ಅನುಭವಿಸಿ ಹುಚ್ಚನಾಗಿಬಿಡುತ್ತಾನೆ. ಅಲ್ಲಿಂದಾಚೆ ಆತ ಕಂಡಿದ್ದೆಲ್ಲಾ ತಿರುಗಣೆಗಳೆ (Nut) ಬೀಗಿಗೊಳಿಸುವುದು ಮಾತ್ರ ವಿಫಲವಾಗುತ್ತದೆ. ಹುಚ್ಚಾಸ್ಪತ್ರೆ ಸೇರುವುದು ಅನಿವಾರ್ಯವಾಗುತ್ತದೆ. ಬಿಡುಗಡೆಯ ಬಳಿಕ ಏನು ಮಾಡುವುದೆಂದು ತೋಚದೆ ದಾರಿಯಲ್ಲಿ ಸಾಗುವಾಗ ವಾಹನವೊಂದರ ಹಿಂಬದಿಯಿಂದ ಕೆಳಗೆ ಬೀಳುವ ಬಾವುಟವೊಂದನ್ನು ಎತ್ತಿಕೊಂಡು ತನಗೆ ಗೊತ್ತಿಲ್ಲದಯೇ ಹಿಂದೆ ಬರುತ್ತಿರುವ ಗುಂಪಿನೊಡನೆ ಒಂದಾಗುತ್ತಾನೆ. ಕನ್ನಡ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಒಂದೆಡೆ ಹೇಳಿದ್ದರು " ಜನ ಅನ್ಯಾಯವಾಗಿ ನನ್ನನ್ನು ಕವಿ ಮಾಡಿಬಿಟ್ಟರು" ಇಲ್ಲಿ ಅನ್ಯಾಯವಾಗಿ ಕಥಾನಾಯಕ ಗುಂಪಿನ ನಾಯಕನೆಂದು ಗುರುತಿಸಲ್ಪಟ್ಟು ಜೈಲು ಸೇರುತ್ತಾನೆ.

    ಇಲ್ಲಿಂದ, ಚಿತ್ರದ ಎರಡನೇ ಘಟ್ಟ ಶುರುವಾಗುತ್ತದೆ. ಜೈಲಿಗೆ ಹೋದವನು ಅರಿವಿಲ್ಲದೆ ಯಾರೋ ಬೆರೆಸಿದ ಮತ್ತು ಬರುವ ವಸ್ತು ಸೇವಿಸಿ ಗುಂಗಿಗೊಳಗಾಗುತ್ತಾನೆ. ತಲೆಸುತ್ತುವಿಕೆ ಉಂಟಾಗುತ್ತದೆ. ತಲೆ ಸುತ್ತುವುದು ಮನಸ್ಸಿಗೆ ಸಂಬಂಧಪಟ್ಟ ಕ್ರಿಯೆಯಾದುದರಿಂದ ಅದನ್ನು ನಟಿಸುವುದು ತುಂಬಾ ಕಷ್ಟವಾಗುತ್ತದೆ. ಸ್ಟಾನಿಸ್ಲಾವ್ ಸ್ಕಿ, ಪ್ರಸನ್ನ, ಬ್ರೆಕ್ಟ್ ಮುಂತಾದ ಬರಹಗಾರರೆಲ್ಲರೂ ಈ ಸವಾಲಿನ ಬಗ್ಗೆ ಬರೆದಿದ್ದಾರೆ. ಆದರೆ ಚಾರ್ಲ್ಸ್ ಅವೆಲ್ಲವನ್ನು ಮೀರಿ ನಿಲ್ಲುತ್ತಾನೆ. ಆಥ ತಿರುಗುತ್ತಾ ನಟಿಸುವ ನಟನೆಯನ್ನು ಇಡೀ ಬದುಕಿನಲ್ಲಿ ಮರೆಯಲು ಸಾಧ್ಯವೇ ಇಲ್ಲವೆನೋ ಎನಿಸುತ್ತದೆ.

    ಅಮಲಿನಲ್ಲಿ ಅಪ್ರಜ್ಞಾಪೂರ್ವಕವಾಗಿಯೇ, ಜೈಲಿನಿಂದ ಪರಾರಿಯಾಗಲೆತ್ನಿಸುವ ಖೈದಿಗಳನ್ನು ಹಿಡಿಯಲು ಸಹಾಯಿಸುವ ಚಾರ್ಲಿ ಪ್ರಶಂಸೆಯ ಪತ್ರದೊಡನೆ ಬಿಡುಗಡೆಯಾಗುತ್ತಾನೆ. ತನ್ನ ಬಿಡುಗಡೆಯ ಬಗ್ಗೆ ಚಕಿತಗೊಳ್ಳುವ ಚಾರ್ಲಿ ತಾನು ಜೈಲಿನಲ್ಲಿ ಸುಖವಾಗಿದ್ದೇನೆಂದೂ ಇನ್ನು ಸ್ಪಲ್ಪ ಕಾಲ ಇಲ್ಲೇ ಇರಲು ಸಾಧ್ಯವೇ? ಎಂದು ಕೇಳುತ್ತಾನೆ. ಆದರೆ, ಅನಿವಾರ್ಯವಾಗಿ ಹೊರಬರಬೇಕಾಗುತ್ತದೆ. ಬಂದ ಮೇಲೆ ಪುಟ್ಟ ಕೆಲಸವೊಂದನ್ನು ಗಿಟ್ಟಿಸುತ್ತಾನೆ. ವ್ಯರ್ಥವಾಗಿ ಬಿದ್ದಿರುವ ಮರದ ಚೂರನ್ನು ಆಯುವ  ಬದಲು ಹಡಗು ಕಟ್ಟುವ ಕೆಲಸದಲ್ಲಿ, ಹಡಗನ್ನು ಸ್ಧಿರವಾಗಿಸಲು ಉಪಯೋಗಿಸಿದ್ದ ತುಂಡನ್ನು ತೆಗೆದು ಇಡೀ ಹಡಗನ್ನೇ ಮುಳಗಿಸಿಬಿಡುತ್ತಾನೆ! ಮತ್ತೆ ಪೋಲೀಸರ ಅತಿಥಿಯಾಗುವ ಅವಕಾಶದಿಂದ ತಪ್ಪಿಸಿಕೊಳ್ಳುತ್ತಾನೆ ಆತ.

    ಚಾರ್ಲಿ ಕಥೆಗೆ ಪೂರಕವಾಗಿ ಮತ್ತೊಬ್ಬ ಮುಖ್ಯ ಪಾತ್ರಧಾರಿ ಕಥೆ ಆದಾಗಲೇ ಶುರುವಾಗಿರುತ್ತದೆ. ಅದು ಪಾವಲೆಟ್ ಗೊಡ್ಡಾರ್ಡ್ ಎಂಬುವಳದು. ಆಕೆಯ ತಂದೆ ಒಬ್ಬ ನಿರುದ್ಯೋಗಿ, ಪುಟ್ಟ ತಮ್ಮ, ತಂಗಿ ಇರುತ್ತಾರೆ ಆಕೆಗೆ ಬದುಕಲು ಏನೂ ಇಲ್ಲ ಹಾಗಾಗಿ ಬಾಳೆಯ ಹಣ್ಣನ್ನು ಕದಿಯುತ್ತಿರುತ್ತಾಳೆ. ಬದುಕು ಮುಖ್ಯವಾದಾಗ ನೈತಿಕತೆಯ ಪ್ರಶ್ನೆಗಳು ಮುಖ್ಯ ಎನಿಸುವುದೇ ಇಲ್ಲ. ಅದರಲ್ಲಿಯೂ ನೈತಿಕತೆಯನ್ನು ಪಾವಲೆಟ್ ಮೆರೆಯುತ್ತಾಳೆ. ಆಕೆ ಬಾಳೆಹಣ್ಣನ್ನು ಕದಿಯುವ ದೃಶ್ಯದಲ್ಲಿ, ಇಡೀ ಗೊನೆಯನ್ನು ಕದ್ದೋಡುವ ಅವಕಾಶ ಇದ್ದರೂ, ಆ ಗೊನೆಯಿಂದ ಹಣ್ಣುಗಳನ್ನು ಕಿತ್ತು ತನ್ನಂತಹ ನಿರ್ಗತಿಕರಿಗೆ ತಿನ್ನಲು ಕೊಡುತ್ತಾಳೆ.  ತನಗೆ ಬೇಕಾದುದ್ದನ್ನಷ್ಟೇ ತನಗೆ ಒಯ್ಯುತ್ತಾಳೆ. ಪ್ರಭುತ್ವದ ಹಿಂಸೆಗೆ ಆಕೆಯ ತಂದೆ ಬಲಿಯಾಗುತ್ತಾನೆ. ಬಳಿಕ ಸರ್ಕಾರ ಅನಾಥರನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ಈ ಎರಡೂ ಅಂಶಗಳು ಪ್ರಭುತ್ವದ ಕ್ರೌರ್ಯ ಹಾಗೂ ಆ ಕ್ರೌರ್ಯದ ಮೂಲಕವೇ ತನ್ನ ಆಸ್ತಿತ್ವವನ್ನು ಕಾಪಾಡಿಕೊಂಡು ಶಾಂತಿಧೂತನಂತೆ ವರ್ತಿಸುವ ಸಾಮ್ರಾಜ್ಯಶಾಹಿಯ ಮೂಲ ಸಿದ್ಧಾಂತದ ಇಬ್ಬಗೆ ನೀತಿಯ, ಗೋಸುಂಬೆತನದ ಮುಖವಾಡದ ಬೆಳವಣಿಗೆಯನ್ನು ದಾಖಲಿಸುತ್ತದೆ. ಕೇವಲ ಅಮೇರಿಕಾ ದಂತಹ ರಾಷ್ಟ್ರಕ್ಕೆ ಸೀಮಿತವಾಗದೆ ಇಂದು ಎಲ್ಲಾ ರಾಷ್ಟ್ರಪ್ರಭುತ್ವಗಳು ಹೀಗೆಯೇ ಆಗಿರುವುದನ್ನು ಬಹುಹಿಂದೆಯೇ ಚಾಪ್ಲಿನ್ ಗುರುತಿಸಿದ್ದ ಎಂಬುದನ್ನು ಈ ಮೂಲಕ ಅರಿಯಬಹುದು. ಪಾವ್ ಲೆಟ್ ಆ ವ್ಯವಸ್ಧೆಗೆ ಬೆನ್ನು ಮಾಡಿ ಓಡಿಬರುತ್ತಾಳೆ. ಆದರೆ ಬದುಕುವ ಎಲ್ಲಾ ಮಾರ್ಗಗಳನ್ನು ಮುಚ್ಚಿಹಾಕಿರುವ ಪ್ರಭುತ್ವದಲ್ಲಿ ಪುಟ್ಟ ಕಳ್ಳತನವೇ ಆಕೆಗೆ ದಾರಿಯಾಗುತ್ತದೆ. ಬ್ರೆಡ್ ತುಂಡೊಂದನ್ನು ಕದಿಯುವಾಗ ಆಕೆ ಸಿಕ್ಕಿಬೀಳುತ್ತಾಳೆ. ಆಕೆಯ ಸ್ಧಿತಿಯನ್ನು ಕಂಡ ಚಾಪ್ಲಿನ್  ಕದುದ್ದು ತಾನೆಂದು ಒಪ್ಪಿಕೊಳ್ಳುತ್ತಾನೆ.   ಆಕೆಯೇ ಕದ್ದದ್ದೆಂದು ಪುನರತೀರ್ಮಾನವಾಗಿ ಆಕೆಯನ್ನು ಪೋಲೀಸರು ಹಿಡಿಯುತ್ತಾರೆ. ಇತ್ತ, ಹೋಗುವ ತವಕವಿರುವ ಚಾರ್ಲಿ ಹೋಟೇಲ್ಲುನಲ್ಲಿ ತಿಂದು, ಸಿಗರೇಟು ಕುಡಿದು ತಾನೇ ಪೋಲೀಸರಿಗೆ ಶರಣಾಗುತ್ತಾನೆ.

    ಚಾರ್ಲಿ-ಪಾವ್ಲೆಟ್  ಪೋಲೀಸ್ ವಾಹನದಲ್ಲಿ ಮರುಭೇಟಿಯಾಗುತ್ತಾರೆ. ಪೋಲೀಸ್ ವಾಹನ ಅಪಘಾತಕ್ಕೀಡಾಗುತ್ತದೆ. ಇಬ್ಬರೂ ತಪ್ಪಿಸಿಕೊಂಡು ಹೋಗುತ್ತಾರೆ. ಚಾರ್ಲಿ ಸಿನಿಮಾಗಳಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯಪಾತ್ರವಹಿಸುತ್ತದೆ. ಅವನ ಪಾತ್ರ ಅಮೇರಿಕಾದ ಮಹಿಳೆಯ ಆದರ್ಶಮಯ ನೆಲೆಗಟ್ಟಲ್ಲಿಲ್ಲದೆ ವಾಸ್ತವ ಪಾತ್ರವೇ ಆಗಿರುತ್ತದೆ. ಆತನ ಬಹುತೇಕ ಚಿತ್ರಗಳಲ್ಲಿ ಗಮನಿಸುವಂತೆ ಚಾರ್ಲಿ ಪ್ರೀತಿಸುತ್ತಾನೆ, ಪ್ರೀತಿಯ ಬದಲಾಗಿ ಅನುಕಂಪವನ್ನು ವಾಪಸ್ಸು ಪಡೆಯುತ್ತಾನೆ. ಇಲ್ಲೇನೂ ಹಾಗಾಗುವುದಿಲ್ಲ. ಚಾರ್ಲಿ-ಪಾವ್ಲೆಟ್ ಳ  ಗೆಳಯನಂತಿರುತ್ತಾನೆ. ಆದರೂ ಅವರಿಬ್ಬರ ಸಂಬಂಧವನ್ನು ವಿವರಿಸುವುದು ಒಂದು ತೊಡುಕು ಎಂಬುದು ನಿಜ.

    ಚಾರ್ಲಿ, ಪಾವ್ಲೆಟ್ ಳನ್ನು ಕೇಳುತ್ತಾನೆ, " ನೀನು ಎಲ್ಲಿ ವಾಸವಾಗಿದ್ದೀಯಾ?" " ಎಲ್ಲಾದರೂ ನಿರ್ದಿಷ್ಟವಾಗಿ  ಎಲ್ಲೂ ಇಲ್ಲ" ಈ ಸನ್ನಿವೇಶಕ್ಕೆ ಜಿ.ಎನ್.ಮೋಹನ್ ರವರ ಕವಿತೆ ನೆನಪಾಗುತ್ತದೆ.
    ಇಲ್ಲಿ ಈ ಕಡಲ ದಡದಲ್ಲಿ
         ನಾನು ನಿಂತಿದ್ದೇನೆ
        ನನ್ನ ಕೈಯಲ್ಲೊಂದು ಬೋಗುಣಿ
       ಅಲ್ಲಿ ಚಂದ್ರನ ಬೆಳಕಲ್ಲಿ ಅವಳು
      ಆಕೆಯ ಕೈಯಲ್ಲೂ
       ಒಂದು ಬೋಗುಣಿ
      ಇಬ್ಬರೂ ಭಿಕ್ಷುಕರು
     ಭಿಕ್ಷೆ ಕೇಳುತ್ತಿದ್ದೇವೆ ಪರಸ್ಪರ.

    ಹೀಗೆ ಚಾರ್ಲಿ ಹಾಗೂ ಪಾವ್ಲೆಟ್ ಇಬ್ಬರ ಸ್ಧಿತಿಯೂ ನಿರ್ಗತಿಕತನವೇ. ಮನೆಯೊಂದರ ಮುಂದೆ ಕೂತು ತಮಗೂ ಒಂದು ಮನೆಯಿದಿದ್ದರೆ ಎಂದು ಕನಸು ಕಾಣುತ್ತಾರೆ. ಅದು “Mission Impossible” ಎಂದು ಸೂಚಿಸಲು ಕನಸಿನಲ್ಲಿ ಚಾರ್ಲಿ ಎಡವುವ ದೃಶ್ಯ ಬಳಸಿಕೊಂಡಿದ್ದಾನೆ.

    ಹೇಗೂ ವಾಸ್ತವತೆಗೆ ಮರುಳುವ ಚಾರ್ಲಿ ದೊಡ್ಡಮಳಿಗೆಯೊಂದರಲ್ಲಿ ಅಚಾತುರ್ಯ ನಡೆದು ಅಲ್ಲಿನ ರಾತ್ರಿ ಪಾಳಿಯ ಕಾವಲುಗಾರ ಕಾಲು ಮುರಿದುಕೊಂಡಿರುವುದನ್ನು ಅರಿತು ತಾನು ಆ ಕೆಲಸ ಹಿಡಿಯುತ್ತಾನೆ. ಇಡೀ ರಾತ್ರಿಯನ್ನು ಖುಷಿಯಾಗಿ ತಮ್ಮದೇ ಲೋಕವೆಂಬಂತೆ ಚಾರ್ಲಿ-ಪಾವ್ಲೆಟ್ ಕಳೆಯುತ್ತಾರೆ. ಆ ಖುಷಿಯಲ್ಲಿ ಚಾರ್ಲಿ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಸ್ಕೇಟಿಂಗ್ ಆಡುವ ದೃಶ್ಯ ನನ್ನ ಪ್ರಕಾರ ಇಡೀ ಜಗತ್ತಿನ ಚಿತ್ರರಂಗದಲ್ಲಿ ಒಂದು ಮಹಾನ್ ಸಾಧನೆ. ಅಷ್ಟೊಂದು  ನೈಪುಣ್ಯತೆಯನ್ನು ಮಹಡಿಯ ತುದಿಯಲ್ಲಿ ಸ್ಕೇಟಿಂಗ್ ಆಡುತ್ತಾ ಚಾರ್ಲಿ ಪ್ರದರ್ಶಿಸುತ್ತಾನೆ. ಮಾಲ್ ನಲ್ಲಿ ರಾತ್ರಿ ದರೋಡೆ ನಡೆಯುತ್ತದೆ. ದರೋಡೆಕೋರರಲ್ಲಿದ್ದ ಬಿಗ್ ಬಿಲ್ ಎಂಬಾತ ಚಾರ್ಲಿಯನ್ನು ಗುರುತು ಹಿಡಿಯುತ್ತಾನೆ. ಅವನು ಚಾರ್ಲಿಯ ಜೊತೆ ಕೆಲಸ ಮಾಡುತ್ತಿದ್ದವನು. ಕಾರ್ಖಾನೆಗಳು ಮುಚ್ಚಿಹೋಗಿದ್ದರಿಂದ ಅಲ್ಲಿನ ಕಾರ್ಮಿಕರೆಲ್ಲರೂ ಬೀದಿಪಾಲಾಗಿ ಕಳ್ಳತನ ಮಾಡುವ ಮಟ್ಟಿಗೆ ಇಳಿದಿರುವುದು ವ್ಯವಸ್ಧೇಯ ಕ್ರೂರತನದ ಪರಮಾವಧಿ ಹಾಗೂ ಅಧಿಕಾರಶಾಹಿಯ ಅಮಲಿನ ಮೂರ್ತ ರೂಪ ಎಂಬುದನ್ನು ಆಚಾನಾಕ್ಕಾಗಿ ಪಾನಮತ್ತಾಗುವ ಚಾರ್ಲಿ ಪ್ರತಿನಿಧಿಸುತ್ತಾನೆ. ಆದರೆ ತನ್ನ ಕರ್ತವ್ಯಲೋಪಕ್ಕಾಗಿ ಸೆರೆಯಾಗುತ್ತಾನೆ.

    ಆತ ವಾಪಸ್ಸು ಬರುವುದನ್ನೇ ಕಾಯುತ್ತಲಿರುವ ಪಾವ್ಲೆಟ್ ತಾನು ಹುಡುಕಿರುವ ಹಳೆಯ ಮುರಕಲು ಮನೆಗೆ ಅವನನ್ನು ಕರೆದೊಯ್ಯುತ್ತಾಳೆ. ಅಲ್ಲಿನ ಅಸ್ತವ್ಯಸ್ತತೆಯ ನಡುವೆಯೂ ಸಂತೋಷವಾಗಿರುತ್ತಾನೆ. ಪೇಪರಿನಲ್ಲಿ ಸುದ್ಧಿ ತಿಳಿದದ್ದೇ ತಡ ಕಾರ್ಖಾನೆಯ ಕೆಲಸಕ್ಕಾಗಿ ಒಡಿದವನು ದಿನದ ಕೆಲಸ ಮುಗಿಯುವುದರೊಳಗೆ ಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಂಡನೆಂಬ ಅಪಾದನೆಯ ಮೇಲೆ ಬಂಧನಕ್ಕೊಳಗಾಗುತ್ತಾನೆ.

    ಚಾರ್ಲಿ ಬಂಧನವಾದ ತರುವಾಯ ಪಾವ್ಲೆಟ್ ಹೋಟೆಲ್ ಒಂದರಲ್ಲಿ ನೃತ್ಯಗಾರ್ತಿಯಾಗಿ ಕೆಲಸಕ್ಕೆ ಸೇರುತ್ತಾಳೆ. ಚಾರ್ಲಿಯ ಬಿಡುಗಡೆಯನ್ನೇ ಕಾಯುತ್ತಿದ್ದು ಅವನಿಗೂ ಅಲ್ಲಿಯೇ ಒಂದು ಕೆಲಸ ಕೊಡಿಸುವಲ್ಲಿ ಯಶಸ್ವಿಯಾಗುತ್ತಾಳೆ ಹೊಟ್ಟೆಪಾಡಿಗಾಗಿ ಯಾವುದೇ ಕೆಲಸ ಮಾಡಲು ತಯಾರಿರುವ ಅವನು ಮಾಣಿ (Waiter) ಆಗಿರಲು ಒಪ್ಪುತ್ತಾನೆ. ಆದರೆ, ಅಲ್ಲಿನ ಜನರ ಮೋಜಿಗೆ ತುತ್ತಾಗಿ  ಅವನ ಕಾರ್ಯ ವಿಫಲವಾಗುತ್ತದೆ. ಆದ್ದರಿಂದ ಹಾಡು ಹೇಳಲು ಒಪ್ಪಿಕೊಳ್ಳುತ್ತಾನೆ. ಬರದಿದ್ದ ಕಾರ್ಯವನ್ನು ಹೇಗೆ ಮಾಡಲು ಸಾಧ್ಯ? ಹಾಗಾಗಿ ತೊಂದರೆಗೆ ಒಳಗಾಗುತ್ತಾನೆ. ಪಾವ್ಲೆಟ್ ಅವನ ಷರ್ಟಗೆ ಸುತ್ತಿರುವ ಬಿಳಿವಸ್ತ್ರದ ಮೇಲೆ ಹಾಡು ಬರೆದು ಕೊಡುತ್ತಾಳೆ.

A pretty girl and a gay old man
Flirted on the fowl ward
He was a fall old thing
But his diamond ring.
 ಎಂದು ತೊಡುಗುವ ಹಾಡಿನ ಸಾಹಿತ್ಯ ಕಳೆದುಕೊಳ್ಳುವ ಚಾರ್ಲಿ, ಪಾವ್ಲೆಟ್ ಳ ಮಾತಿನಂತೆ ಹೇಗಾದರೂ ಮಾಡಿ ಸಂಭಾಳಿಸಿಬಿಡಬೇಕೆಂದು ಹಾಡತೊಡಗುತ್ತಾನೆ. ಆತ ಯಶಸ್ಸಿಯಾಗುವ ಹೊತ್ತಿಗೆ ಪ್ರಭುತ್ವದ ಅಧಿಕಾರಿಗಳು ಅವರನ್ನು ಹಿಂದಟ್ಟಿ ಬರುತ್ತಾರೆ. ಇಬ್ಬರೂ ತಪ್ಪಿಸಿಕೊಂಡು ಓಡುತ್ತಾರೆ.

    ಸೂರ್ಯೋದಯವಾಗುತ್ತದೆ, ಅವರಲ್ಲಿ ಬಟ್ಟೆಯ ಗಂಟೊಂದನ್ನು ಬಿಟ್ಟು ಮತ್ತೇನೂ ಇರುವುದಿಲ್ಲ. ಎಲ್ಲ ಪ್ರಯತ್ನಗಳಿಂದಲೂ ಬೇಸತ್ತ ಪಾವ್ಲೆಟ್ " ಇನ್ನೂ ಪ್ರಯತ್ನಸುವುದರಿಂದ ಏನು ಪ್ರಯೋಜನ?" ಎನ್ನುತ್ತಾಳೆ. " ಮಾತನ್ನು ವಾಪಸ್ಸು ತಗೋ, ಸಾಯುವ ನಿರ್ಧಾರವನ್ನೆಂದೂ ಮಾಡಬಾರದು ನಾವು ಜೊತೆಯಾಗಿ ಸಾಗೋಣ" ಎಂಬ ಆಶಾವಾದದ ಉತ್ತರ ನೀಡುತ್ತಾನೆ. ಚಾರ್ಲಿ -ಪಾವ್ಲೆಟ್ ಇಬ್ಬರು ಹೊಸದಾರಿಯಡೆಗೆ ಸಾಗುತ್ತಾರೆ. ಅಲ್ಲಿ ಯಾವುದೇ ಯಂತ್ರವಾಗಲೀ, ಆಧುನಿಕತೆಯ ಸಂಕೇತವಾಗಲೀ ಇಲ್ಲ. ಇರುವುದು ಬೆಟ್ಟ-ಗುಡ್ಡ ಅಲ್ಲಿಗೆ ಸಾಗಲು ದೊಡ್ಡದೊಂದು ದಾರಿ. ಅದು ಹೊಸದು ಆಗಬಹುದು.ವಿಶಾಲತೆಯ ಸಂಕೇತವೂ ಆಗಬಹುದು ಚೆಗುವೆರಾ ತನ್ನ ಮೋಟಾರ‍್ಸೈಕಲ್ ಡೈರೀಸ್ ಪುಸ್ತಕದಲ್ಲಿ ಹೇಳುವಂತೆ “I’ m living off civilization…. very near to the earth.”  ಅದು ಸಹಜ ಜೀವನದತ್ತ ಪ್ರಯಾಣ ಎನ್ನುಬಹುದು.

    ಹೀಗೆ 87 ನಿಮಿಷಗಳಲ್ಲಿ ನಮ್ಮ ಮನಸ್ಸಿನ ಅಂತರಾಳವನ್ನು ಸೆರೆಹಿಡಿಯುವ "ಮಾಡರ್ನ ಟೈಮ್ಸ್" ಯಾವಾಗಲೂ ‘ಮಾಡರ್ನ’ ಆಗಿಯೇ ಉಳಿಯುತ್ತದೆ. ನಾಲ್ಕು ನೂರು ವರ್ಷಗಳ ಹಿಂದೆ ಷೇಕ್ಸ್ ಪಿಯರ‍್ ಬರೆದ ನಾಟಕಗಳ ವಿಷಯಗಳನ್ನು ಇಂದು ಜೀವನದ ಗಹನ ಸತ್ಯಗಳೆಂದು ನಾವು ಓದುತ್ತಿರುವಂತೆಯೇ ಎಪ್ಪತೈದು ವರ್ಷಗಳ ಬಳಿಕವೂ, ಆಧುನಿಕ ಜಗತ್ತು ಹೆಚ್ಚು ಸಂಕೀರ್ಣವಾಗುತ್ತಲೂ ದಿವ್ಯ ಸತ್ಯವೆಂದು ಮಾಡರ್ನ ಟೈಮ್ಸ್ ಅನ್ನು ನೋಡುತ್ತಿದ್ದೇವೆ. ತಂತ್ರಜ್ಞಾನ ಮಾನವನಿಗೆ ನೆರವಾಗಬೇಕು ಎಂದು ಬಯಸಿದ್ದ ಚಾಪ್ಲಿನ್ ಯಾಂತ್ರಿಕತೆಯ ವಿರೋಧಿಯೇ ಹೊರತು ತಂತ್ರಜ್ಞಾನ ವಿರೋಧಿಯಲ್ಲ. ಚಾರ್ಲಿ ಚಾಪ್ಲಿನ್ ಪ್ರತಿಪಾದಿಸಿದ ಎಲ್ಲ ನಿಯಮಗಳೂ ಮಾನವರ ಅಭಿವೃಧ್ದಿಯನ್ನೂ, ಪ್ರಗತಿಪರತೆಯನ್ನು ಬೆಂಬಲಿಸುವಂತಹವು. ಹಾಗಾಗಿಯೇ ಆತ ಇನ್ನೂ ಬದುಕಿದ್ದಾನೆ. “ Everyman’s Language”  ಆಗಿದ್ದಾನೆ.



ಟಿಪ್ಪಣಿಗಳು:-
ಇಲ್ಲಿ "ದೇವರು" ಎಂದು ಬಳಸಿರುವುದು ಮೌಢ್ಯತೆಯೇ ಸಂಕೇತವಲ್ಲ ಬದಲಿಗೆ ಒಂದು " Superficial understanding of human being” ಅಷ್ಟೇ ಇದನ್ನು ಒಪ್ಪುವವರು ಒಪ್ಪಬಹುದು ಬೇಡವೆಂದರೆ ನಿರಾಕರಿಸಬಹುದು ಇಲ್ಲವೆ ಬಂದು ಪ್ರತಿಮೆಯಾಗಿ ಓದಿಕೊಳ್ಳಬಹುದು.
2. ‘The art of Charlie Chaplin’- By Elie Faure  ಈ ಪ್ರಬಂಧ 1922ರ ಬಳಿಕ ‘ The art of cineplastics’ ಎಂಬ ಪುಸ್ತಕದಲ್ಲಿ ಸಂಕಲಿತಗೊಂಡು ಪ್ರಕಟವಾಯಿತು. ಅಲ್ಲಿವೆರೆಗೂ ಫಾವ್ರ‍್ನ ಬಹುಬರಹಗಳು 1921-22ರ ಅವಧಿಯಲ್ಲಿ  ಫ್ರಿಮನ್ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದವು.
3. ’ಅನಾಥ’ ‘ ಅನಾಮಧೇಯ’  ಎಂದು ಅರ್ಥಮಾಡಿಕೊಳ್ಳುವುದು.








Friday, January 21, 2011

ಸ್ತ್ರೀ ಎಂದರೆ ಅಷ್ಟೇ ಸಾಕೆ?

ಆಕಾಶದ ನೀಲಿಯಲ್ಲಿ
ಚಂದ್ರತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೊಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೇ ಸಾಕೆ?

    ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪನವರ ಸ್ತ್ರೀ ಎಂಬ ಕವನದ ಸಾಲಿನಲ್ಲಿ ಸ್ತ್ರೀ ಎಂಬ ಬಗ್ಗೆ ಎಷ್ಟೊಂದು ಸೂಕ್ಷ್ಮ ಪದಗಳಲ್ಲಿ ಹೆಣ್ಣಿನ ಅಂತರಂಗದ ಸೂಕ್ಷ್ಮತೆಗಳನ್ನು ಹಾಗೂ ಅನುಭವಗಳನ್ನು ಹೇಳಿರುವುದು ನಿಜಕ್ಕೂ ಕುತೂಲಹಕಾರಿ.

    ಹೆಣ್ಣನ್ನು ಪ್ರಕೃತಿಗೆ ಹೋಲಿಸುತ್ತೇವೆ. ಹೆಣ್ಣು ತಾನು ಹುಟ್ಟುವ ಮನೆಯಿಂದ ಸೇರುವ ಮನೆಯ ತನಕ ಹಲವಾರು ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾಳೆ. ಅಕ್ಕ, ತಂಗಿ, ಹೆಂಡತಿ, ತಾಯಿ, ಹೀಗೆ ತನ್ನ ಪಾತ್ರಗಳನ್ನು ನಿರ್ವಹಿಸುತ್ತಿರುತ್ತಾಳೆ. ಇವು ಅವಳ ಅಂತರಂಗದ ವೈವಿಧ್ಯತೆಗಳನ್ನು ಅವಳ ಭಾವನೆಗಳನ್ನು ಒಂದೊಂದು ಹಂತದಲ್ಲೂ ವಿಶ್ಲೇಷಣೆಗೆಡೆ ಮಾಡಿಕೊಡುವ ಸುಮೂರ್ತ ಸಂದರ್ಭವಾಗಿರುತ್ತದೆ.

    ಭಾರತೀಯ ಧರ್ಮಗಳಲ್ಲಿ ಹೆಣ್ಣನ್ನು ಕ್ಷಮಯ ಧರಿತ್ರಿ ಎಂಬ ಸಾಲುಗಳಿಂದ ಭೂಮಿಗೆ ಹೋಲಿಸುತ್ತಾರೆ. ಅಂತಹ ಪ್ರೇಮ ಹಾಗೂ ವಾತ್ಸಲ್ಯದಿಂದ ಕೊಡಿದ ಹೆಣ್ಣು ನಾನಾ ಘಟ್ಟಗಳಲ್ಲಿ ಪ್ರತಿಯೊಬ್ಬರ ಜೀವನದಲ್ಲಿ ಯಶಸ್ಸು ಕಾಣಲು  ಒಂದು ಹೆಣ್ಣು ಹೇಗೆ ಸ್ಪೂರ್ತಿಯೋ ಹಾಗೆ ಪ್ರತಿಯೊಬ್ಬ ಯಶಸ್ಸಿ ಪರುಷನ ಹಿಂದೆ ಒಂದು ಹೆಣ್ಣು ಇರುತ್ತಾಳೆ.

     ಈ ಭೂಮಿಯಲ್ಲಿ  ಪ್ರತಿಯೊಂದು ವಸ್ತುವು ಹೇಗೆ ಒಂದನ್ನೊಂದು ಅವಲಂಬಿಸಿರುತ್ತದೋ ಹಾಗೆ ಹೆಣ್ಣನ್ನು ಒಂದು ಗಂಡು ಅವಲಂಬಿಸಿರುತ್ತಾನೆ. ನೆರಳಿಲ್ಲದೆ ಬೆಳಕಿಲ್ಲ, ಬೆಳಕಿದ್ದಲ್ಲಿ ನೆರಳು ಹಾಗೆ ಹೆಣ್ಣು ಇದ್ದಲ್ಲಿ ಆ ಮನೆ ನಂದಗೋಕುಲ ಈ ಹೆಣ್ಣಿನ ಬಗ್ಗೆ ಹಿಂದಿನಿಂದಲೂ ಕವಿಗಳು ಹಾಡಿ ಹೊಗಳಿರುತ್ತಾರೆ. ಈ ಬಗ್ಗೆ ಕೆ.ಎಸ್,ನರಸಿಂಹಸ್ವಾಮಿಯವರ ಒಂದು ಕವಿತೆ  ಸಾಲು ನೆನಪಾಗುತ್ತದೆ.
    ನಿನ್ನ ನಗೆ ಮಲ್ಲಿಗೆಯ ಪರಿಮಳದ ಪಾತ್ರೆಯಲಿ
    ಚೆಲ್ಲಿಸೂಸುವ ಅಮೃತ ನೀನೇನೆ!
         ನನ್ನ ಕನಸುಗಳೆಲ್ಲ ಕೈಗೊಳ್ಳುವ ಯಾತ್ರೆಯಲಿ
         ಸಿದ್ದಿಸುವ ಧನ್ಯತೆಯು ನೀನೆ.
    ಯಾವಾಗಲೂ ತಾಯಿ ಅಥವಾ ಹೆಣ್ಣು ಎಂಬ ಪದಕ್ಕೆ ವಿಶ್ಲೇಷಣೆ ಮಾಡುತ್ತಾ ಇರುವಂತೆ ಅವಳಲ್ಲಿರುವ ಸೂಕ್ಷ್ಮತೆಗಳನ್ನು ಪರಿಚಯಿಸುತ್ತಾ ಹೋಗುತ್ತದೆ. ಜೀವನದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಎಂತಹ ಸಂದರ್ಭಗಳು ಬಂದರೂ ಅಂತಹ ಸಂದರ್ಭಗಳಲ್ಲಿ ತನ್ನ ಅನುಭವವನ್ನು ಗ್ರಹಿಸಿ ಬೌದ್ದಿಕತೆಯಿಂದ ಆ ಸಮಸ್ಯೆಯನ್ನು ಸರಿಯಾಗಿ ನಿಭಾಯಿಸಲು ಸಮರ್ಥಳಾಗಿರುತ್ತಾಳೆ.

    ತಾಯಿಯೇ ಅತ್ಯಂತ ಶಕ್ತಿಶಾಲೆ ವ್ಯಕ್ತಿ ಎಂದು ಅಂಬೆಗಾಲಿಕ್ಕುವ ಮಗುವು ಯೋಚಿಸುವ ಹಾಗೆ ಜೀವನದಲ್ಲಿ ದೈವೀಕರಣವಾದ ಮನಸ್ಸನ್ನು ಈ ಜಗತ್ತಿನಲ್ಲಿ ಈ ತಾಯಿಗೆ ನೀಡಿದ್ದಾನೆ. ತಾಯಿ ತನ್ನ ಮಗುವಿನ ಬಗ್ಗೆ ಜಿ.ಎಸ್.ಎಸ್.ಕವನದಲ್ಲಿ ಈ ರೀತಿ ಹೇಳುತ್ತಾ ಹೋಗುತ್ತಾರೆ.
    ನನ್ನ ಗರ್ಭದಲ್ಲಿ ಮೂಡಿ ಬರುವಮೊದಲೆಲ್ಲಿ  ಮೊದಲೆಲ್ಲಿ ಇದ್ದೆ ಮಗುವೆ?
          ಯಾವ ರೂಪದಲ್ಲಿ, ಯಾವ ದೇಶದಲ್ಲಿ, ಯಾವ ಹೆಸರಿನಲ್ಲಿ?
          ಎಷ್ಟು ಜನರಲಿ, ಎಷ್ಟು ಯುಗಗಳಲಿ, ತಾರೆ ಗ್ರಹಗಳಲ್ಲಿ
         ಸುತ್ತಿ ಬಂದಯೇ: ಏನು ತಿಳಿಯದೊಲು ಬಂದೆ ನಟಿಸುತಿರುವೆ!

    ಈ ಕವನದ ಸಾಲುಗಳು ಚೆಲುವು ಒಲವು ಕವನ ಸಂಕಲನದಲ್ಲಿ ತಾಯಿ ತನ್ನ ಗರ್ಭದಲ್ಲಿ ಮೂಡಿ ಬರುವ ಮಗುವಿನ ಬಗ್ಗೆ ಅವಳ ಆಲೋಚನೆಗಳನ್ನು ಕವಿಯು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಈ ಕವನದ ಸಾಲುಗಳಲ್ಲಿ ತಾಯಿ ತನ್ನ ಮಗುವಿನ ಸಂಬಂಧದ ಪ್ರಖರತೆಯನ್ನು ತಿಳಿಸುತ್ತದೆ.
    ತಾಯಿಯ ಬಗ್ಗೆ ಸನಾತನ ಧರ್ಮದಿಂದಲೂ ಪೂಜ್ಯ ಭಾವನೆಗಳಿಂದ ಕಂಡುಕೊಂಡು ಬಂದಿದ್ದಾರೆ. ಶಂಕರಚಾರ್ಯರು ತಮ್ಮ ಮಾತೃ ಪಂಚಕಮ್ ನಲ್ಲಿ " ಓ ತಾಯಿ! ನನಗೆ ಜನ್ಮ ನೀಡುವ ಸಮಯದಲ್ಲಿ ನಿನಗುಂಟಾದ ನೋವಾಗಲಿ, ನನ್ನನ್ನು ಹೆತ್ತ ಮೇಲೆ ನಿನ್ನ ದೇಹವನ್ನು ಬಳಸಿಕೊಂಡಿದ್ದು ಒಂದು ವರ್ಷದವೆಗೂ ನನ್ನ ಮಲಮೂತ್ರಾದಿಗಳಿಂದ ಕೂಡಿದ ಹಾಸಿಗೆಯಲ್ಲಿ ನೀನು ಮಲಗಿದ್ದು, ಇದೆಲ್ಲ ಹಾಗಿರಲಿ ನನ್ನನ್ನು ಗರ್ಭದಲ್ಲಿ ಹೊತ್ತು ತಿರುಗಿದ ನಿನ್ನ ಆ ಒಂದು ಕಷ್ಟದ ಖುಣವನ್ನು ಕೂಡ ಈ ಮಗನು ತೀರಿಸಲಾರ ನಿನಗಿದೋ ನನ್ನ ನಮಸ್ಕಾರ" ಎಂದು ಹೇಳುತ್ತಾರೆ. ಪ್ರತಿಯೊಂದು ಹಂತದಲ್ಲೂ  ತಾಯಿ ವ್ಯಕ್ತಿತ್ವ, ಆದರ್ಶ, ಅನುಭವಗಳು ಅವಳಿಗೆ  ಅವಳೇ ಸಾಟಿ ಯಾಗಿರುತ್ತಾಳೆ.

ತಾಯೊಲವೆ ತಾಯೊಲವು ಈ ಲೋಕದೊಳಗೆ
ಕಡಲಿಗೆ ಕಡಲಲ್ಲದುಂಟೆ ಹೋಲಿಕೆಗೆ!
ಓ ಅಮೃತ ಪ್ರೇಮವೇ
ಓ ಮಾತೃ ರೂಪವೇ
ತೀರಲಾದ ತೃಷೆಗೆ ಮರುಜನ್ಮಬೇಕು
ಮತ್ತೋಮ್ಮೆ ಶಿಶುವಾಗಿ ನಾ ನಲಿಯಬೇಕು.

Wednesday, January 12, 2011

ನಾನೇಕೆ ಬರೆಯುತ್ತೇನೆ?

ನಾನೇಕೆ ಬರೆಯುತ್ತೇನೆ?
ಸುಮ್ಮನೆ ಯಾವುದೋ ಹಪಾಹಪಿಗೆ ಬಿದ್ದು ಇರುವುದನ್ನೆಲ್ಲ ಬಿಟ್ಟು ಇರದದರೆಡೆಗೆ ತುಡಿವುದೇ ಜೀವನ ಎಂದು ತಿಳಿದು ಈ ಬ್ಲಾಗನ್ನು ತೆರೆದಿದ್ದೇನೆ. ಈ ಬ್ಲಾಗ್ ಬರೆಯಲು ನಾನು ಅಷ್ಟೊಂದು ಓದಿಕೊಂಡಿರುವವನು ಅಲ್ಲ ಆದರೆ ಈ ಓದುವ ಮತ್ತು ಪುಸ್ತಕದ ಗೀಳನ್ನು ಹತ್ತಿಸಿದೆ ನನ್ನ ಗುರು ರವಿಬೆಳಗೆರೆ ಈ ನನ್ನ ಬ್ಲಾಗ್ ಅನ್ನು ಅರ್ಪಿಸುತ್ತಿದ್ದೇನೆ. ಯಾಕೆಂದರೆ ಓದು ಎಂತಹ ಮನುಷ್ಯನನ್ನು ಬದಲಾವಣೆಗೊಳಿಸುತ್ತದೆ. ಯಾವುದನ್ನು ಓದಬೇಕು? ಹೇಗೆ ಓದಬೇಕು ಎನ್ನುವ ತವಕಕ್ಕೆ ಬಿದ್ದಾಗ ಒಂದರ ಹಿಂದೆ ಒಂದು ಲೇಖಕರ ಪುಸ್ತಕಗಳನ್ನು ತೆಗೆದುಕೊಂಡು ಓದುವ ಗೀಳು ಹತ್ತಿತು. ಇದರಿಂದ ನನ್ನ ವೈಯುಕ್ತಿಕವಾದ ಮನೋಭಿಲಾಷೆಯು ಇತ್ತು ಇದರ ಹಿಂದೆ ಪರಿಚಯವಾದಂತಹ ಲೇಖಕರಾದ ರವಿಬೆಳಗೆರೆ,ಜಯಂತಕಾಯ್ಕಿಣಿ, ವಸುಧೇಂದ್ರ, ವಿವೇಕ ಶಾನಭಾಗ, ಜೋಗಿ, ಕುಂವೀ, ಜಿ.ಎನ್.ಮೋಹನ್, ಮಣಿಕಾಂತ್, ವಿಶ್ವೇಶ್ವರಭಟ್, ನಾಗತಿಹಳ್ಳಿ ಚಂದ್ರಶೇಖರ ಇಂದಿನ ತಲೆಮಾರಿನ ಪುಸ್ತಕಗಳನ್ನು ಒದಿ ಅರಗಿಸಿಕೊಳ್ಳುವ ಹೊತ್ತಿಗೆ ಈ ಹಿಂದಿನ ತಲೆಮಾರಿನ ಲೇಖಕರಾದ ಬೀಚಿ, ಕೈಲಾಸಂ, ರಾಶಿ, ಅ.ರಾ.ಮಿತ್ರ.ಎ.ಎನ್.ಮೂರ್ತಿರಾಯರು, ಕೆ.ಎಸ್.ನರಸಿಂಹಸ್ವಾಮಿ, ಎಸ್.ಎಲ್.ಭೈರಪ್ಪ, ಯಶವಂತಚಿತ್ತಾಲ, ಚದುರಂಗ, ಡಿ.ಆರ.ನಾಗರಾಜ್, ಅವರ ಕಾದಂಬರಿಗಳು,ಲೇಖನಗಳು, ಕವನಗಳು ಹೀಗೆ ಓದುವಾಗ ಕನ್ನಡ ಸಾಹಿತ್ಯದಲ್ಲಿ ಇಷ್ಟೊಂದು ಬರವಣಿಗೆ ಇರಬೇಕಾದರೆ ನಾವು ಬೇರೆ ಸಾಹಿತ್ಯವನ್ನು ಓದಿ ಅರಗಿಸಿಕೊಳ್ಳುವುದಕ್ಕಿಂತ ನಮ್ಮ ಸಾಹಿತ್ಯವನ್ನು ಓದು ಒಂದು ಅಭಿಲಾಷೆ ಶುರುವಾಗಿ ಇವತ್ತು ಬರಹ ರೂಪಕ್ಕೆ ಬಂದಿದೆ.
   
ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ?
ಮೂಡ ಕಟ್ಟಿತು ಹೇಗೆ?
ಹನಿಯೊಡೆದು ಕೆಳಗಿಳಿದು ನೆಲಕೆ ಹಸಿರು ಮೂಡಿತು ಹೇಗೆ?

ಎಂಬ ಜಿ.ಎಸ್.ಶಿವರುದ್ರಪ್ಪನವರ ಕವಿತೆ ಸಾಲುಗಳನ್ನು ನೆನಪಿಸಿಕೊಂಡರೆ ಜಗತ್ತಿನಲ್ಲಿ ಯಾವುದೇ ವಿಷಯದ ಬಗ್ಗೆ ಪ್ರೀತಿ ಇಲ್ಲದೆ ಎಲ್ಲೂ ಏನು ಸಂಭ್ರಮಿಸುವುದಿಲ್ಲ. ಹಾಗೆ ಪ್ರೀತಿಯಿಂದ ಕಲಿತಲ್ಲಿ ಎಲ್ಲವೋ ಸುಲಭ ಮತ್ತು ಸುಂದರ ಈ ಸಾಹಿತ್ಯದ ಬಗ್ಗೆ ನನ್ನ ಸ್ನೇಹಿತರಲ್ಲಿ ಚರ್ಚೆ ಹೊಸ ಹೊಸ ವಿಷಯಗಳ ಬಗ್ಗೆ ಹುಡುಕಾಟ ಇದರಿಂದ ತಿಳಿದಿಲ್ಲದಿರುವ ಎಷ್ಟೋ ವಿಷಯಗಳು ನಮಗೆ ಬೇರೆಯವರಿಂದ ಅಥವಾ ಸ್ನೇಹಿತರಿಂದ ತಿಳಿಯುವುದು. ಈ ವಿಷಯದಲ್ಲಿ ನನ್ನ ಪಾಲಿಗೆ ನನ್ನ ಸ್ನೇಹಿತರು ತುಂಬಾ ಒಳ್ಳೆಯ ಸಲಹೆಗಳನ್ನು ನೀಡಿ ತಮಗೆ ಗೊತ್ತಿರುವುದರ ಬಗ್ಗೆ ಹೆಚ್ಚಿನ ವಿಷಯದ ಬಗ್ಗೆ ಗಮನಹರಿಸಲು ಕಾರಣರಾದ ಅರುಣ್  ಪ್ರಸಾದ್, ವಿನಯಕುಮಾರ, ನಾಗೇಶ, ಆಗಾಗ್ಗೆ ಪುಸ್ತಕವನ್ನು ಸಾಲರೂಪದಲ್ಲಿ ನೀಡಿ ಸಾಹಿತ್ಯದ ಬಗ್ಗೆ ಹೆಚ್ಚಿನ ಪುಸ್ತಕಗಳನ್ನು ಸಂಗ್ರಹಿಸಲು ಕಾರಣನಾದ ಶಿವ ಇವರಿಗೆ ನಾನು ಕೃತಜ್ಞನಾಗಿದ್ದೇನೆ.

ಹಂಗೇರಿಯ ಬುಡಪೆಸ್ಟ್ ನಗರ

ಹಂಗೇರಿಯ ಬುಡಪೆಸ್ಟ್ ನಗರದ ಉದ್ಯಾನವನದಲ್ಲಿ
ಸುಖಕ್ಕೆ ಬೇಸತ್ತು
ಈವ್ ರೀತಿಯಲ್ಲಿ ಸೇಬು ಬಯಸಿದಳಂತೆ.
ನೀಲು
ಪಿ.ಲಂಕೇಶ್